ಚಿಕ್ಕಬಳ್ಳಾಪುರ : ಹೆಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ.ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆ ಯಿಲ್ಲ. ಶೀಘ್ರವೇ ಸಂಸದ ಸಚಿವ ಶಾಸಕರ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್( MLA Pradeep Eshwar) ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ಪ್ರೇರಣಾ ಭಾಷಣ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಖಂಡಿತ ಈ ಕೆಲಸ ಆಗಲಿದೆ. ಆದರೂ ಹೆಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಡಾ.ಎಂ.ಸಿ.ಸುಧಾಕರ್, ಮೇಲೂರು ರವಿಕುಮಾರ್, ಗೌರಿಬಿದನೂರು ಪುಟ್ಟಸ್ವಾಮಿಗೌಡ, ಸುಬ್ಬಾರೆಡ್ಡಿ ಅವರ ಸಹಕಾರ ಪಡೆದು ಈ ಕೆಲಸ ಮಾಡಲಾಗುವುದು. ಈ ನೀರಿನ ಅಪಾಯಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
3ನೇ ಹಂತದ ಶುದ್ಧೀಕರಣ ಎಂಬುದು ಪಾಲಿಸಿ ಮ್ಯಾಟರ್ ಆಗಿದ್ದು ನನ್ನೊಬ್ಬನಿಂದ ಆಗುವಂತಹುದಲ್ಲ. ನನಗೆ ಇನ್ನಷ್ಟು ಶಕ್ತಿ ಬಂದಾಗ ಖಂಡಿತ ಇದನ್ನು ಮಾಡಿಸಿಯೇ ಮಾಡಿಸುತ್ತೇನೆ. ಇದು ಏಕಾಏಕಿ ಇವತ್ತು ಹೇಳಿ ನಾಳೆ ಆಗುವಂತಹುದಲ್ಲ. 16-17 ವರ್ಷಗಳ ಹಿಂದೆ ಪ್ರಾಜೆಕ್ಟ್ ರೆಡಿಯಾದರೆ ಈಗ ಎತ್ತಿನಹೊಳೆ ಯೋಜನೆ ಸಾಕಾರವಾಗುತ್ತಿದೆ. ಹೀಗಾಗಿ ನಾನೂ ಕೂಡ 3ನೇ ಹಂತದ ಶುದ್ಧೀಕರಣದ ಪರವಾಗಿ ಇದ್ದೇನೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.
ನಾನು ಈಗಿನಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಶಾಸಕನಲ್ಲ, ಬದಲಿಗೆ ಮುಂದಿನ ಜನಾಂಗಕ್ಕಾಗಿ ಪೈಟ್ ಮಾಡುವ ಮನಸ್ಸುಳ್ಳ ಶಾಸಕ. ನನಗೆ ಈಗ ಸೀಮಿತ ಶಕ್ತಿಯಿದೆ. ಹೆಚ್ಚಿನ ಪವರ್ ಬಂದಾಗ 3ನೇ ಹಂತದ ಶುದ್ಧೀಕರಣ ಮಾಡಿಯೇ ಮಾಡಲಾಗುವುದು. ಈ ವಿಚಾರದಲ್ಲಿ ಸಂಸದರು, ಸಂದೀಪ್‌ರೆಡ್ಡಿ, ಆಂಜನೇಯರೆಡ್ಡಿ, ಹರೀಶ್‌ರೆಡ್ಡಿ ಅವರ ಜನಪರ ಕಾಳಜಿಯನ್ನು ಅಭಿನಂದಿಸುತ್ತೇನೆ. ಎಲ್ಲರೂ ಕೂಡಿ ಮುಖ್ಯಮಂತ್ರಿಗಳ ಮನವೊಲಿಸುವ ಕೆಲಸ ಮಾಡೋಣ ಎಂದರು.
ಕೊಳಚೆ ನೀರು ಹರಿಸುವ ವಿಚಾರದಲ್ಲಿ ನೆಲಮಂಗಲ ಶಾಸಕ,ದೊಡ್ಡಬಳ್ಳಾಪುರ ಶಾಸಕ ಬೇಡ ಎಂದಿದ್ದಾರೆ. ಅವರಿಗೆ ಬೇಡವಾದ ನೀರು ನಮಗೆ ಏಕೆ ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಅವರು ನಮಗೆ ಬೇಡ ಎಂದಿದ್ದಾರೆ ಆದರೆ ಅವರಿಂದ ನಿಲ್ಲಿಸಲು ಆಗಿದೆಯಾ? ಎಂದು ಪ್ರಶ್ನಿಸಿದರು.
ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಈ ದೇಶದ ಭವಿಷ್ಯ.ಈ ಬಾರಿಯ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ ಎಂಬ ವಿಶ್ವಾಸವಿದೆ. ಸರಕಾರಿ ಶಾಲೆ ಸರಕಾರಿ ಆಸ್ಪತ್ರೆ ನಾವು ನಂಬಿರುವ ದೇವಾಲಯಗಳು. ಸರಕಾರಿ ಶಾಲೆಯ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಕಾರ್ಯ ಕ್ರಮಗಳ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ ಎಂದರು.
ಸರಕಾರಿ ಶಾಲೆಗಳನ್ನು ಐಐಟಿ, ಏಮ್ಸ್ ಮಾದರಿಯಲ್ಲಿ ಸರಕಾರಿ ಶಾಲೆಗಳನ್ನು ಸಜ್ಜು ಗೊಳಿಸುವ ಕನಸು ಕಾಣಲಾಗಿದೆ.ನನ್ನ ಸರಕಾರ ಇದನ್ನು ಮಾಡಿಯೇ ತೀರಲಿದೆ. ಈ ಬಾರಿ ಯ ಪರೀಕ್ಷೆಯಲ್ಲಿ ನನ್ನ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿನೂತನ ಮಾದರಿ ಗಳನ್ನು ಅಳವಡಿಸಿದ್ದು ಇವೆಲ್ಲಾ ಫಲಿತಾಂಶ ಸುಧಾಕರಣೆಗೆ ಅವಕಾಶ ಮಾಡಿ ಕೊಡಲಿವೆ ಎಂದರು.
ಐಐಟಿ, ಮೆಡಿಕಲ್ ಪರೀಕ್ಷೆಗಳಲ್ಲಿ ಟಾರ‍್ಸ್ಗಳು ನನ್ನ ವಿಧಾನ ಸಭಾ ಕ್ಷೇತ್ರದ ವಿದ್ಯಾರ್ಥಿಗಳು ಆಗಬೇಕು ಎಂದು ಕನಸು ಕಂಡಿದ್ದೇನೆ.ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ನನ್ನ ಕ್ಷೇತ್ರದ ಫಲಿತಾಂಶ ಟಾಪ್ 5ರಲ್ಲಿರಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ..ಪ್ರಭು, ಎಡಿಸಿ ಭಾಸ್ಕರ್, ಡಿಡಿಪಿಐ ರಮೇಶ್, ಬಿಇಒ ಸುಕನ್ಯಾ ಮತ್ತಿತರರು ಇದ್ದರು.