ಚಿಕ್ಕಬಳ್ಳಾಪುರ : ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿರುವ ಪ್ರಸ್ತುತದ ದಿನಮಾನಗಳಲ್ಲಿ ಗಣಿತದ ಕಲಿಕೆಗೆ ಹೆಚ್ಚು ಆದ್ಯತೆ ಸಿಗಲಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗಣಿತದ ಕಲಿಕೆಗೆ ಹೆಚ್ಚು ಒತ್ತು ನೀಡುವಂತೆ ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕ (ಆಡಳಿತ) ಮುನಿಕೆಂಪೇಗೌಡ.ಎಂ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜೂನಿಯರ್ ಕಾಲೇಜು ಆವರಣದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2025-26ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಂತದ ಗಣಿತ ಸ್ಪರ್ಧೆಗಳ ಆಯೋಜನೆಯು ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಶನ್ ಮತ್ತು ಸಮುದಾಯದ ಸಹಕಾರ ದಿಂದ ಉತ್ತಮ ಯಶಸ್ಸು ಕಂಡಿದೆ. ಈ ಕಾರ್ಯಕ್ರಮವು ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದ ಒಂದು ಭಾಗವಾಗಿದೆ. 2017ನೇ ಸಾಲಿನಿಂದ ಜಿಲ್ಲೆಯಲ್ಲಿ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಡಿ 4, 5, 6ನೇ ತರಗತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ ಕಲಿಕೆಯ ಕಾರ್ಯಕ್ರಮ ರೂಪಿಸಿ ಗಣಿತ ವಿಷಯದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವಂತಹ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ಅಕ್ಷರ ಫೌಂಡೇಶನ್ ನ ಅಧ್ಯಕ್ಷರಾದ ಅಶೋಕ್ ಕಾಮತ್ ಅವರು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳ 793 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗಣಿತ ಕಲಿಕಾ ಆಂದೋಲನದ ಗಣಿತ ಕಿಟ್ ಗಳನ್ನು ಸರಬರಾಜು ಮಾಡಲಾಗಿದೆ. ಗಣಿತ ಶಿಕ್ಷಕರಿಗೆ ತಜ್ಞರಿಂದ ತರಬೇತಿ ನೀಡಲಾಗಿದೆ.
2017-18ನೇ ಸಾಲಿನಿಂದ ಈ ಶೈಕ್ಷಣಿಕ ಸಾಲಿನ ವರೆಗೆ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ಹಂತದ ಗಣಿತ ಸ್ಪರ್ಧೆಯನ್ನು ಜಿಲ್ಲೆಯ 281 ಶಾಲೆಗಳಲ್ಲಿ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: CHIMUL: ಯುಗಾದಿ ಹಬ್ಬದ ಉಡುಗೊರೆಯಾಗಿ ಲೀ.50 ಪೈಸೆ ಹೆಚ್ಚಿಸಿ ಸಿಹಿ ಸುದ್ದಿ ನೀಡಿದ ಚಿಮುಲ್
ಈ ಸ್ಪರ್ಧೆಯಲ್ಲಿ 4,5,6ನೇ ತರಗತಿ ಮಕ್ಕಳು ಭಾಗವಹಿಸಿದ್ದರು. ತಜ್ಞರಿಂದ ಪ್ರಶ್ನೆಪತ್ರಿಕೆ ಗಳನ್ನು ಸಿದ್ದಪಡಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಲಾಗಿದೆ, ನಂತರ ಸಂಪನ್ಮೂಲ ತಂಡದಿಂದ ಮೌಲ್ಯಮಾಪನ ಮಾಡಿಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಪ್ರತಿಶಾಲೆಗೆ 9 ಬಹುಮಾನಗಳ ಜೊತೆಗೆ ಅಭಿನಂದನಾ ಪತ್ರಗಳನ್ನು ನೀಡಲಾಗಿದೆ. ಸರ್ಕಾರಿ ಶಾಲೆಗಳೊಂದಿಗೆ ಕೈಜೋಡಿಸಿ ಇಂತಹ ಕಲಿಕಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲು ನಮ್ಮ ಸಂಸ್ಥೆ ಬದ್ದವಾಗಿದ್ದು, ಈ ವರ್ಷ ರಾಜ್ಯದ 6 ಲಕ್ಷ ವಿದ್ಯಾರ್ಥಿಗಳಿಗೆ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಡಿ ಸ್ಪರ್ಧೆಗಳನ್ನು ಆಯೋಜಿಸಿ ಗಣಿತ ಕಲಿಕೆಗೆ ಪ್ರೋತ್ಸಾಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಅವರು ಮಾತನಾಡಿ, ಕೆಲವು ವಿದ್ಯಾರ್ಥಿಗಳಲ್ಲಿ ಇಂದಿಗೂ ಸಹ ಗಣಿತದ ವಿಷಯದ ಕಲಿಕೆಯಲ್ಲಿ ಹಿಂಜರಿಕೆ ಹಾಗೂ ಭಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅಕ್ಷರ ಫೌಂಡೇಶನ್ ರವರು ಸಹಕಾರ ನೀಡಿರುವುದು ಅಭಿನಂದನಾರ್ಹ ವಿಚಾರ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ಫೌಂಡೇಶನ್ ನ ನಿರ್ದೇಶಕಿ ವೈಜಯಂತಿ ಅವರು ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲಿ 2025-26ನೇ ಸಾಲಿನ ಗಣಿತ ಸ್ಪರ್ಧೆ ಆಯೋಜನೆಯ ಪ್ರಗತಿಯ ವಿವರವನ್ನು ಶಕ್ತಿ ಬಿಂದು ಪ್ರದರ್ಶನ (PPಖಿ) ದ ಮೂಲಕ ವಿವರಿಸಿದರು. ಈ ವೇಳೆ ಗಣಿತ ಸ್ಪರ್ಧೆ ಆಯೋಜನೆಯ ಜಿಲ್ಲಾ ವರದಿಯನ್ನು ಬಿಡುಗಡೆ ಮಾಡಲಾಯಿತು. ಗಣಿತ ಸ್ಪರ್ಧೆ ಯಲ್ಲಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆದಂತಹ 25 ಕ್ಲಸ್ಟರ್ ನ ಸಿ.ಆರ್.ಪಿ ಗಳನ್ನು ಮತ್ತು ಉತ್ತಮ ಫಲಿತಾಂಶ ಪಡೆದ 25 ಶಾಲೆಗಳನ್ನು ಆಯ್ಕೆಮಾಡಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸಿ.ಆರ್.ಪಿ ರವರಿಗೆ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕರಾದ ಯಶೋಧ, ಟಿ.ಕೆ.ವೆಂಕಟ ಮೋಹನ್, ಸುಬ್ಬಾರೆಡ್ಡಿ, ಆನಂದ.ಎ, ಜಯಸಿಂಹ, ವಾರ್ತಾ ಸಹಾಯಕ ಎಂ.ಆರ್.ಮAಜುನಾಥ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಿ.ಆರ್.ಪಿ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.