ಚಿಂತಾಮಣಿ: ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಲು ಕೆಲವರು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದು ನಿವೃತ್ತ ನ್ಯಾಯಾಧೀಶ ವಿ ಗೋಪಾಲಗೌಡರು ಬೇಸರ ವ್ಯಕ್ತಪಡಿಸಿದರು.
ಚಿಂತಾಮಣಿ ನಗರದಲ್ಲಿ ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭೀಮೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳ ಮುಖಂಡರು, ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಾಧೀಶರು ವಿ.ಗೋಪಾಲಗೌಡ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಬಿಜೆಪಿ ಮುಖಂಡ ದೇವನಹಳ್ಳಿ ಜಿ.ಎನ್. ವೇಣುಗೋಪಾಲ್ ಚಾಲನೆ ನೀಡಿದರು.ಗಣ್ಯರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಇದನ್ನೂ ಓದಿ: Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!
ಈ ವೇಳೆ, ಮಾತನಾಡಿದ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.ಅಂಬೇಡ್ಕರ್ ಅವರ ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಮಾರ್ಗ ದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಲು ಕೆಲವರು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ಶಿಲ್ಪಿಯಾಗಿರುವ ಅಂಬೇಡ್ಕರ್ ಅವರಿಗೆ ದೇಶದ ಪ್ರತಿಯೊಂದು ಸರ್ಕಾರಿ ಸಂಸ್ಥೆಯಲ್ಲೂ ಗೌರವ ಸಿಗಬೇಕು ಎಂದು ಹೇಳಿದರು.
ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಬಾಲ್ಯದಲ್ಲಿ ಜಾತಿಯ ಹೆಸರಿನಲ್ಲಿ ಅನು ಭವಿಸಿದ ಅಪಮಾನಗಳು, ಕಷ್ಟಗಳನ್ನು ನೆನೆದ ನ್ಯಾಯಮೂರ್ತಿಗಳು, ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಾಗಿ ಇಂದು ಶೋಷಿತ ವರ್ಗಗಳಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ದೃಢತೆ ಸಿಕ್ಕಿದೆ ಎಂದರು.
ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ.ಕೇವಲ ಮನೆಯಲ್ಲಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಿರಂತರ ಹೋರಾಟದ ಅಗತ್ಯ ವಿದೆ.
ದಲಿತ ಮತ್ತು ಹಿಂದುಳಿದ ವರ್ಗಗಳ ಜನರು ಬೇರೆಯವರ ಕೈಗೊಂಬೆಗಳಾಗಬಾರದು. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಂಡು ಅನ್ಯಾಯ ಮಾಡುವ ಸಾಧ್ಯತೆ ಇರುತ್ತದೆ. ಈ ದೇಶದಲ್ಲಿ ದಲಿತರು ಶೇಕಡಾ 20 ರಷ್ಟಿದ್ದಾರೆ. ಇವರ ಜೊತೆಗೆ ಅಲ್ಪಸಂಖ್ಯಾತರು ಮತ್ತು ಹಿಂದು ಳಿದ ವರ್ಗದವರು ಸೇರಿದರೆ ಒಟ್ಟು ಜನಸಂಖ್ಯೆಯ ಶೇಕಡಾ 70ಕ್ಕಿಂತ ಹೆಚ್ಚಾಗುತ್ತಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಹೊಂದಿರುವವರೇ ಸರ್ಕಾರ ರಚಿಸುವ ಶಕ್ತಿ ಹೊಂದಿರುತ್ತಾರೆ ಎಂದು ಜಾಗೃತಿ ಮೂಡಿಸಿದರು.
ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ ಅಂಬೇಡ್ಕರ್ ಅವರ ತತ್ವಗಳನ್ನು ಯುವಜನತೆ ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.ಬಿಜೆಪಿ ಮುಖಂಡ ದೇವನಹಳ್ಳಿ ಜಿ.ಎನ್. ವೇಣುಗೋಪಾಲ್ ಸಹ ಅಂಬೇಡ್ಕರ್ ಅವರ ಸೇವೆಯನ್ನು ಸ್ಮರಿಸಿ, ಸಮಾಜದಲ್ಲಿ ಬಡವರು ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಅವರ ಚಿಂತನೆಗಳು ಅಗತ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಭೀಮೋತ್ಸವವನ್ನು ಸಂಭ್ರಮದಿAದ ಆಚರಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಘೋಷಣೆಗಳ ಮೂಲಕ ಅಂಬೇಡ್ಕರ್ ಅವರ ಆದರ್ಶಗಳನ್ನು ಜನರಿಗೆ ಸಾರಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ದಲಿತ ಸಮುದಾಯದ 200ಕ್ಕೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸ ಲಾಯಿತು.
ಇನ್ನೂ ಕಾರ್ಯಕ್ರಮಕ್ಕೂ ಮೊದಲು ಬಾಗೇಪಲ್ಲಿ ವೃತ್ತದಿಂದ ಅಂಬೇಡ್ಕರ್ ರವರ ಸ್ಥಬ್ದ ಚಿತ್ರಗಳ ಅದ್ದೂರಿ ಮೆರವಣಿಗೆ ಚಿಂತಾಮಣಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೇರವಣಿಗೆ ಕಾರ್ಯಕ್ರಮದಲ್ಲಿ ಡೊಲ್ಲು ಕುಣಿತ,ಗಾರುಡಿಗೊಂಬೆ, ತಮಟೆ ವಾದನ ಸಾರ್ವಜನಿಕರ ಗಮನ ಸೆಳೆಯಿತ್ತಲ್ಲದೇ, ತಮಟೆ ಸದ್ದಿಗೆ ದಲಿತ ಮುಖಂಡರು ಕುಣಿದು ಕುಪ್ಪಳಿಸಿದರು.
ಈ ಕಾರ್ಯಕ್ರಮದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೋಟದ ಅದ್ಯಕ್ಷ ಕವಾಲಿ ವೆಂಕಟರವಣಪ್ಪ, ಹಿರಿಯ ವಕೀಲ ಎ.ಸಮದ್, ಪ್ರೊ.ಹರಿರಾಮ್, ಭೀಮಪುತ್ರಿ ನಾಗಮ್ಮ, ದಲಿತ ಮುಖಂಡರಾದ ವಿಜಯನರಸಿಂಹ, ಜನನಾಗಪ್ಪ, ವಕೀಲ ಗೋಪಿನಾಥ್, ಪೊಟೋ ನಾರಾಯಣಪ್ಪ, ವೆಂಕಟಗಿರಿ ಕೋಟೆ ಆನಂದ್, ಮಹೇಶ್ ಬೈ, ಚಲಪತಿ, ಸಮದ್, ಮಹಮದ್ ಶೇಫೀಕ್, ನವೀನ್ ಜಿ ಕೃಷ್ಣ, ಸುಬ್ರಮಣಿಯಪ್ಪ, ಪಿವಿ ಮಂಜುನಾಥ್, ಎಂ ವಿ ರಾಮಪ್ಪ, ನಾರಮಾಕಲಹಳ್ಳಿ ಮೂರ್ತಿ, ಜನಾರ್ದನ್, ಮಾದಮಂಗಲ ಆಂಜಿ, ಬ್ಲಡ್ ಮಂಜು, ಮುನಗನಗಳ್ಳಿ ಶ್ರೀನಿವಾಸ್, ಸಂತೋಷ, ನವೀನ್, ದಲಿತ ಪರ ಸಂಘಟನಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.