ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಗೌರಿಬಿದನೂರು ರಾಜ್ಯ ಮಟ್ಟದಲ್ಲಿ ಮುಂಚೂಣಿ; 2.14 ಲಕ್ಷ ಮತದಾರರಲ್ಲಿ 1.65 ಲಕ್ಷ ಮಾಹಿತಿ ಸಂಗ್ರಹ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು-214210 ಮತದಾರರು ಇದ್ದು, ಇದುವರೆಗೆ 165007 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಪರಿಷ್ಕರಣೆ ಕಾರ್ಯ ಯಶಸ್ವಿ ಯಾಗಿ ನಡೆಯುತ್ತಿದ್ದು, ಈ ಪ್ರಗತಿಯಲ್ಲಿ ಗೌರಿಬಿದನೂರು ತಾಲೂಕು ರಾಜ್ಯ ಮಟ್ಟದಲ್ಲೇ ಮುಂಚೂಣಿಯಲ್ಲಿದೆ

ಗೌರಿಬಿದನೂರು: ತಾಲೂಕಿನಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ(SIR) ಕಾರ್ಯಕ್ರಮದ ಅವಧಿಯನ್ನು ಚುನಾವಣಾ ಆಯೋಗ ಆಗಸ್ಟ್ 8ರವರೆಗೆ ವಿಸ್ತರಿಸಿದ್ದು, ಈ ಅವಧಿ ಯಲ್ಲಿ ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಪರಿಶೀಲನೆ ಕಾರ್ಯ ಪೂರ್ಣಗೊಳಿಸಿಕೊಳ್ಳುವಂತೆ ತಾಲೂಕು ಮತದಾರರ ನೋಂದಣಾಧಿಕಾರಿ ಶಿವಲಿಂಗಯ್ಯ ಮನವಿ ಮಾಡಿದ್ದಾರೆ.

ನಗರದ ತಾಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು-214210 ಮತದಾರರು ಇದ್ದು, ಇದುವರೆಗೆ 165007 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಪ್ರಗತಿಯಲ್ಲಿ ಗೌರಿಬಿದನೂರು ತಾಲೂಕು ರಾಜ್ಯ ಮಟ್ಟದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಪ್ರಸ್ತುತ ಕ್ಷೇತ್ರದಲ್ಲಿ **2013 ಎಎಸ್‌ಡಿ (ಗೈರುಹಾಜರಿ, ಸ್ಥಳಾಂತರ ಹಾಗೂ ಮರಣ ಹೊಂದಿದ) ಮತದಾರರನ್ನು ಗುರುತಿಸಿ ಡಿಜಿಟಲೀಕರಣಗೊಳಿಸಲಾಗಿದೆ ಎಂದರು.

ಇದನ್ನೂ ಓದಿ: Gauribidanur News: ಕುಡುಮಲಕುಂಟೆಯಲ್ಲಿ ಔಷಧಿ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ವಿಲೇವಾರಿ ಆರೋಪ: ಆರೋಗ್ಯ, ಪರಿಸರಕ್ಕೆ ಅಪಾಯದ ಆತಂಕ

ತಹಸೀಲ್ದಾರ್ ಅರವಿಂದ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ 'ರೆಡ್ ಮಾರ್ಕ್' ಇದ್ದರೆ ಮಾತ್ರ ಆ ಮತದಾರರ ಹೆಸರನ್ನು ಕೈಬಿಡಲಾಗುವುದಿಲ್ಲ. ದಾಖಲೆಗಳ ಸಮಗ್ರ ಪರಿಶೀಲನೆಯ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ.80 ಹಾಗೂ ನಗರ ಪ್ರದೇಶದಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ ಮತದಾರರನ್ನು ಸಂಪರ್ಕಿಸಲು ಆಗುತ್ತಿರುವ ತೊಂದರೆಯಿಂದ ಕಾರ್ಯ ಸ್ವಲ್ಪ ನಿಧಾನಗೊಂಡಿದ್ದು, ಇದನ್ನು ವೇಗಗೊಳಿಸಲು ನಗರಸಭೆಯಿಂದ ಮೂರು ಪ್ರಚಾರ ವಾಹನಗಳನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ಮೂರು ಗ್ರಾಮ ಪಂಚಾಯಿತಿಗಳಿಗೆ ಒಂದ ರಂತೆ ವಾಹನಗಳನ್ನು ನಿಯೋಜಿಸಿ, 'ಟಾಂ-ಟಾಂ' (ಡಂಗುರ) ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪೌರಾಯುಕ್ತ ರಮೇಶ್ ಕೆ.ಜಿ. ಮಾತನಾಡಿ, ನಗರ ಪ್ರದೇಶದಲ್ಲಿ ಸುಮಾರು ಶೇ.10ರಷ್ಟು ಎಎಸ್‌ಡಿ ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. ರಾಜ್ಯ ಮಟ್ಟದ ಮಾರ್ಗಸೂಚಿಯಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.10ರಿಂದ 12ರಷ್ಟು ಇಂತಹ ಮತದಾರರು ಇರಬಹುದಾಗಿದ್ದು, ಗೌರಿಬಿದನೂರಿನಲ್ಲಿ ಸುಮಾರು 25 ಸಾವಿರ ಎಎಸ್‌ಡಿ ಮತದಾರರು ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಅಥವಾ ದ್ವಿಪ್ರತಿಯಾಗಿ ಹೆಸರು ನೋಂದಾಯಿಸಿಕೊಂಡಿರುವವರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದ್ದು, ಸ್ವಯಂ ಘೋಷಣಾ ಪತ್ರದ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ. ಇಒ ಜಿ.ಕೆ. ಹೊನ್ನಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.