ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್‌ನಲ್ಲಿ ಮೂವರು ಕಾಡಂಚಿನ ರೈತರನ್ನು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಹಾಗೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ದಲಿತ ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆ ನೇತೃತ್ವದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಮುನಿವೆಂಕಟಪ್ಪ ಎಂ.ಪಿ., ತೋಮಿಯಾರ್ ಪಾಳ್ಯದ ಮೂವರು ರೈತರ ಸಾವಿನ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಯಬೇಕು. ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯ ಇಲಾಖೆಯಿಂದ ದಬ್ಬಾಳಿಕೆಗೆ ಒಳಗಾಗುತ್ತಿರುವುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ; Chikkaballapur News: ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ
ರಾಜ್ಯ ಸರ್ಕಾರ ಕಂದಾಯ ಅಧಿಕಾರಿಗಳ ನೇತೃತ್ವದ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಹಿಂಪಡೆದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು. ಮೃತರ ಕುಟುಂಬಗಳಿಗೆ ಕನಿಷ್ಠ ರೂಪಾಯಿ 5 ಕೋಟಿ ಪರಿಹಾರ ಘೋಷಿಸಬೇಕು. ಎನ್‌ಕೌಂಟರ್ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಂತೆ ಕೊಲೆ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಮತ್ತೊಬ್ಬ ನಾಯಕ ಕೆ.ಸಿ. ರಾಜಕಾಂತ್ ಮಾತನಾಡಿ, ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಈ ಪ್ರಕರಣದ ಕುರಿತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು, ಮೃತರ ಕುಟುಂಬಗಳಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಿಐಟಿ ಅಧ್ಯಕ್ಷ ಜಿ. ಸಿದ್ದಗಂಗಪ್ಪ, ಕೆಪಿಆರ್‌ಎಸ್ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಎಸ್. ರಾಜಶೇಖರ್, ಲಕ್ಷ್ಮೀನಾರಾಯಣ ರೆಡ್ಡಿ, ಎಂ.ಎಸ್. ಆನಂದ್, ಸಿ.ಜಿ. ಗಂಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.