ಗುಡಿಬಂಡೆ: ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಇರುವ ವಿವಿಧ ಹನುಮ ಮತ್ತು ರಾಮ ಮಂದಿರಗಳಲ್ಲಿ ಹನುಮ ಜಯಂತಿಯನ್ನು ಸಡಗರ-ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹನುಮ ಜಯಂತಿಯ ಪ್ರಯುಕ್ತ ರಾಮ ಮತ್ತು ಹನುಮನ ದೇವಸ್ಥಾನಗಳನ್ನು ತಳಿರು ತೋರಣ ಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯಗಳಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು.
ಪಟ್ಟಣದ ಹೊರವಲಯದ ವಾಪಸಂದ್ರ ಆಂಜನೇಯ ಸ್ವಾಮಿ ದೇವಾಲಯ, ಪಟ್ಟಣದ ಮಾರುತಿ ವೃತ್ತದ ಬಾಲಾಂಜನೇಯ ಸ್ವಾಮಿ, ಆಸ್ಪತ್ರೆ ಬಳಿಯ ಆಂಜನೇಯ ಸ್ವಾಮಿ, ಉಲ್ಲೋಡು ಬಯಲಾಂಜನೇಯ ಸ್ವಾಮಿ ಹಾಗೂ ಮೇಡಿಮಾಕಲಹಳ್ಳಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.
ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಹರಕೆ ಹೊತ್ತ ನೂರಾರು ಭಕ್ತರು ದೇವಾಲಯಗಳಿಗೆ ತೆರಳಿ ಹನುಮನ ಕೃಪೆಗೆ ಪಾತ್ರರಾದರು.