ಚಿಂತಾಮಣಿ: ನಗರದ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ನಗರಾಭಿ ವೃದ್ಧಿ ಚಿಂತಾಮಣಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 850 ಎಕರೆ ಪ್ರದೇಶದಲ್ಲಿ ನೂತನ ಟೌನ್ಶಿಪ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.
ಟೌನ್ಶಿಪ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಸರ್ವೇ ಕಾರ್ಯ ಈಗಾಗಲೇ ಪೂರ್ಣ ಗೊಂಡಿದ್ದು, ಯೋಜನೆಗೆ ಅಂತಿಮ ರೂಪ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಯೋಜನೆ ಕಾರ್ಯರೂಪಕ್ಕೆ ಬಂದರೆ ಚಿಂತಾಮಣಿ ನಗರದ ಅಭಿವೃದ್ಧಿಗೆ ಹೊಸ ವೇಗ ದೊರೆಯ ಲಿದೆ. ಸುಸಜ್ಜಿತ ವಸತಿ ಪ್ರದೇಶಗಳ ಜತೆಗೆ ಅಗತ್ಯ ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯ ಗಳನ್ನು ಸಮಗ್ರವಾಗಿ ಕಲ್ಪಿಸಲು ಸಾಧ್ಯವಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: Dr Yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ
ಯೋಜನೆಗೆ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸಹಕಾರ ಪಡೆದು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚಿಂತಾಮಣಿಯನ್ನು ಯೋಜಿತ ನಗರವನ್ನಾಗಿ ಅಭಿವೃದ್ಧಿಪಡಿಸಿ, ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಜನರಿಗೆ ಉತ್ತಮ ನಾಗರಿಕ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಡಾ. ಎಂ.ಸಿ. ಸುಧಾಕರ್, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ರೆಡ್ಡಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತ ಶಿವಾನಂದ ಕಪಶಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಹಾಗೂ ಆಯುಕ್ತಾಲಯದ ನಿರ್ದೇಶಕ ತಿಪ್ಪೇಸ್ವಾಮಿ ಎನ್.ಕೆ. ಉಪಸ್ಥಿತರಿದ್ದರು.