ಕೈವಾರ: ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಸೋಮವಾರದಿಂದ ಗುರುಪೂಜಾ ಮಹೋತ್ಸವ ಮತ್ತು ರಾಷ್ಟ್ರೀಯ ಮಟ್ಟದ ಸಂಗೀತೋತ್ಸವ ಕಾರ್ಯಕ್ರಮಗಳು ಜು.27ರಂದು ಆರಂಭವಾಗುತ್ತದೆ.
ಪ್ರಾತ:ಕಾಲ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಗುರುಪೂಜೆ-ಸಂಗೀತೋತ್ಸವವು ಪ್ರಾರಂಭವಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದಲೇ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ನಾದಸ್ವರ ಕಛೇರಿಗಳೊಂದಿಗೆ ಆರಂಭವಾಗುತ್ತದೆ. ಗುರುಪೂಜಾ ಸಂಗೀತೋತ್ಸವದ ಅಂಗವಾಗಿ ನಿರಂತರ 72 ಗಂಟೆಗಳ ಕಾಲ ದೇಶದ ಹಲವಾರು ವಿದ್ವಾಂಸರುಗಳಿಂದ ಸಂಗೀತ ಸೇವೆ ಸಮರ್ಪಣೆಯಾಗುತ್ತದೆ.
ಈ ಸಂಗೀತ ಉತ್ಸವದಲ್ಲಿ ನಾನಾ ಪ್ರಕಾರದ ಸಂಗೀತ ಕಛೇರಿ, ಹರಿಕಥೆ, ಬರ‍್ರಕಥೆ, ಭರತನಾಟ್ಯ, ನಾದಸ್ವರ ವಾದನ, ಸ್ಯಾಕ್ಸೊಪೋನ್, ಜಾನಪದ ಗೀತೆ, ತತ್ವಗಾಯನ, ಭಕ್ತಿ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಸವಿಯುವ ಸದಾವಕಾಶ ಸಂಗೀತ ಪ್ರಿಯರಿಗೆ ಒದಗಿ ಬಂದಿದೆ. ಸದ್ಗುರು ತಾತಯ್ಯ ನವರ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಹೂಗಳಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ: Chikkaballapur News: ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ 4237 ರಕ್ತದಾನಿಗಳಿಗೆ ಕೋಟಿ ನಮನ: ಕೆ.ವಿ. ನವೀನ್ ಕಿರಣ್
ಸಂಗೀತ ಸಮಾರಂಭ ನಡೆಯುವ ಶ್ರೀ ಯೋಗಿ ನಾರೇಯಣ ಸಭಾಂಗಣವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ. ಸಭಾಂಗಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಸಂಗೀತ ಕಾರ್ಯಕ್ರಮಗಳು ನಡೆಯುವ ವೇದಿಕೆಗೆ ಶ್ರೀ ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ. ಸಂಗೀತಗಾರರು ಸಂಗೀತ ಸೇವೆಯನ್ನು ಸಮರ್ಪಣೆ ಮಾಡಲಿದ್ದಾರೆ ಎಂದು ಗುರುಪೂಜಾ ಸಂಗೀತೋತ್ಸವದ ಸಂಯೋಜಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ತಿಳಿಸಿದ್ದಾರೆ.
ಗುರುಪೂಜಾ ಸಂಗೀತೋತ್ಸವದ ಅಂಗವಾಗಿ ದೇವಾಯಲದ ಪ್ರಾಂಗಣದಲ್ಲಿ ವಿಸ್ತಾರವಾದ ಪೆಂಡಾಲ್ ಹಾಕಲಾಗಿದೆ. ಪ್ರಸಾದದ ಸೇವೆಗಾಗಿಯೂ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಗೀತೋತ್ಸವದಲಿ ಇಂದು : ಜು.27ರಂದು ಪ್ರಾತ:ಕಾಲ 5.30 ಗಂಟೆಗೆ ಘಂಟಾನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜಾಕೈಂಕರ್ಯಗಳು ಆರಂಭವಾಗುತ್ತದೆ. ಬೆಳಿಗ್ಗೆ ದೇವಾಲಯ ದಲ್ಲಿ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕವನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಗುತ್ತದೆ. ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ದೆಹಲಿಯ ಸರಸ್ವತಿ ರಾಜಗೋಪಾಲನ್ ರವರಿಂದ ವೀಣಾ ವಾದನ, ಕೆ.ಕೆ.ಭಾನುಪ್ರಕಾಶ್ ಮೃದಂಗ, ಎಂ.ಕೆ.ವಾಸವಿ ಘಟಂ, ಮಹಾಲಿಂಗಯ್ಯ ಮಠದ್ ತಂಡದವರಿಂದ ಗಾಯನ , ಬೆಂಗಳೂರಿನ ವಿನಯ್‌ಶರ್ವ ಹಾಗೂ ತಿರುಪತಿಯ ಬಿ.ರಘುನಾಥ್ ರವರುಗಳಿಂದ ಗಾಯನ, ವಿ.ಗೋವರ್ಧನ್ ಪಿಟೀಲು, ಕೆ.ಎಸ್.ಪ್ರಶಾಂತ್ ಮೃದಂಗ, ಗಿರಿನಾಥ್ ಪಿಟೀಲು, ವೇಣುಗೋಪಾಲ್ ತಬಲ ಕಾರ್ಯಕ್ರಮಗಳು ಇರುತ್ತದೆ.