ಚಿಕ್ಕಬಳ್ಳಾಪುರ : ದ್ವಿಚಕ್ರವಾಹನ ಸವಾರರು ನಿಮ್ಮ ಕುಟುಂಬದ ನೆಮ್ಮದಿ ಮತ್ತು ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ತಪ್ಪದೇ ಹೆಲ್ಮೆಟ್ ಧರಿಸಿ ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಸಲಹೆ ನೀಡಿದರು.
ನಗರದ ಕೋರ್ಟ್ ರಸ್ತೆಯಲ್ಲಿ ಬುಧವಾರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಸಾರ್ವಜನಿಕರಿಗೆ ಸಂಚಾರ ನಿಯಮಗಳು ಹಾಗೂ ಕಡ್ಡಾಯ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದರು.
ದ್ವಿಚಕ್ರ ವಾಹನ ಸವಾರರಿಗೆ ಜೀವ ರಕ್ಷಕ ಸಾಧನವಾದ ಹೆಲ್ಮೆಟ್‌ನ ಮಹತ್ವವನ್ನು ತಿಳಿಸಿ ಮಾತನಾ ಡಿದ ಅವರು ಅಪಘಾತಗಳಲ್ಲಿ ಗಂಭೀರ ಗಾಯಗಳನ್ನು ತಡೆಯಲು ಮತ್ತು ಪ್ರಾಣ ರಕ್ಷಿಸಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಮಾಡಲಾಗಿದೆ, ಇದರಲ್ಲಿ ಪೊಲೀಸ್, ಕಾನೂನು ಇಲಾಖೆಗಳು, ಜಿಲ್ಲಾಡಳಿತ ಮತ್ತು ನಾಗರಿಕರು ಭಾಗವಹಿಸಿ ಅರಿವು ಮೂಡಿಸಿದ್ದಾರೆ. ಇದೀಗ ಕಾರ್ಯನಿರತ ಪತ್ರಕರ್ತರ ಸಂಘವು ಕೈಜೋಡಿಸಿರು ವುದು ಸಂತೋಷದ ವಿಚಾರವಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಗುರುಗಳ ಸ್ಮರಣೆ, ಸ್ನೇಹಿತರ ಸಂಗಮ: ನಂದಿಯಲ್ಲಿ ಗುರುವಂದನ ಕಾರ್ಯಕ್ರಮ
ಜೀವ ರಕ್ಷಕ: ಹೆಲ್ಮೆಟ್ ತಲೆಗೆ ಆಗುವ ಗಾಯಗಳನ್ನು ಕಡಿಮೆ ಮಾಡುತ್ತದೆ, ಅಪಘಾತಗಳಲ್ಲಿ ಸಾವಿನ ಅಪಾಯವನ್ನು ಶೇ. 42ರಷ್ಟು ಮತ್ತು ಗಾಯಗಳಾಗುವ ಸಾಧ್ಯತೆಯನ್ನು ಶೇ. 69ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ ಹೀಗಾಗಿ ಹಲವು ಜಿಲ್ಲೆಗಳಲ್ಲಿ ಹೆಲ್ಮೆಟ್ ಧರಿಸು ವುದು ಕಡ್ಡಾಯವಾಗಿದೆ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಕೆಲವು ಕಡೆ ಸರ್ಕಾರಿ ಕಚೇರಿಗಳಿಗೂ ಪ್ರವೇಶ ನಿಷೇಧಿಸಲಾಗಿದೆ ನಮ್ಮ ಜಿಲ್ಲೆಯಲ್ಲಿಯೂ ಇದೆ ನಿಯಮ ಜಾರಿಯಲ್ಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ ಹೆಲ್ಮೆಟ್ ಕೇವಲ ನಿಮ್ಮ ಜೀವ ವನ್ನು ಮಾತ್ರವಲ್ಲ, ನಿಮ್ಮ ಕುಟುಂಬದ ಸಂತೋಷವನ್ನೂ ಕಾಪಾಡುತ್ತದೆ. ಇದನ್ನು ಮನಗಂಡು ಪ್ರತಿಯೊಬ್ಬರು ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳನ್ನು ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ ನಮ್ಮ ಸಂಘವು ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಮುಂದುವರೆದ ಭಾಗವಾಗಿ ಇಂದು ನಗರದಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಹೆಲ್ಮೆಟ್ ಧರಿಸುವುದು, ವಾಹನ ಕಾಯ್ದೆಯಂತೆ ದಾಖಲೆಗಳನ್ನು ಹೊಂದುವುದು, ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಪೊಲೀಸರು ಒತ್ತಿ ಹೇಳುತ್ತಾರೆ. ನಿಯಮ ಪಾಲಿಸದವರಿಗೆ ದಂಡ ವಿಧಿಸುವುದು ಸಹಜ. ಇದಕ್ಕೆ ಆಸ್ಪದ ಕೊಡದಂತೆ ಕಾನೂನನ್ನು ಪಾಲಿಸೋಣ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜಪ್ಪ ಮಾತನಾಡಿ "ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದರು ನಾಗರೀಕರಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿದಂತೆ ಕಾಣುತ್ತಿಲ್ಲ. ಇದನ್ನು ಮನಗಂಡು ನಮ್ಮ ಸಂಘವು ಬೈಕ್ ರ್ಯಾಲಿಯ ಮೂಲಕ ನಗರದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿತ್ತು. ಜಿಲ್ಲೆಯ ಕಾರ್ಯದ ಪತ್ರಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ ಎಸ್ ನಾಯಕ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಖಜಾಂಚಿ ಬಿ.ಕೆ.ಮುದ್ದು ಕೃಷ್ಣ, ಸಂಚಾರ ಠಾಣೆ ಪಿಎಸ್‌ಐ ಮಂಜುಳ, ನಗರ ಠಾಣೆ ಪಿಎಸ್‌ಐ ಅಮರ್, ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮುಬಾಷಿರ್ ಅಹಮದ್, ಕಾರ್ಯದರ್ಶಿ ಎಂ.ಆನಂದ್, ಡಿ.ಜೆ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರ ಸೊಮಶೇಖರ್, ಕೆನಡಿ, ಸಿ.ಬಾಲಕೃಷ್ಣ, ಟಿ.ಎಸ್.ನಾಗೇಂದ್ರ ಬಾಬು, ಜಿಲಾನಿ, ದಯಾಸಾಗರ್, ಸೊ.ಸು.ನಾಗೇಂದ್ರನಾಥ್, ಮುನಿರಾಜು ಎಂ ಅರಿಕೆರೆ ಮಲ್ಲಪ್ಪ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪತ್ರಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೈಕ್ ರ್ಯಾಲಿಯಲ್ಲಿ ಪತ್ರಕರ್ತರೊಂದಿಗೆ ನಗರದ ಕನ್ನಡಪರ, ರೈತರ ಸಂಘಟನೆಗಳ ಮುಖಂಡರು, ನಾಯಕರು ಜೊತೆಯಾಗಿದ್ದು ವಿಶೇಷವಾಗಿತ್ತು.
**
ಗಮನ ಸೆಳೆದ ಪತ್ರಕರ್ತರ ಬೈಕ್ ರ್ಯಾಲಿ
ಪತ್ರಕರ್ತರ ಭವನದಿಂದ ಆರಂಭಗೊಂಡ ಹೆಲ್ಮೆಟ್ ಕಡ್ಡಾಯ ಕುರಿತ ಅರಿವು ಜಾಥಾ ಬೈಕ್ ರ್ಯಾಲಿ ಅಂಬೇಡ್ಕರ್ ವೃತ್ತ, ಬಿ.ಬಿ ರಸ್ತೆಯ ಮೂಲಕ ಭುವನೇಶ್ವರಿ ವೃತ್ತ, ಬಜಾರ್ ರಸ್ತೆ, ಗಂಗಮ್ಮ ಗುಡಿರಸ್ತೆಯ ಮೂಲಕ ಎಂಜಿ ರಸ್ತೆ ನಂತರ ಎಪಿಎಂಸಿ ಮಾರುಕಟ್ಟೆವರೆಗೂ ತೆರಳಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಘೋಷಣೆಗಳ ಮೂಲಕ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆಯಲಾಯಿತು.