ಚಿಕ್ಕಬಳ್ಳಾಪುರ: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವುದು ಹಾಗೂ ಕೃಷಿಗೆ ಅಗತ್ಯವಾದ ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಮಂಡಿಕಲ್ಲು ರೈತ ಉತ್ಪಾದಕರ ಕಂಪನಿ (ಎಫ್‌ಪಿಒ) ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿ ಸಾಧಿಸುತ್ತಾ ರೈತರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ದೀಪಶ್ರೀ ತಿಳಿಸಿದರು.
ತಾಲೂಕಿನ ಪೆರೇಸಂದ್ರದ ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಂಪನಿಯ ಐದನೇ ವರ್ಷದ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಉತ್ತಮ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಪ್ರಾಮಾಣಿಕವಾಗಿ ಸಹಕಾರ ನೀಡಲಿದೆ ಎಂದರು.
ಎಫ್‌ಪಿಒನ ಎಲ್ಲ ಷೇರುದಾರರು ಕಂಪನಿಯಲ್ಲಿ ಲಭ್ಯವಿರುವ ರಸಗೊಬ್ಬರ, ಕೃಷಿ ಪರಿಕರ ಹಾಗೂ ಇತರ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ರೈತರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿದಾರರಿಗೆ ಮಾರಾಟ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಿ.ಮುನಿರಾಜು ಮಾತನಾಡಿ, ಕಂಪನಿಯ ಷೇರುದಾರರಿಗೆ ಪ್ರತಿ ಷೇರಿನ ಆಧಾರದ ಮೇಲೆ ಇಕ್ವಿಟಿ ಅನುದಾನ ನೀಡಲಾಗಿದೆ. ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಒದಗಿಸಲಾಗುತ್ತಿದೆ. ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ತರಬೇತಿ, ಮಣ್ಣಿನ ಪರೀಕ್ಷೆ, ಬೆಳೆ ವಿಮೆ, ಕಿಸಾನ್ ಕ್ರೆಡಿಟ್ ಕಾರ್ಡ್, ಡ್ರೋನ್ ಮೂಲಕ ಔಷಧಿ ಸಿಂಪಡಣೆ ಹಾಗೂ ರಿಯಾಯಿತಿ ದರದಲ್ಲಿ ತಾಡ್ಪಾಲು ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಆಯ್ಕೆಯಾದ ಮಹಿಳಾ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ಒದಗಿಸಲಾಗುತ್ತಿದೆ. ಪ್ರತಿ ವರ್ಷ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳ ವೀಕ್ಷಿಸಲು ನೂರಕ್ಕೂ ಹೆಚ್ಚು ರೈತರಿಗೆ ಪ್ರವಾಸದ ವ್ಯವಸ್ಥೆ ಮಾಡಲಾಗುತ್ತಿದೆ. ಕಂಪನಿಯಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಖರೀದಿಸಿದ ರೈತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಎನ್.ದಯಾನಂದ, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಶ್ರೀಧರ್, ಉಪಾಧ್ಯಕ್ಷ ರಜತಾದ್ರಿ, ಸಂಸ್ಥಾಪಕ ನಿರ್ದೇಶಕ ವಿ. ಮಧುಚಂದ್ರ, ನಿರ್ದೇಶಕರಾದ ಬೊಮ್ಮಹಳ್ಳಿ ಬಿ.ಎಸ್. ನಾಗರಾಜ್, ಎಚ್.ಕೆ.ದೇವರಾಜ್, ಆರ್.ಎಸ್.ಅನಿಲ್, ಮಹಿಳಾ ನಿರ್ದೇಶಕರಾದ ಆರತಿ, ಹರ್ಷಿತಾ ಆರ್., ಮಂಜುಳಾ, ಭಾವನಾ, ಶೋಭಾ, ಕಂಪನಿಯ ಸಿಇಒ ಸಿ.ಎಂ. ಗಾಯತ್ರಿ, ಸಹಾಯಕ ಕೃಷಿ ನಿರ್ದೇಶಕ ಮುನಿರಾಜು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯ ಷೇರುದಾರರು ಉಪಸ್ಥಿತರಿದ್ದರು.