ಚಿಕ್ಕಬಳ್ಳಾಪುರ: ಮಾದಿಗ ಸಮುದಾಯದ ಮುತ್ಸದ್ಧಿ ರಾಜಕಾರಣಿ ಕೆ.ಹೆಚ್.ಮುನಿಯಪ್ಪ( K.H. Muniyappa) ಅವರಿಗೆ ಪಕ್ಷನಿಷ್ಟೆ ಹಾಗೂ ಹಿರಿತನವನ್ನು ಪರಿಗಣಿಸಿ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ಮಾದಾರ ಸಮುದಾಯವು 2028ರಲ್ಲಿ ಪಕ್ಷವನ್ನು ಬೆಂಬಲಿಸುವ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಬಾಲಕುಂಟಹಳ್ಳಿ ಗಂಗಾಧರ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾದಾರ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ ನಮ್ಮ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಚ್ಚೆತ್ತುಕೊಂಡು ಈಗಿರುವ ಆಹಾರ ಮತ್ತು ನಾಗರೀಕ ಸರಬರಾಜು ಖಾತೆಯ ಬದಲಿಗೆ ಸಮಾಜ ಕಲ್ಯಾಣ ಅಥವಾ ಕಂದಾಯ ಇಲಾಖೆಯ ಜವಾಬ್ದಾರಿ ನೀಡುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ಈ ಹಿಂದೆ ನೀಡಿದ್ದ ಆಹಾರ ಖಾತೆಯನ್ನೇ ನೀಡುವ ಮೂಲಕ ಸಮುದಾಯದ ಶಕ್ತಿಯನ್ನು ಕಡೆಗಣಿಸಿದ್ದಾರೆ.
ಇದನ್ನೂ ಓದಿ: Chikkaballapur News: ಐದು ಲಕ್ಷ ಸಸಿ ಬೆಳೆಸಲು ಸಹಕಾರಕ್ಕೆ ನ್ಯಾ.ಹಂಚಾಟೆ ಸಂಜೀವಕುಮಾರ ಮನವಿ
ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾರಣ ಅವರನ್ನು ವ್ಯವಸ್ಥಿತವಾಗಿ ಕಡೆಗಣಿಸ ಲಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು. ಇದೇ ನಿಜವಾಗಿದ್ದಲ್ಲಿ ಖಾತೆ ಬದಲಾವಣೆ ಮಾಡದಿದ್ದಲ್ಲಿ 2028ಕ್ಕೆ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಬಗ್ಗೆ ಆಲೋಚಿಸ ಬೇಕಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ವಿಶ್ವಾಸ ಇದೆ. ನಮ್ಮ ಸಮುದಾಯ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಬೇಕಾದರೆ, ಕೆ.ಹೆಚ್.ಮುನಿಯಪ್ಪ ಅವರಿಗೆ ಉತ್ತಮ ಖಾತೆ ಕೊಡಬೇಕು ಎಂದು ಒತ್ತಾಯಿಸಿದರು.
ನಮ್ಮ ಸಹೋದರ ಸಮುದಾಯ ಬಲಗೈನ ಇಬ್ಬರಿಗೆ ಅವಕಾಶ ನೀಡಲಾಗಿದೆ.ಅದರಂತೆ ಪರಿಶಿಷ್ಟ ಜಾತಿಯಲ್ಲಿ ಬರುವ ಎಡಗೈ ಸಮುದಾಯಕ್ಕೂ 3 ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ದರು.
ಮಾದಾರ ಮಹಾಸಭಾದ ಪಟ್ರೇನಹಳ್ಳಿ ಕೃಷ್ಣ ಮಾತನಾಡಿ, ನಮ್ಮ ನಾಯಕ ಕೆ.ಹೆಚ್.ಮುನಿಯಪ್ಪ ಅವರಿಗೆ ನೂತನ ಮುಖ್ಯಮಂತ್ರಿಗಳು ಉತ್ತಮ ಖಾತೆ ನೀಡುತ್ತಾರೆ ಎಂದು ನಂಬಿಕೆಯಿತ್ತು. ಈಬಗ್ಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರಿಗೆ ಮನವಿ ಮಾಡಲಾಗಿತ್ತು. 45 ವರ್ಷಗಳಷ್ಟು ಸುಧೀರ್ಘ ರಾಜಕೀಯ ಅನುಭವ ಇರುವ ಕೆ.ಹೆಚ್. ಮುನಿಯಪ್ಪ ಅವರಿಗೆ ಯಾವ ಸ್ಥಾನ ನೀಡಿದ್ದೀರಿ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ(State in-charge Randeep Singh Surje wala) ಕರೆಗೆ ಓಗೊಟ್ಟು ಮಾದಿಗರು ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ವರಿಷ್ಟರು ನಮ್ಮ ತಾಳ್ಮೆಯನ್ನು ಅಸಹಾಯಕತೆ ಎಂದು ಭಾವಿಸಬಾರದು. ಪ್ರಸ್ತುತ ನಮ್ಮ ಸಮುದಾಯದ ನಾಯಕ ರಿಗೆ ಪಕ್ಷದಲ್ಲಿ ಆತಂಕದ ವಾತಾವರಣ ಇದ್ದಂತಿದೆ. ಪಕ್ಷದೊಳಗಿನ ಕೋಮುವಾದಿಗಳು ನಮಗೆ ಮೋಸ ಮಾಡುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಅಬಕಾರಿ ಅಥವಾ ಆಹಾರ ಖಾತೆ ಬಿಟ್ಟು ಬೇರೆ ಖಾತೆ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಎರಡನೆ ಅವಧಿಯಲ್ಲಿಯಾದರೂ ಉತ್ತಮ ಖಾತೆ ದೊರೆಯುವ ಆಶಾವಾದವಿತು. ಅದೂ ಕೂಡ ಈಗ ಮರೆಯಾಗಿದೆ ಎಂದು ಬೇಸರಿಸಿದರು.
ಸಿದ್ದರಾಮಯ್ಯ(Siddaramaiah) ಅವರೇ ರಾಜ್ಯದಲ್ಲಿ ಶೇ.33ರಷ್ಟು ಮಾದಿಗ ಸಮುದಾಯವಿದ್ದು ಅದನ್ನು ಕಡೆಗಣಿಸಿರುವುದು ತಪ್ಪು. ನಮ್ಮ ಸಮುದಾಯಕ್ಕೆ ನ್ಯಾಯ ನೀಡುವ ವಿಷಯ ಹೈಕಮಾಂಡ್ ಗಮನಕ್ಕೆ ತರಬೇಕಿತ್ತಲ್ಲವೆ? ಎಲ್ಲಿ ಮರೆಯಾಯಿತು ನಿಮ್ಮ ಪ್ರಬುದ್ಧತೆ, ಡಿ.ಕೆ.ಶಿವಕುಮಾರ್ ಅವರೇ ನಮ್ಮ ಸಮಾಜ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ.ಈ ಸತ್ಯಗೊತ್ತಿದ್ದರೂ ಯಾಕೆ ಉತ್ತಮ ಖಾತೆ ನೀಡಿಲ್ಲ, ಕಾಲ ಮಿಂಚಿಲ್ಲ ಈಗಲಾದರೂ ಆಹಾರ ಖಾತೆ ಬದಲಾಯಿಸಿ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರೇ ಹಳೆ ಖಾತೆಯನ್ನು ವಹಿಸಿಕೊಂಡು ಸುಮ್ಮನಿ ರುವುದಕ್ಕಿಂತ ರಾಜೀನಾಮೆ ನೀಡಿ ಹೊರಗೆ ಬನ್ನಿ. ಮಾದಿಗ ಸಮುದಾಯ ನಿಮ್ಮ ಬೆನ್ನಿಗಿದೆ. ಶಾಸಕರಾಗಿ ಕೆಲಸ ಮಾಡಿ?ನಿಮ್ಮ ಅನುಭವಕ್ಕೆ ತಕ್ಕಂತಹ ಸ್ಥಾನ ಮಾನ ಇಲ್ಲದ ಕಡೆ ನೀವು ಇರುವುದು ಬೇಡ ಎಂದರು.
ರಾಜ್ಯ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಹರಿಪ್ರಸಾದ್(B K HariPrasad) ಅವರಲ್ಲಿ ಮನವಿಯೇನೆಂದರೆ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಕೆ.ಹೆಚ್.ಅವರಿಗೆ ಉತ್ತಮ ಸ್ಥಾನ ನೀಡಲು ಬೆಂಬಲಿಸ ಬೇಕು ಎಂದ ಅವರು ಮುಂದಿನ ಅನಾಹುತಗಳು ನಡೆಯಬಾರದು ಎಂದರೆ ಖಾತೆ ಬದಲಾವಣೆ ಮಾಡಿ.ಇಲ್ಲವಾದಲ್ಲಿ ಬೀದಿಗೆ ಬಂದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾದಿಗ ಸಮುದಾಯವೂ ಕೂಡ ಒಂದೇ ಪಕ್ಷವನ್ನು ನಂಬಿಕೊಂಡಿದ್ದರಿಂದಾಗಿ ಕಾಂಗ್ರೆಸ್‌ನಿಂದ ಪದೇ ಪದೇ ಅನ್ಯಾಯ ಆಗುತ್ತಿದೆ. ಇನ್ನಾದರೂ ಸರಿಯೆ ಈ ಬಗ್ಗೆ ಸಮುದಾಯದ ಮುಖಂಡರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಮಾದಾರ ಮಹಾಸಭಾದ ಬಾಗೇಪಲ್ಲಿ ಅಧ್ಯಕ್ಷ ಅ.ನಾ.ಮೂರ್ತಿ ಮಾತಾಡಿದ ಮಾದಿಗ ಸಮುದಾಯ ದ ಏಕೈಕ ನಾಯಕರೆಂದರೆ ಕೆ.ಹೆಚ್.ಮುನಿಯಪ್ಪ ಅವರನ್ನು ಉಪ ಮುಖ್ಯಮಂತ್ರಿ ಮಾಡದಿದ್ದರೆ 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದು ಕೊಳ್ಳುವುದು ಖಚಿತ. ಜಿ.ಪರಮೇಶ್ವರ್(G Parameshwar) ಅವರಿಗೆ ಎರಡನೇ ಬಾರಿಗೆ ಉಪಮುಖ್ಯಮಂತ್ರಿ ಜತೆಗೆ ಎರಡು ಖಾತೆ, ಪ್ರಿಯಾಂಕ ಖರ್ಗೆ ಅವರಿಗೆ ಗೃಹ ಖಾತೆ ಜತೆಗೆ ಎರಡು ಪ್ರಬಲ ಖಾತೆ ನೀಡಿದ್ದೀರಿ. ಮುಖ್ಯಮಂತ್ರಿ ಮಗ ಎಂಬ ಕಾರಣಕ್ಕೆ ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಅನುಭವ ಇಲ್ಲದಿದ್ದರೂ ಶಾಸಕ ಅಲ್ಲದಿದ್ದರೂ ಉನ್ನತ ಖಾತೆ ಕೊಟ್ಟಿದ್ದೀರಿ. ಮಾದಿಗ ಸಮುದಾಯವನ್ನು ಕಡೆಗಣಿಸಿದ್ದೀರಿ. ಇದು ಸರಿಯಲ್ಲ ನಮ್ಮ ಸಮುದಾಯಕ್ಕೆ 3 ಸಚಿವ ಸ್ಥಾನ ಕೊಡಬೇಕು.ಸಮಾಜ ಕಲ್ಯಾಣ ಇಲಾಖೆ ನಮಗೇ ಕೊಡಬೇಕು. ಇಲ್ಲದಿದ್ದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಚಿಕ್ಕ ಕಾಡಿಗೇನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಮುತ್ಸದ್ದಿ ರಾಜಕಾರಣಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.ಆಹಾರ ಖಾತೆ ಬೇಡವೇ ಬೇಡ. ಇದೇ ಮುಂದುವರೆದರೆ ದಂಗೆ ಆಗಲಿದೆ ಎಂದರು.
ಈ ವೇಳೆ ಮಾದಾರ ಮಹಾಸಭಾದ ಮುಖಂಡರು, ಕೆ.ಹೆಚ್.ಮುನಿಯಪ್ಪ ಅಭಿಮಾನಿಗಳ ಬಳಗ ಮಾದಿಗ ಸಮುದಾಯದ ಹಿರಿಯರಾದ ತಿರುಮಳಪ್ಪ,ಮತ್ತಿತರರು ಇದ್ದರು