ಚಿಂತಾಮಣಿ : ಶಿಷ್ಯನಾದವನು ಗುರುವಿಗೆ ಭಕ್ತಿಯಿಂದ ಶರಣಾಗಬೇಕು. ಆಗ ಕರುಣಾ ಮಯಿಯಾದ ಗುರುವು ಶಿಷ್ಯನ ಎಲ್ಲಾ ಭಾರವನ್ನು ತಾನೇ ಹೊತ್ತುಕೊಳ್ಳುತ್ತಾನೆ ಎಂದು ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠದ ಸಭಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದಿವಂಗತ ಶ್ರೀಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳಿಗೆ ಮರಣೋತ್ತರ ವಾಗಿ 1 ಲಕ್ಷ ನಗದು ಮೂಲಕ ಪ್ರಪ್ರಥಮ ನಾರೇಯಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ತತ್ವಬೋಧನೆಗಳಿಗೆ ಭಾವಾನುವಾದ, ತಾತ್ಪರ್ಯಗಳನ್ನು ರಚಿಸಿ ಅಪಾರ ಕೊಡುಗೆಯನ್ನು ನೀಡಿದ್ದ ದಿವಂಗತ ಶ್ರೀಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳಿಗೆ ಮರಣೋತ್ತರವಾಗಿ 1 ಲಕ್ಷ ನಗದು ಬಹುಮಾನವನ್ನು ಅವರ ಧರ್ಮಪತ್ನಿ ನಾಗಮಣಿ ಲಕ್ಷ್ಮೀನರಸಿಂಹಶಾಸ್ತ್ರಿಗಳಿಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಪ್ರದಾನ ಮಾಡಿ ಮಾತನಾಡಿದರು.
ಇದನ್ನೂ ಓದಿ: Chinthamani News: ನಿವೃತ್ತ ನೌಕರರ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಶಿಷ್ಯನ ಮೇಲೆ ಕರುಣೆಯುಳ್ಳವನೇ ಕಾರುಣ್ಯವುಳ್ಳ ಗುರುವಾಗುತ್ತಾನೆ. ಶಿಷ್ಯನು ಉದ್ಧಾರ ವಾಗಬೇಕಾದರೆ ಗುರುಕಾರುಣ್ಯ ಗಳಿಸಬೇಕು. ಗುರುವಿನ ತಪೋಮಹಿಮೆ ಅಪಾರವಾದುದು.
ಗುರುವಿನ ತಪೋಮಹಿಮೆ ಅಪಾರವಾದುದು. ಗುರುಕೃಪೆಯಿಂದ ಶಿಷ್ಯನ ಮನಸ್ಸಿನ ಅಲೆದಾಟ ನಿಲ್ಲುತ್ತದೆ. ಶರೀರ ಸ್ಥಿರವಾಗುತ್ತದೆ. ಹಣೆಬರಹವನ್ನು ಬದಲಾಯಿಸುವ ಶಕ್ತಿ ಕೇವಲ ಗುರುವಿಗೆ ಮಾತ್ರ ಇರುತ್ತದೆ ಎಂದು ಕೈವಾರದ ತಾತಯ್ಯನವರು ಹೇಳಿದ್ದಾರೆ ಎಂದರು.
ಶ್ರೀ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳು ಅಪಾರವಾದ ಜ್ಞಾನಿಗಳು. ಕಾಲಜ್ಞಾನಿ ಕೈವಾರ ತಾತಯ್ಯನವರ ಹಲವಾರು ತತ್ವಬೋಧನೆಗಳಿಗೆ ಅರ್ಥಸಹಿತ ವ್ಯಾಖ್ಯಾನವನ್ನು ಮಾಡಿ ದ್ದಾರೆ. ತಾತಯ್ಯನವರ ತತ್ವಬೋಧನೆಗಳಲ್ಲಿರುವ ಗೂಡಾರ್ಥಗಳನ್ನು ಅರ್ಥಮಾಡಿ ಕೊಂಡು, ಅದಕ್ಕೆ ಪೂರಕವಾಗಿ ಹಲವಾರು ಸಾಕ್ಷಿಗಳೊಂದಿಗೆ ತಾತ್ಪರ್ಯವನ್ನು ತಿಳಿಸಿ ಕೊಟ್ಟಿದ್ದಾರೆ.
ಅವರು ಸಲ್ಲಿಸಿರುವ ಸೇವೆ ಅನನ್ಯವಾದುದು. ಅವರ ಜೀವನದ ಬಹಳಷ್ಟು ಸಮಯವನ್ನು ಕೈವಾರ ತಾತಯ್ಯನವರ ಸೇವೆಗಾಗಿಯೇ ಮೀಸಲಿಟ್ಟಿದ್ದರು. ಇವರ ಸೇವೆಯನ್ನು ಗುರುತಿಸಿ ಕೈವಾರ ತಾತಯ್ಯನವರ 300ನೇ ವರ್ಷದ ಜಯಂತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾರೇಯಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳ ಪುತ್ರ ಕೈಪು ಭಾಸ್ಕರ್ ಶರ್ಮರವರು ಮಾತನಾಡಿ ತಂದೆಯವರು ಕೈವಾರ ತಾತಯ್ಯನವರ ಭಕ್ತರಾಗಿದ್ದರು. 1960 ರಲ್ಲಿಯೇ ಕೈವಾರ ತಾತಯ್ಯನವರ ಬಗ್ಗೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿ ದ್ದರು. ಜೀವನದ ಕೊನೆಯ ಘಟ್ಟದಲ್ಲಿಯೂ ಕೈವಾರ ತಾತಯ್ಯನವರ ಕೃತಿಗಳಿಗೆ ವ್ಯಾಖ್ಯಾನ ಗಳನ್ನು ಬರೆದಿದ್ದಾರೆ. ತಂದೆಯವರ ಸೇವೆಯನ್ನು ಸ್ಮರಿಸಿಕೊಂಡು ಪ್ರಶಸ್ತಿ ನೀಡಿರುವ ಶ್ರೀಯೋಗಿನಾರೇಯಣ ಮಠಕ್ಕೆ ನಮ್ಮ ಕುಟುಂಬವರ್ಗದವರು ಅಭಾರಿ ಗಳಾಗಿದ್ದೇವೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಶ್ರೀರಾಮ ಭವತಾರಕ ಮಂತ್ರದ ಸಾಮೂಹಿಕ ಪಠಣೆಯೊಂದಿಗೆ ಗುರುಪಾದುಕಾ ಪೂಜೆಯನ್ನು ನೆರವೇರಿಸಲಾಯಿತು. ವೇದಿಕೆಯಲ್ಲಿ ಸದ್ಗುರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಉದ್ಘಾಟನೆ ನೆರವೇರಿಸಲಾಯಿತು.
ಸಭಾಂಗಣದ ಮುಖ್ಯ ವೇದಿಕೆಯಲ್ಲಿ ವಿದ್ವಾನ್ ಶ್ರೀಹರ್ಷ ರಾಘವ್ ರವರಿಂದ ಸದ್ಗುರು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಕೈಪು ಭಾಸ್ಕರ್ ಶರ್ಮ ರವರು ಪಿಟೀಲಿನಲ್ಲಿ, ವಿದ್ವಾನ್ ಕೈವಾರ ರಾಮಕುಮಾರ್ ರವರು ಮೃದಂಗದಲ್ಲಿ ಸಹಕರಿಸಿದರು. ಕೈವಾರ ತಾತಯ್ಯನವರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮನಸೆಳೆದರು.
ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿದುಷಿ ಸುಧಾಮಣಿ ವೆಂಕಟರಾಘವ್ ರವರು ಪ್ರಾರ್ಥಿಸಿದರು. ನಾರೇಯಣ ಪ್ರಶಸ್ತಿಯು ಪ್ರಶಸ್ತಿ ಫಲಕದೊಂದಿಗೆ ಒಂದು ಲಕ್ಷ ರೂಗಳನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಕೈವಾರ ಮಠ ಟ್ರಸ್ಟ್ನ ಎಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಉಪಸ್ಥಿತರಿದ್ದರು.