ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ತರಕಾರಿ ಬೆಳೆದ ರೈತರಿಗೆ ಬೆಲೆ ಕುಸಿತದ ಪರಿಣಾಮ ಕೃಷಿಯ ಬಗ್ಗೆ ಬೇಸರ ಉಂಟು ಮಾಡಿತ್ತಲ್ಲದೆ ಅವರ ಬದುಕಿಗೆ ಬರಸಿಡಿಲು ಬಡಿದಂತಾ ಗಿತ್ತು. ಈ ನಿಟ್ಟುಸಿರು ಭಗವಂತನಿಗೆ ಮುಟ್ಟಿತೇನೋ ಎಂಬAತೆ ಕಳೆದೆರಡೆ ವಾರದಿಂದ ಹುರುಳಿ ಕಾಯಿ ಮತ್ತು ತರಕಾರಿ ಬೆಳೆದ ರೈತರ ಬಾಳಲ್ಲಿ ಬೆಳಕು ಮೂಡುವಂತಾಗಿದೆ.
ಹೌದು. ಎಂತಹುದೇ ಸಂದರ್ಭ ಬರಲಿ ಆತ್ಮವಿಶ್ವಾಸ ಕಳೆದುಕೊಳ್ಳದ ಸ್ವಾಭಿಮಾನಿ ರೈತರನ್ನು ಹೊಂದಿರುವ ಜಿಲ್ಲೆಗೆ ಅಚಲವಾಗಿ ನಿಂತಿರುವ ನಂದಿಗಿರಿಯಂತೆ ಮಿಲ್ಕ್, ಸಿಲ್ಕ್ ಜತೆಗೆ ಫಲಪುಷ್ಪ ನಗರಿ ಎಂಬ ಹೆಸರಿದೆ. ಶಾಶ್ವತ ನದಿನಾಲೆಗಳ ಆಸರೆಯಿಲ್ಲದ ಬಯಲು ಸೀಮೆಯ ಸೆರಗೊದ್ದ ಜಿಲ್ಲೆ ಯಲ್ಲಿ ಅಂತರ್ಜಲವೇ ರೈತಾಪಿಗಳ ಬದುಕಿಗೆ ಆಧಾರ.
ಋತುಮಾನ ಯಾವುದೇ ಇರಲಿ, ಪರಿಸ್ಥಿತಿ ಹೇಗೇ ಇರಲಿ, ಲಾಭನಷ್ಟ ಲೆಕ್ಕವಿಲ್ಲದೆ ಕೃಷಿಯನ್ನು ಮಾತ್ರ ಮರೆತಿಲ್ಲ. ಕೂಲಿಯಾಳುಗಳ ಅಲಭ್ಯತೆ, ದುಬಾರಿಯಾದ ಔಷಧಿ, ರಸಗೊಬ್ಬರದ ನಡುವೆ ಯೂ ಛಲ ಬಿಡದೆ ಬೇಸಾಯ ನಂಬಿದ ಪರಿಣಾಮ ಬೇಸಿಗೆಯ ಬಿರುಬಿಸಿಲಿನ ನಡುವೆ ಹುರುಳಿ ಕಾಯಿ ಮತ್ತು ಸೌತೆಕಾಯಿ ಬೆಳೆಗಳು ಕೈಹಿಡಿದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇದನ್ನೂ ಓದಿ: Chinthamani Crime: ಗುರುಭವನದ ಬಳಿ ಯುವಕನ ಮೇಲೆ ಹಲ್ಲೆ: ಹಣಕ್ಕಾಗಿ ಬೆದರಿಕೆ, ಇಬ್ಬರು ವಶಕ್ಕೆ
ಕಳೆದಾರು ತಿಂಗಳಿಂದ ತರಕಾರಿ ಅಂಗಡಿಗಳು ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ತರಕಾರಿ ಟೆಂಟುಗಳಲ್ಲಿ ನೂರು ರೂಪಾಯಿಗೆ 3,4 ಕೆಜಿ ಮಾರಾಟ ಮಾಡುತ್ತಿದ್ದರು. ಬೆಲೆ ಏರಿಕೆಯಾದ ಈ ಎರಡುಮೂರು ವಾರಗಳಲ್ಲಿ ನೂರು ರೂಪಾಯಿಗೆ ಎರಡು-ಎರಡೂವರೆ ಕೆಜಿ ಮಾತ್ರ ಮಾರಾಟ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ ಎರಡು ವಾರದಿಂದ 10 ಕೆ.ಜಿ ಬೀನ್ಸ್ ಒಂದು ಸಾವಿರದಿಂದ 1300 ರೂಗೆ ಜಿಗಿದಿದೆ ಮತ್ತು ಸೌತೆಕಾಯಿ ಸಹ ಒಂದು ಮೂಟೆ 600 ರಿಂದ 800 ರೂ ವರೆಗೆ ಖರೀದಿ ಆಗಿರುವುದು ರೈತರಿಗೆ ಸ್ವಲ್ಪ ಸಂತೋಷವಾಗಿದೆ.ಇನ್ನೂ ಅನೇಕ ತರಕಾರಿಗಳಿಗೆ ರೇಟ್ ನುಗ್ಗೆಕಾಯಿ ಕೆ.ಜಿಗೆ 60, ಕ್ಯಾರೆಟ್ 40, ಟೊಮೆಟೋ 50 ರೂ ಹೀಗೆ ಸ್ವಲ್ಪ ಮಟ್ಟಿಗೆ ಎಲ್ಲಾ ತರಕಾರಿಗಳ ಬೆಲೆ ಏರುಗತಿಯಲ್ಲಿರುವುದು ರೈತರಿಗೆ ಖುಷಿ ತಂದಿದೆ.
ತೀವ್ರ ಬಿಸಿಲಿನ ತಾಪ, ನೀರಿನ ಕೊರತೆ ಮತ್ತು ಇಳುವರಿ ಕುಸಿತದಿಂದಾಗಿಯೇ ತರಕಾರಿ ಬೆಲೆಗಳು ಗಗನಕ್ಕೇರಿವೆ. ಬೀನ್ಸ್ ಚಿಲ್ಲರೆ ದರವು ಕೆ.ಜಿ.ಗೆ ರೂ 160 ರಿಂದ ರೂ 200ರ ಗಡಿ ದಾಟಿದೆ. ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಬೇಡಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ತೀವ್ರ ಬಿಸಿಲಿನಿಂದಾಗಿ ಬೆಳೆಗಳು ಬೇಗನೆ ಹಾಳಾಗುತ್ತಿವೆ ಮತ್ತು ಇಳುವರಿ ಕುಗ್ಗಿರುವುದು. ಮಳೆಯ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೃಷಿಗೆ ನೀರುಣಿಸುವುದು ಕಷ್ಟವಾಗಿದೆ. ಇಂಧನ ದರ ಹೆಚ್ಚಳ ಮತ್ತು ದೂರದ ಊರುಗಳಿಂದ ತರಕಾರಿ ತರಿಸಬೇಕಾಗಿರುವುದರಿಂದ ಸಾರಿಗೆ ವೆಚ್ಚದ ಹೊರೆ ಎಲ್ಲಾ ಸೇರಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಮಳೆಗಾಲ ಆರಂಭವಾಗಿ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆಗಳು ಹೀಗೇ ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಪಿಎಂಸಿಯ ಪರವಾನಗಿ ತರಕಾರಿ ದಲ್ಲಾಳಿ ಸುರೇಶ್ ತಿಳಿಸಿದ್ದಾರೆ.
ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆಯುತ್ತಾರೆ. ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಕ್ಕಿದಾಗ ಮಾತ್ರ ಅವರು ಸಂತೋಷವಾಗಿರಲು ಸಾಧ್ಯ. ಜಿಲ್ಲೆಯಲ್ಲಿ ರೈತರು ಬೆಳೆದ ತರಕಾರಿಗಳು, ಹೂವು, ಹಣ್ಣುಗಳು, ಗುಣಮಟ್ಟದಿಂದ ಕೂಡಿರುವ ಕಾರಣ ಹೊರ ರಾಜ್ಯಕ್ಕೆ ಸಹ ತೆಗೆದುಕೊಂಡು ಹೋಗು ತ್ತಾರೆ. ಇವೆಲ್ಲಾ ಕಾರಣ ಜಿಲ್ಲೆಯ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು.
ಏನೇ ಆಗಲಿ ಬೇಸಿಗೆಯಲ್ಲಿ ತರಕಾರಿಗಳಿಗೆ ಉತ್ತಮ ಬೆಲೆ ಕುದುರುತ್ತಿರುವುದು ರೈತಾಪಿಗಳಿಗೆ ಸಂತೋಷದ ವಿಚಾರವಾಗಿದ್ದರೆ, ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಮುಂಗಾರು ಆರಂಭವಾಗು ವವರೆಗೂ ಇದು ಹೀಗೆಯೇ ಇರಲಿದೆ ಎನ್ನುವುದು ಮಾರುಕಟ್ಟೆ ಮಂದಿಯ ಮಾತಾಗಿದೆ.