ಚಿಕ್ಕಬಳ್ಳಾಪುರ: ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಗಳಲ್ಲಿ ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್.ಜಾನಕಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಅವರ ಸೇವೆ, ಮಾನವೀಯತೆ ಮತ್ತು ಸಮಾಜಮುಖಿ ಬದುಕನ್ನು ಸ್ಮರಿಸಿ, ಇಂದಿನ ಪೀಳಿಗೆಗೆ ಅವರ ಆದರ್ಶಗಳು ದಾರಿದೀಪವಾಗಲಿ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು : ಕೃಷ್ಣಕುಮಾರಿ
ಶ್ರದ್ಧಾಂಜಲಿ ಸಭೆಯಲ್ಲಿ ದಿವಂಗತರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕೋಡಿರಂಗಪ್ಪ, ಎಸ್. ಜಾನಕಿ ತಮ್ಮ ಅಮೋಘ ಗಾಯನದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದರೆ, ಚನ್ನಮ್ಮ ದೇವೇಗೌಡ ಅವರು ಸರಳತೆ, ಅನ್ನದಾನ, ಅತಿಥಿ ಸತ್ಕಾರ ಮತ್ತು ಸೇವಾಭಾವದಿಂದ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಎಸ್. ಜಾನಕಿ, ಸಂಗೀತ ಲೋಕದ ಶಾರದೆ ಎಂದೇ ಗುರುತಿಸಿಕೊಂಡಿದ್ದು, ತಮ್ಮ ಕಂಠಸಿರಿಯ ಮೂಲಕ ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಲಾಯಿತು.