ಚಿಕ್ಕಬಳ್ಳಾಪುರ: ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ ಹಾಗೂ ದೇಶಭಕ್ತಿಯ ಘೋಷಣೆಗಳಲ್ಲ; ಅದರ ಹಿಂದೆ ಕೋಟ್ಯಂತರ ಭಾರತೀಯರ ತ್ಯಾಗ, ಬಲಿದಾನ ಮತ್ತು ಹೋರಾಟವಿದೆ ಎಂಬ ಸಂದೇಶವನ್ನು ಎಳೆಯ ಮಕ್ಕಳಿಂದ ಹೈಸ್ಕೂಲ್ ವಿದ್ಯಾರ್ಥಿ ಗಳವರೆಗೆ ಮನಮುಟ್ಟುವಂತೆ ಕಟ್ಟಿಕೊಟ್ಟ ಅಪರೂಪದ ದೃಶ್ಯರೂಪಕ ‘ಭಾರತ ದರ್ಶನ’(Bharat Darshan) ಚಿಕ್ಕಬಳ್ಳಾಪುರದ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಗಮನ ಸೆಳೆಯಿತು.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಡಿನ ಬದುಕಿನಿಂದ ನಾಗರಿಕತೆಯ ವಿಕಾಸ, ಬ್ರಿಟಿಷರ ಆಗಮನ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾನಂತರದ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ ಪ್ರಗತಿ ಹಾಗೂ ಜೆನ್‌ಜಿ ಪೀಳಿಗೆ ಯ ಹೊಣೆಗಾರಿಕೆಯವರೆಗೆ ಭಾರತದ ಪಯಣವನ್ನು ವಿದ್ಯಾರ್ಥಿಗಳು ವಿಭಿನ್ನ ದೃಶ್ಯಗಳ ಮೂಲಕ ಅನಾವರಣಗೊಳಿಸಿದರು.
ಇದನ್ನೂ ಓದಿ: Chikkaballapur News: ಆ.14ರಂದು ಧಾರ್ಮಿಕ ಸಂಘಟನೆಗಳ ಮುಖಂಡರಿಂದ ಸುದ್ದಿಗೋಷ್ಠಿ
ಮಾನವ ನಾಗರಿಕತೆಯ ಆರಂಭವನ್ನು ಮಕ್ಕಳ ಅಭಿನಯದ ಮೂಲಕ ಮನೋಜ್ಞವಾಗಿ ರೂಪಿಸಲಾಗಿತ್ತು. ಗ್ರಾಮೀಣ ಭಾರತದ ಬದುಕು, ಅಂಗಡಿ, ಕೈತೋಟ, ಸಂತೆ, ದೇವಾಲಯ ಹಾಗೂ ಸರ್ವಧರ್ಮ ಸಮನ್ವಯದ ಸಂದೇಶವನ್ನು ಯುಕೆಜಿ ಮಕ್ಕಳು ಮುಗ್ಧ ಅಭಿನಯ ದ ಮೂಲಕ ಕಟ್ಟಿಕೊಟ್ಟರು. ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ ಎಂಬ ಸಂದೇಶ ವೂ ಮಕ್ಕಳ ವೇಷಭೂಷಣದ ಮೂಲಕ ಮೂಡಿಬಂತು.
ಬ್ರಿಟಿಷರ ದಾಸ್ಯ ಹಾಗೂ ಸ್ವಾತಂತ್ರ್ಯಕ್ಕಾಗಿ ಭಾರತೀಯರು ನಡೆಸಿದ ಹೋರಾಟ, ತ್ಯಾಗ ಮತ್ತು ಬಲಿದಾನದ ಚಿತ್ರಣವನ್ನು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು. ಸ್ವಾತಂತ್ರ್ಯ ಉಚಿತವಾಗಿ ದೊರೆತ ಕೊಡುಗೆಯಲ್ಲ; ಅದು ತ್ಯಾಗ-ಬಲಿದಾನದ ಫಲ ಎಂಬ ಸಂದೇಶ ಪೋಷಕರ ಮನಮುಟ್ಟಿತು.
ಸ್ವಾತಂತ್ರ್ಯಾನಂತರ ಭಾರತ ಸಾಧಿಸಿರುವ ಪ್ರಗತಿಯನ್ನೂ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಕಲೆ, ಸಂಗೀತ, ಆಹಾರ ಮತ್ತು ಸಂಸ್ಕೃತಿಯ ಮಾದರಿಗಳ ಮೂಲಕ ಪ್ರದರ್ಶಿಸಿದರು. ಮತ್ತೊಂದೆಡೆ, ಇಂದಿನ ಜೆನ್‌ಜಿ ಪೀಳಿಗೆಯ ಜೀವನದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳ ಬಳಕೆಯಿಂದ ದೊರೆಯುತ್ತಿರುವ ಅವಕಾಶಗಳ ಜತೆಗೆ ಅತಿಯಾದ ಅವಲಂಬನೆಯಿಂದ ಎದುರಾಗಬಹುದಾದ ಸವಾಲುಗಳನ್ನೂ ರೂಪಕದಲ್ಲಿ ಬಿಂಬಿಸ ಲಾಯಿತು.
“ಇಂದು ಭಾರತ ಯಾವ ಪಥದಲ್ಲಿದೆ?” ಎಂಬ ಪ್ರಶ್ನೆಯನ್ನು ಮುಂದಿಟ್ಟ ವಿದ್ಯಾರ್ಥಿಗಳು, ಯುವಶಕ್ತಿಯು ತಂತ್ರಜ್ಞಾನ ಮತ್ತು ಜ್ಞಾನವನ್ನು ದೇಶದ ಪ್ರಗತಿಗೆ ಬಳಸಿಕೊಂಡರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂಬ ಸಂದೇಶ ಸಾರಿದರು. ಸ್ವಾತಂತ್ರ್ಯದ ಮೌಲ್ಯವನ್ನು ಮರೆತು ಸ್ವಚ್ಛಂದ ಬದುಕು, ಸಾಮಾಜಿಕ ಹೊಣೆಗಾರಿಕೆಯ ಕೊರತೆ ಹಾಗೂ ವ್ಯವಸ್ಥೆ ಯಲ್ಲಿನ ಲೋಪಗಳ ಬಗ್ಗೆ ಆತ್ಮಾವಲೋಕನಕ್ಕೂ ರೂಪಕ ಪ್ರೇರೇಪಿಸಿತು.
ಈ ವೇಳೆ ಮಾತನಾಡಿದ ಶಾಲೆಯ ಕಾರ್ಯದರ್ಶಿ ಶೈಲಜಾ ವೆಂಕಟೇಶ್, ದೇಶ ಸ್ವಾತಂತ್ರ್ಯ ಪಡೆದು 80 ವರ್ಷಗಳಾಗಿದ್ದು, ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟ ದ ಸಾಧನೆ ಮಾಡಿದೆ. ಇಂದಿನ ಯುವತಲೆಮಾರಿಗೆ ಸ್ವಾತಂತ್ರ್ಯದ ಹಿಂದಿನ ತ್ಯಾಗ-ಬಲಿದಾನ ದ ಮಹತ್ವ ತಿಳಿಸುವ ಉದ್ದೇಶದಿಂದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರ ದಲ್ಲಿ ‘ಭಾರತ ದರ್ಶನ’ ರೂಪಿಸಲಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎನ್.ವೆಂಕಟೇಶ್ ಅವರ ಮಾರ್ಗದರ್ಶನ ಹಾಗೂ ಶಿಕ್ಷಕ-ಶಿಕ್ಷಕಿಯರ ಸಮರ್ಪಣಾ ಮನೋಭಾವದಿಂದ ಮೂಡಿಬಂದ ರೂಪಕವು “ತ್ಯಾಗದಿಂದ ಸ್ವಾತಂತ್ರ್ಯ, ಸ್ವಾತಂತ್ರ್ಯದಿಂದ ಅಭಿವೃದ್ಧಿ, ಅಭಿವೃದ್ಧಿಯಿಂದ ಜವಾಬ್ದಾರಿ, ಜವಾಬ್ದಾರಿಯಿಂದ ಬಲಿಷ್ಠ ಭಾರತ” ಎಂಬ ಸಂದೇಶದೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮವು ಪೋಷಕರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು.