ಗುಡಿಬಂಡೆ: ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿಗೆ ಕೆಂಪೇಗೌಡ ಜಯಂತಿ ಆಚರಣೆಯ ಸಮಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ದೂರಿನ ಮೇರೆಗೆ ಶಾಸಕ ಪ್ರದೀಪ್ ಈಶ್ವರ (MLA Pradeep Eshwar) ವಿರುದ್ದ ಪ್ರಕರಣ ದಾಖಲಿಸಬೇಕು, ಇಲ್ಲವಾದಲ್ಲಿ ಒಕ್ಕಲಿಗ ಸಮುದಾಯದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ರೆಡ್ಡಿ ತಿಳಿಸಿದರು.
ಈ ಸಂಬಂಧ ಒಕ್ಕಲಿಗರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂನ್ 27ರಂದು ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಕಾರ್ಯಕ್ರಮಕ್ಕೆ ಹಾಜರಾಗದಂತೆ ಪ್ರದೀಪ್ ಈಶ್ವರ್ ಪೊಲೀಸರಿಗೆ ತಿಳಿಸಿದ್ದು, ಗೇಟ್ ಹಾಕಲಾಗಿತ್ತು.
ಇದನ್ನೂ ಓದಿ: MLA Pradeep Eshwar: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಮುಖಂಡರ ನಿಯೋಗ; ಪ್ರಚೋದನೆ, ಅಧಿಕಾರ ದುರ್ಬಳಕೆ ಆರೋಪ
ಬಳಿಕ ಸಂಸದ ಡಾ.ಕೆ.ಸುಧಾಕರ್(MP Dr K Sudhakar)ರವರಿಗೆ ದೂರು ನೀಡಲಾಗಿ, ಅವರು ಹೇಳಿದ ಬಳಿಕ ಗೇಟ್ ತೆಗೆದಿದ್ದರು. ಈ ವಿಚಾರ ಕೇಳಲು ಹೋದ ಸಮುದಾಯದ ಯುವಕರ ಮೇಲೆ ದೂರು ದಾಖಲಿಸಿದ್ದಾರೆ. ಶಾಸಕರ ಮೇಲೆ ಚಪ್ಪಲಿ ಎಸೆದಿದ್ದು ತಪ್ಪು, ಆದರೆ ಅವರನ್ನು ಪ್ರಚೋದಿ ಸುವಂತಹ ಕೆಲಸ ಮಾಡಿದ ಪ್ರದೀಪ್ ಈಶ್ವರ್ ವಿರುದ್ದ ಮಾತ್ರ ಪ್ರಕರಣ ದಾಖಲಾಗಿಲ್ಲ. ಇದು ಹಿಟ್ಲರ್ ಆಡಳಿತವೇ, ನ್ಯಾಯ ಎಲ್ಲರಿಗೂ ಒಂದೇ ಆಗಬೇಕು. ಪ್ರಚೋದನೆ ನೀಡಿದ ಕಾರಣ ದಿಂದ ಕೆಲ ಯುವಕರು ಆಕ್ರೋಷ ಹೊರಹಾಕಿ ಇಷ್ಟೆಲ್ಲಾ ಘಟನೆಗಳಿಗೆ ಕಾರಣವಾಯ್ತು. ಎನ್.ಡಿ.ಎ ಪಕ್ಷದ ಯುವಕರನ್ನು ಹೇಗೆ ಬಂಧಿಸಿದ್ದಾರೆಯೋ ಅದೇ ಮಾದರಿಯಲ್ಲಿ ಪ್ರದೀಪ್ ಈಶ್ವರ್ ರನ್ನು ಸಹ ಬಂಧನ ಮಾಡಬೇಕು. ಇಲ್ಲವಾದಲ್ಲಿ ಒಕ್ಕಲಿಗ ಸಂಘದ ವತಿಯಿಂದ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಕೇಂದ್ರ ಸಚಿವ ಕುಮಾರಸ್ವಾಮಿಯವರ ವಿರುದ್ದ ತಾವು ಸುಳ್ಳು ಆರೋಪಗಳನ್ನು ಹೊರಿಸಿದ ಕಾರಣದಿಂದ ಅವರ ಬೆಂಬಲಿಗರು ನಿಮ್ಮ ವಿರುದ್ದ ಘೋಷಣೆ ಕೂಗಿದ್ದಾರೆ. ನೀವು ಅವರ ಮೇಲೆ ನಿರಾಧಾರ ಹೇಳಿಕೆಗಳನ್ನು ನೀಡದೇ ಇದಿದ್ದರೇ ಇಷ್ಟೊಂದು ರಾದ್ದಾಂತವೇ ಆಗುತ್ತಿರಲಿಲ್ಲ. ಕುಮಾರಸ್ವಾಮಿಯವರ ಆಸ್ತಿ ಸೇರಿದಂತೆ ಇತರೆ ವಿಚಾರಗಳ ಕುರಿತು ನೀಡುತ್ತಿರುವ ಸುಳ್ಳು ಹೇಳಿಕೆಗಳನ್ನು ನಿಲ್ಲಿಸಿ, ರಾಜಕೀಯ ಪ್ರಭುದ್ದತೆ ಬೆಳೆಸಿಕೊಳ್ಳಬೇಕು ಎಂದರು.
ಬಳಿಕ ಸಮುದಾಯದ ಮುಖಂಡ ಮಧು ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್'ರವರಿಗೆ ರಾಜಕೀಯ ಜ್ಞಾನದ ಕೊರತೆ ತುಂಬಾನೆ ಹೆಚ್ಚಾಗಿದೆ. ಈ ಹಿಂದೆ ವಾಲ್ಮೀಕಿ, ಅಂಬೇಡ್ಕರ್, ಕೈವಾರ ತಾತಯ್ಯ ಸೇರಿದಂತೆ ಹಲವು ಜಯಂತಿಗಳಿಗೆ ಇದೇ ಶಾಸಕ ಪ್ರದೀಪ್ ಹಾಜರಾಗಿಲ್ಲ. ಅದಕ್ಕೂ ಮಿಗಿಲಾಗಿ ನಮ್ಮ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ ದಿನಾಚರಣೆಗೂ ಹಾಜರಾಗಿಲ್ಲ. ಆದರೆ ಕೆಂಪೇಗೌಡ ಜಯಂತಿಯಂದು ಗಲಾಟೆ ಸೃಷ್ಟಿಸಿ, ಹೈಕಮಾಂಡ್ ಗಮನ ಸೆಳೆಯುವ ಉದ್ದೇಶ ದಿಂದಲೇ ಇದೆಲ್ಲಾ ಮಾಡಿದ್ದಾರೆ.
ಇದೊಂದು ಪೂರ್ವ ನಿಯೋಜಿತ ಪ್ಲಾನ್ ಎಂದೇ ಹೇಳಬಹುದಾಗಿದೆ. ಅದರಲ್ಲೂ ಶಾಸಕರ ಮೇಲೆ ಚಪ್ಪಲಿ ಎಸೆದಿದ್ದು, ಅವರ ಕಾರ್ಯಕರ್ತನೇ ಎಂದೂ ಸಹ ಹೇಳಲಾಗುತ್ತಿದೆ. ತಾನು ಸಾಚ ಎಂದು ಹೇಳಿಕೊಳ್ಳುವ ಪ್ರದೀಪ್ ಈಶ್ವರ್ ಸಿ.ಎ ಸೈಟ್ ಗಳನ್ನು ಹೇಗೆ ಪಡೆದುಕೊಂಡ, ತನ್ನ ಟ್ರೈನಿಂಗ್ ಸೆಂಟರ್ ಗಳ ಮೂಲಕ ಅಷ್ಟೊಂದು ಹಣ ಏಕೆ ಪಡೆದುಕೊಳ್ಳುತ್ತಿದ್ದಾನೆ ಎಂಬುದನ್ನು ಬಹಿರಂಗ ಪಡಿಸಲಿ ಎಂದರು.
ಈ ಸಮಯದಲ್ಲಿ ಒಕ್ಕಲಿಗರ ಸಂಘದ ವೇಣುಗೋಪಾಲ್, ಹೆಚ್.ಎನ್.ಮಂಜುನಾಥರೆಡ್ಡಿ, ಮುರಳಿ, ಮಾಚಹಳ್ಳಿ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.