ಚಿಕ್ಕಬಳ್ಳಾಪುರ: ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿಗಳಿಗೆ ವಿನಿಯೋಗಿಸಿ ದಲಿತರಿಗೆ ಮೋಸ ಮಾಡುತ್ತಿದ್ದು, ಈ ಕೂಡಲೇ ಗ್ಯಾರೆಂಟಿಗಳಿಗೆ ದಲಿತರ ಹಣ ಬಳಸುವುದಿಲ್ಲ ಎಂದು ಘೋಷಿಸದಿದ್ದಲ್ಲಿ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ ಉಗ್ರ ಹೋರಾಟ ನಡೆಸುವುದಾಗಿ ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟ ರಮಣಪ್ಪ ಎಚ್ಚರಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಿಂಹಪಾಲು ಕೊಡುಗೆ ನೀಡಿರುವ ದಲಿತ ಸಮುದಾಯದ ಬೆನ್ನು ಮೂಳೆ ಮುರಿಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕಳೆದ 2023-24 ರಿಂದ 2025-26ನೇ ಸಾಲಿನವರೆಗೆ ದಲಿತರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಬರೋಬ್ಬರಿ 53,059 ಕೋಟಿ ರೂಗಳನ್ನು ಪಂಚ ಗ್ಯಾರೆಂಟಿಗಳಿಗೆ ಬಳಕೆ ಮಾಡುವ ಮೂಲಕ ದಲಿತರ ಅಭಿವೃದ್ಧಿಗೆ ತೊಡುಕನ್ನುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತದ ಬಜೆಟ್‌ನಲ್ಲಿ ದಲಿತ ಸಮುದಾಯಗಳಿಗೆ ಮೀಸಲಿಟ್ಟಿರುವ 40 ಸಾವಿರ ಕೋಟಿ ರೂ.ಗಳಲ್ಲಿ 13,433.48 ಕೋಟಿ ರೂಗಳನ್ನು ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡಿದೆ. ಸಾಲದೆಂಬಂತೆ ಗ್ಯಾರೆಂಟಿ ಗಳಿಗೆ ಬಳಕೆ ಮಾಡಿ ಉಳಿದ ಅನುದಾನದಲ್ಲಿಯೂ ಕೇವಲ ಶೇ.25 ರಷ್ಟು ಮಾತ್ರ ಬಿಡುಗಡೆ ಮಾಡುವ ಮೂಲಕ ಸಮುದಾಯವನ್ನು ವ್ಯವಸ್ಥಿತವಾಗಿ ತುಳಿಯುವ ಕಾರ್ಯವನ್ನು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೋರ್ಪಡಿಕೆಗೆ ಸಾವಿರಾರು ಕೋಟಿ ರೂ. ದಲಿತರಿಗೆ ಮೀಸಲಿಟ್ಟಿರುವುದಾಗಿ ರಾಜ್ಯ ಸರ್ಕಾರವು ಸುಳ್ಳುಗಳನ್ನು ಹೇಳುವ ಮೂಲಕ ಇತರೆ ಸಮುದಾಯಗಳಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಆದರೆ ವಾಸ್ತವದಲ್ಲಿ ಅನುದಾನವಿಲ್ಲದೆ ಸಮುದಾಯಕ್ಕೆ ಸೇರಿದ ಅಂಬೇಡ್ಕರ್, ವಾಲ್ಮೀಕಿ ಸೇರಿ ಇತರೆ ನಿಗಮ ಮಂಡಳಿಗಳಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ದಲಿತರಿಗೆ ನೀಡುವ ಅನುದಾನವನ್ನಷ್ಟೇ ಬಜೆಟ್‌ನಲ್ಲಿ ಘೋಷಣೆ ಮಾಡಲಿ ಎಂದು ನುಡಿದರು.
ಕಾಂಗ್ರೆಸ್‌ನ ಶಾಸಕರು, ಸಚಿವರು ಸೇರಿ ದಲಿತ ಸಮುದಾಯಗಳ ಒತ್ತಾಯಕ್ಕೆ ಮಣಿದ ಸಿಎಂ ಸಿದ್ದರಾಮಯ್ಯರು ಕಾಲಂ 7ಡಿ ತೆಗೆದು ಇದೀಗ ಕಾಲಂ 7ಸಿ ಸೇರಿಸಿ ಇತರೆ ಸಮುದಾಯದ ನಿಗಮಗಳ ಅನುದಾನ ಬಿಟ್ಟು ಕೇವಲ ದಲಿತರ ನಿಗಮಗಳ ಅನುದಾನ ಗ್ಯಾರೆಂಟಿಗಳಿಗೆ ವಿನಿಯೋಗಿಸು ತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಗ್ಯಾರೆಂಟಿಗಳಿಗೆ ದಲಿತ ಅನುದಾನ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಬೇಕು. ಅಲ್ಲದೆ ಸಂವಿಧಾನ ಎಲ್ಲರದ್ದೂ ಆಗಿದ್ದರೂ ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಕೇವಲ ದಲಿತರ ಅನುದಾನ ಬಳಕೆ ಮಾಡುತ್ತಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಖಜಾನೆಯಿಂದ ಹಣ ನೀಡಬೇಕು, ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡು ಅನುದಾನ ವಾಪಸ್ಸು ನೀಡಬೇಕು, ಎಸ್‌ಸಿ-ಎಸ್‌ಟಿ ನಿಗಮಗಳಿಗೆ ತಲಾ 1500 ಕೋಟಿ ನೀಡಬೇಕು ಕಾಲಂ 7ಸಿ ರದ್ದುಗೊಳಿಸುವ ಕುರಿತು ಪ್ರಸ್ತಾಪ ಮಾಡಬೇಕೆಂದು ಆಗ್ರಹಿಸಿದರು.
ಇಲ್ಲವಾದರೆ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ ಸಿಎಂ ಮನೆ ಮುತ್ತಿಗೆ, ವಿಧಾನಸೌಧ ಚಲೋ, ಸಚಿವರು ಹಾಗು ಶಾಸಕರಿಗೆ ಘೇರವ್ ಹಾಕುವುದು ಸೇರಿ ಉಗ್ರ ಹೋರಾಟಗಳನ್ನು ನಡೆಸುವುದಾಗಿ ಎಚ್ಚರಿಸಿದರು.
ಬಿ.ಎಚ್.ನರಸಿಂಹಪ್ಪ, ಹರಿಪ್ರಸಾದ್, ಪ್ರಕಾಶ್, ರಮೇಶ್, ಮಹೇಶ್, ಮುನಿರಾಜು, ವೇಣು, ನರಸಿಂಹಮೂರ್ತಿ ಇದ್ದರು.