ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಚಿಂತಾಮಣಿ ನಗರವಾಸಿಗಳಿಗೆ ಸುವರ್ಣಾವಕಾಶ: ಆಸ್ತಿ ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ವಿಸ್ತರಣೆ

ಪ್ರತಿ ವರ್ಷದಂತೆ ಸರ್ಕಾರವು ಈ ಬಾರಿಯೂ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟು ರಿಯಾಯಿತಿ ಯನ್ನು ಘೋಷಿಸಿದೆ. ಈ ರಿಯಾಯಿತಿ ಸೌಲಭ್ಯವನ್ನು ಪಡೆಯಲು ಮೇ 31, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಸದವಕಾಶ ಬಳಸಿಕೊಂಡು ರಿಯಾಯಿತಿ ದರದಲ್ಲಿ ತೆರಿಗೆ ಪಾವತಿಸಬಹುದಾಗಿದೆ

ಚಿಂತಾಮಣಿ: ನಗರದ ಅಭಿವೃದ್ಧಿಗೆ ನಾಗರಿಕರ ಸಹಕಾರ ಅತ್ಯಗತ್ಯವಾಗಿದ್ದು,ಸಾರ್ವಜನಿಕರು ಬಾಕಿ ಇರುವ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವ ಮೂಲಕ ನಗರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ಚಿಂತಾಮಣಿ ನಗರಸಭೆ ಪೌರಾಯುಕ್ತರಾದ ಜಿ.ಎನ್.ಚಲಪತಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ವರ್ಷದಂತೆ ಸರ್ಕಾರವು ಈ ಬಾರಿಯೂ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟು ರಿಯಾಯಿತಿ ಯನ್ನು ಘೋಷಿಸಿದೆ. ಈ ರಿಯಾಯಿತಿ ಸೌಲಭ್ಯವನ್ನು ಪಡೆಯಲು ಮೇ 31, 2026 ರವರೆಗೆ ಕಾಲಾ ವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಸದವಕಾಶ ಬಳಸಿಕೊಂಡು ರಿಯಾಯಿತಿ ದರದಲ್ಲಿ ತೆರಿಗೆ ಪಾವತಿಸಬಹುದಾಗಿದೆ ಎಂದು ಹೇಳಿದರು.

ತೆರಿಗೆಯನ್ನು ಸರಿಯಾಗಿ ನಿರ್ಧರಿಸದೆ ಕಡಿಮೆ ಪಾವತಿಸುತ್ತಿರುವ ಅಥವಾ ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದ ಸ್ವತ್ತುಗಳ ಮೇಲೆ ನಗರಸಭೆ ಕಣ್ಣಿಟ್ಟಿದೆ. ಅಂತಹ ಮಾಲೀಕರಿಗೆ ನಿಯಮಾನು ಸಾರ ದುಪ್ಪಟ್ಟು ದಂಡ ವಿಧಿಸಲಾಗುವುದು.

ನಗರದ ವಿವಿಧ ವಾರ್ಡ್‌ಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಸುರಿಯಲಾಗುತ್ತಿದ್ದು,ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿವೇಶನ ಮಾಲೀಕರು ಕೂಡಲೇ ತಮ್ಮ ಜಾಗವನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ನಗರಸಭೆಯೇ ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ತೆರಿಗೆಯಲ್ಲಿ ಸೇರಿಸಲಿದೆ.

ಇದನ್ನೂ ಓದಿ: Chinthamani News: 3 ರಾಜ್ಯಗಳಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು: ಚಿಂತಾಮಣಿಯಲ್ಲಿ ಬಿ ಜೆ ಪಿ ಕಾರ್ಯಕರ್ತರ ಸಂಭ್ರಮಾಚರಣೆ

ರಸ್ತೆ ಬದಿಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ನಿಷೇಧಿಸಲಾಗಿದೆ. ಇದಕ್ಕಾಗಿ, ನಗರದ ಹೊರ ವಲಯದಲ್ಲಿ 2 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪೌರಾಯುಕ್ತರು ಪತ್ರಕರ್ತರಿಗೂ ಮನವಿ ಮಾಡಿದ್ದು, ಪತ್ರಕರ್ತರ ಭವನಕ್ಕೆ ಸಂಬಂಧಿಸಿದ ತೆರಿಗೆ ಬಾಕಿಯನ್ನು ಶೀಘ್ರವಾಗಿ ಪಾವತಿಸಿ ಮಾದರಿಯಾಗಬೇಕು ಎಂದು ಕೋರಿದರು.

ನಗರದ ರಸ್ತೆ ಕಾಮಗಾರಿಗಳು, ಯುಜಿಡಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಸಾರ್ವಜನಿಕರು ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಅಗೆಯದಂತೆ ಅವರು ಮನವಿ ಮಾಡಿದರು.

ನಗರದ ಹೃದಯಭಾಗದಲ್ಲಿರುವ ಹಳೆಯ ಐಡಿಎಸ್‌ಎಂಟಿ (IDSMT)ವಾಣಿಜ್ಯ ಸಂಕೀರ್ಣವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು,ಸಾರ್ವಜನಿಕರ ಪ್ರಾಣರಕ್ಷಣೆಯ ದೃಷ್ಟಿಯಿಂದ ಅದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಸುಮಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಕಟ್ಟಡವು ಪ್ರಸ್ತುತ ಬಳಕೆಗೆ ಯೋಗ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆ(PWD)ಮತ್ತು ಖಾಸಗಿ ತಾಂತ್ರಿಕ ಸಂಸ್ಥೆಗಳು ನಡೆಸಿದ ಪರೀಕ್ಷೆಯಲ್ಲಿ ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದೆ ಎಂದು ವರದಿ ನೀಡಿವೆ.

ಇತ್ತೀಚೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಗೋಡೆ ಕುಸಿದು ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ,ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಶಿಥಿಲ ಕಟ್ಟಡಗಳನ್ನು ತೆರವು ಗೊಳಿಸಲು ಸರ್ಕಾರ ಸೂಚಿಸಿದೆ. ಅದರಂತೆ ಜಿಲ್ಲಾಧಿಕಾರಿಗಳು ಈ ಸಂಕೀರ್ಣವನ್ನು ತೆರವು ಗೊಳಿಸಲು ಒಂದು ವಾರದ ಗಡುವು ನೀಡಿದ್ದಾರೆ.

ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡ ಲಾಗುವುದು. ಹೊಸದಾಗಿ ಸುಮಾರು 22.65 ಲಕ್ಷ ರೂ.ವೆಚ್ಚದಲ್ಲಿ ಆಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧವಾಗಿದೆ.

ಈಗಾಗಲೇ ಅಲ್ಲಿ ವ್ಯಾಪಾರ ಮಾಡುತ್ತಿರುವ ಮೂಲ ಬಾಡಿಗೆದಾರರಿಗೆ ಯಾವುದೇ ಅನ್ಯಾಯ ವಾಗುವುದಿಲ್ಲ. ಹೊಸ ಕಟ್ಟಡ ನಿರ್ಮಾಣವಾದ ನಂತರ, ನಿಯಮಾನುಸಾರ ಅವರಿಗೇ ಮೊದಲ ಆದ್ಯತೆ ನೀಡಿ ಮರುಹಂಚಿಕೆ ಮಾಡಲಾಗುವುದು"ಎಂದು ಪೌರಾಯುಕ್ತರು ಭರವಸೆ ನೀಡಿದರು.

ಕಟ್ಟಡ ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು. ಒಂದು ವೇಳೆ ಸೂಚನೆ ಮೀರಿ ವ್ಯಾಪಾರ ಮುಂದುವರಿಸಿ ಅನಾಹುತ ಸಂಭವಿಸಿದರೆ ಅದಕ್ಕೆ ವ್ಯಾಪಾರಸ್ಥರೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು.