ಚಿಕ್ಕಬಳ್ಳಾಪುರ: ತಾಲೂಕಿನ ಗೊಲ್ಲಹಳ್ಳಿ ಗ್ರಾಪಂ ಕರವಸೂಲಿಗಾರನೊಬ್ಬ ಇ-ಖಾತೆಯಲ್ಲಿ ಅರ್ಜಿದಾರರ ತಂದೆಯ ಹೆಸರು ತಿದ್ದುಪಡಿ ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು ಮುಂಗಡ 9500 ಹಣ ಪಡೆಯುವಾಗ ಲೋಕಾ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಕರವಸೂಲಿಗಾರನಾಗಿ ಕೆಲಸ ಮಾಡುತ್ತಿದ್ದ ದ್ಯಾವಪ್ಪ ಬಿನ್ ಚಿಕ್ಕಮುನಿಯಪ್ಪ ಎಂಬುವರು ಕಟಾರಿ ಕದಿರೇನಹಳ್ಳಿ ಗ್ರಾಮದ ಅಶ್ವತ್ಥ ಬಿನ್ ನಾರಾಯಣಪ್ಪ ಎಂಬುವರಿಂದ ಹೆಸರು ತಿದ್ದುಪಡಿ ಮಾಡಲು 10 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Lokayukta Raid: ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಈ ಸಂಬಂಧ ಶುಕ್ರವಾರ ಗೊಲ್ಲಹಳ್ಳಿ ಪಂಚಾಯಿತಿ ಜಲಗಾರ ರಾಜಪ್ಪ ಎಂಬುವರ ಖಾತೆಗೆ ಪೋನ್ ಪೇ ಮೂಲಕ 9500 ಹಣ ಹಾಕಿಸಿಕೊಂಡಿದ್ದಾರೆ. ಇದೇ ಸಮಯವನ್ನು ಕಾದಿದ್ದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜಕುಮಾರ್ ಮತ್ತು ತಂಡ ಕರವಸೂಲಿಗಾರ ದ್ಯಾವಪ್ಪ, ಹಣ ಹಾಕಿಸಿಕೊಂಡಿರುವ ಜಲಗಾರ ರಾಜಪ್ಪ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿರುವುದು ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ಲೋಕಾ ಪೊಲೀಸರು, ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ ಎನ್ನುವುದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.