ಚಿಕ್ಕಬಳ್ಳಾಪುರ: ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸೆ.5ರಿಂದ ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಜನರ ಕುಂದುಕೊರತೆ, ಅಹವಾಲು ಹಾಗೂ ವಿವಿಧ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಅರ್ಜಿ ಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಆಂದೋಲನದ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಿ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Chinthamani News: ಜನರು ತೋರಿದ ಪ್ರೀತಿ–ಸಹಕಾರ ಎಂದಿಗೂ ಮರೆಯಲ್ಲ: ಎಸ್‌ಪಿ ಕುಶಲ್ ಚೌಕ್ಸೆ
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಮೊದಲು ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಮೊದಲು ಹೋಬಳಿ ಕೇಂದ್ರಗಳಲ್ಲಿ ಹಾಗೂ ನಂತರ ಗ್ರಾಮ ಪಂಚಾಯಿತಿ ಕೇಂದ್ರಗಳಿರುವ ಗ್ರಾಮಗಳಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ.
ಇದರ ಜೊತೆಗೆ ವಿಧಾನಸಭಾ ಕ್ಷೇತ್ರವಾರು ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಸೆ.5ರಂದು ಬೆಳಗ್ಗೆ 10.30ಕ್ಕೆ ಜಿಲ್ಲೆಯ ವಿವಿಧೆಡೆ ಸಭೆಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದ್ದಾರೆ.
ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಆಂದೋಲನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.