ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಅವರ ತಂದೆ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ತಮ್ಮ 91ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವ ಮೂಲಕ ಜನಪ್ರೀತಿಗೆ ಪಾತ್ರವಾಗಿದ್ದು ಭೂರೀ ಭೋಜನದ ಜತೆಗೆ ಹಾರ ತುರಾಯಿ ಶುಭಾಶಯಗಳ ವಿನಿಮಯ ಜೋರಾಗಿತ್ತು.
ತಾಲೂಕಿನ ಪೆರೇಸಂದ್ರದ ಗ್ರಾಮದಲ್ಲಿ ಒಂದು ರೀತಿಯ ಅಘೋಷಿತ ಹಬ್ಬದ ವಾತಾವರಣ ಏರ್ಪಟ್ಟಿತ್ತು.ಸಂಸದರ ಸ್ವಗೃಹವನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದು ನವ ವಧುವಿನಂತೆ ಕಂಗೊಳಿಸಿತ್ತು.
ಇದನ್ನೂ ಓದಿ: Dr M C Sudhakar: ರಾಮಕುಂಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಬಸ್ ಟರ್ಮಿನಲ್ ಪರಿಶೀಲನೆ ನಡೆಸಿದ ಸಚಿವ ಡಾ.ಎಂ.ಸಿ ಸುಧಾಕರ್
50 ವರ್ಷಗಳಷ್ಟು ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಮುತ್ಸದ್ದಿ ರಾಜಕಾರಣಿ ಪಿ.ಎನ್. ಕೇಶವರೆಡ್ಡಿ ಜನ್ಮದಿನದ ಅಂಗವಾಗಿ ಬೆಳಗಿನಿಂದಲೇ ಅಭಿಮಾನಿಗಳು ಕಾರ್ಯಕರ್ತರು, ಬಂದು ಬಳಗವೇ ನೆರೆದಿದ್ದು ಬಂದವರಿಗೆ ಪುಷ್ಕಳ ಭೋಜನದ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು, ಊಟ ಸವಿದ ಪ್ರತಿಯೊಬ್ಬರೂ ಶುಭ ಹಾರೈಸಿ ಮುನ್ನಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಪಕ್ಷಾತೀತವಾಗಿ ಮುಖಂಡರು, ಅಭಿಮಾನಿಗಳು, ಕಾರ್ಯ ಕರ್ತರು ಆಗಮಿಸಿ ಹಾರ ತುರಾರಿ ಪೇಟ ಶಾಲು ಹೊದಿಸಿ ಶುಭ ಕೋರಿದ್ದು ವಿಶೇಷವಾಗಿತ್ತು.
ಅಪಾರ ಅಭಿಮಾನಿಗಳ ಸಾಕ್ಷಿಯಲ್ಲಿ ಸಂತೋಷದಿಂದ ಹುಟ್ಟುಹಬ್ಬ ಆಚರಿಸಿಕೊಂಡ ೯೧ರ ಹರೆಯದ ಚಿರಯೌವ್ವನಿಗ ಪಿ.ಎನ್.ಕೇಶವರೆಡ್ಡಿ 91 ಕೆ.ಜಿ ತೂಕದ ಬೃಹತ್ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಸ್ತುಬದ್ಧ ಜೀವನ, ನಿತ್ಯ ವ್ಯಾಯಾಮ, ಪಥ್ಯಾಹಾರ,ಭಗವತ್ ಚಿಂತನೆಯೇ ನನ್ನ 91ನೇ ವಯಸ್ಸಿನ ಗುಟ್ಟು. ನನ್ನ 50 ವರ್ಷದ ರಾಜಕೀಯ ಅನುಭವದಲ್ಲಿ ಏನೇನು ನೋಡಬೇಕೋ ಅದನ್ನೆಲ್ಲಾ ನೋಡಿದ್ದೇನೆ. ನನ್ನ ಮಕ್ಕಳ ಬದುಕು ಕೂಡ ಯಶಸ್ವಿಯಾಗಿಯೇ ಸಾಗಿದೆ. ಇದೇ ನನ್ನ ಜೀವನದ ಗುಟ್ಟಾಗಿದೆ ಎಂದರು.
ನನ್ನ ಹುಟ್ಟು ಹಬ್ಬದ ಅಂಗವಾಗಿ ಶುಭ ಕೋರಲು ಆಗಮಿಸಿರುವ ಸಾವಿರಾರು ಮಂದಿಯೇ ಇಂದು ನನ್ನ ಬದುಕು ಸಾರ್ಥಕ ಎಂಬುದನ್ನು ಸಾರುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಕೂಡ ಅವರ ಬತ್ತದ ಪ್ರೀತಿ ಕಂಡು ಹೃದಯ ತುಂಬಿ ಬಂದಿದೆ. ಅಭಿಮಾನಿಗಳು, ಹಿತೈಷಿಗಳು, ಬಂದು ಬಳಗ, ಆಪ್ತೇಷ್ಟರು ನಾವು ಸದಾ ನಿಮ್ಮೊಂದಿಗೆ ಎಂಬ ಸಂದೇಶವನ್ನು ಸಾರಿರುವುದು ನೋಡಿದರೆ ಶತಮಾನೋತ್ಸವ ಆಚರಿಸಿಕೊಂಡಷ್ಟೇ ತೃಪ್ತಿಯಾಗಿದೆ. ಭಗವಂತನ ಆಶೀರ್ವಾದ ಸದಾಕಾಲ ನಮ್ಮನ್ನು ನಂಬಿದವರ ಮೇಲೆಯೂ ಇರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಆಯೋಜಕ ಹರಿಸ್ಥಳ ಗಿರೀಶ್ ಮಾತನಾಡಿ, ನಮ್ಮ ದೊಡ್ಡಪ್ಪ ಅವರ ಹುಟ್ಟು ಹಬ್ಬವನ್ನು ವೈಭವದಿಂದ ಆಚರಿಸಿಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ಹೀಗಾಗಿಯೇ ಎಲ್ಲಿಯೂ ಕೂಡ ಲೋಪವಾಗದಂತೆ ನೋಡಿಕೊಳ್ಳಲಾಗಿದೆ. ಅವರ ಅನುಭವ ಜಿಲ್ಲೆಯ ರಾಜಕಾರಣಕ್ಕೆ ಬೇಕಿದೆ. 50 ವರ್ಷದ ಅನುಭವ ಅಸಾಮಾನ್ಯ. 91ರ ಇಳಿವಯಸ್ಸಿನಲ್ಲಿಯೂ ಕೂಡ ಕ್ಷೇತ್ರದ ಪ್ರತಿ ಗ್ರಾಮದ ಮುಖಂಡರ ಹೆಸರನ್ನು ಹಿಡಿದು ಕರೆಯುವಷ್ಟು ಅವರ ನೆನಪಿನ ಶಕ್ತಿ ಅಗಾದವಾಗಿದೆ. ಇವರ ನೆರಳಿನಲ್ಲಿ ನಾವೆಲ್ಲಾ ಇದ್ದೇವಲ್ಲಾ ಎಂಬುದೇ ನಮ್ಮ ಪುಣ್ಯ. ಪರೇಸಂದ್ರ ಭಾಗದ ನೈಜವಾದ ಹುಲಿ ನಮ್ಮ ದೊಡ್ಡಪ್ಪ ಎಂದರೆ ತಪ್ಪಾಗುವುದಿಲ್ಲ ಎಂದರು.
ಈ ವೇಳೆ ಚಿಕ್ಕಗೆರಿಗರೆಡ್ಡಿ, ಕೆ.ವಿ.ನಾಗರಾಜ್,ಕೊಳವನಹಳ್ಳಿ ಎಸ್.ಕೆ.ಎಲ್, ದ್ಯಾವಣ್ಣ,ಎಸ್.ಆರ್.ಎಸ್ ದೇವರಾಜ್, ಹಾಲು ಬೈರೇಗೌಡ, ಶ್ರೀನಿವಾಸ್ ಸೇರಿದಂತೆ ಪಕ್ಷಾತೀತವಾಗಿ ಸಾವಿರಾರು ಮಂದಿ ಹಾಜರಿದ್ದರು.