ಚಿಕ್ಕಬಳ್ಳಾಪುರ : "ವಿಶ್ವದ ಅನೇಕ ಸಾಮಾಜಿಕ ಮತ್ತು ನೈತಿಕ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿ ಯ ಆಚಾರ-ವಿಚಾರಗಳ ಅನುಷ್ಠಾನವೇ ಶಾಶ್ವತ ಪರಿಹಾರ" ಎಂದು ಆಂಧ್ರಪ್ರದೇಶದ ಪ್ರಸೂತಿ ಮತ್ತು ಮಕ್ಕಳ ಆರೈಕೆ ವೈದ್ಯಕೀಯ ಇಲಾಖೆಯ ಸಲಹೆಗಾರ ಸಂತೋಷ್ ಕುಮಾರ್ ಕಾರ್ಲೇಟಿ ಅಭಿಪ್ರಾಯಪಟ್ಟರು.
ನಗರ ಹೊರವಲಯ ಕೆ.ವಿ. ಕ್ಯಾಂಪಸ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ವಿಶೇಷ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ವಿವಿಧ ಧಾರ್ಮಿಕ ಸೃಷ್ಟಿ ತತ್ವಗಳನ್ನು ಉಲ್ಲೇಖಿಸಿ, ಸನಾತನ ಧರ್ಮದ ವೈಶಿಷ್ಟ್ಯತೆಯನ್ನು ವಿವರಿಸಿದರು.
ಹಿಂದೂ ಧರ್ಮಕ್ಕೆ ನಿರ್ದಿಷ್ಟ ಜನನ ಅಥವಾ ಅಂತ್ಯದ ದಿನಾಂಕವಿಲ್ಲದೆ, ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗಗಳ ಮೂಲಕ ಕಾಲಮಾನವನ್ನು ಖಗೋಳಶಾಸ್ತ್ರದ ಆಧಾರದ ಮೇಲೆ ವಿವರಿಸಲಾಗಿದೆ. ಲೋಹಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ವಸ್ತ್ರ ತಯಾರಿಕಾ ಕಲೆಗಳಲ್ಲಿ ಭಾರತೀಯರ ಸಾಧನೆಗಳನ್ನು ಅವರು ಸ್ಮರಿಸಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರುಗಳ ಋಣ ತೀರಿಸಲಾಗದು: ಕೆ.ವಿ.ನವೀನ್ ಕಿರಣ್
ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿಶ್ವಪ್ರಸಿದ್ಧ ವಿದ್ಯಾಕೇಂದ್ರಗಳಾಗಿದ್ದು, ಪ್ರಪಂಚದ ವಿವಿಧ ದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದರು ಎಂದು ತಿಳಿಸಿದರು. ನಳಂದಾ ವಿಶ್ವವಿದ್ಯಾಲಯದ ಐತಿಹಾಸಿಕ ವೈಭವವನ್ನು ವಿಶೇಷವಾಗಿ ಉಲ್ಲೇಖಿಸಿದರು.
ಇಂದಿನ ಪಾಶ್ಚಾತ್ಯ ಸಮಾಜದಲ್ಲಿ ಅತಿಯಾದ ಭೋಗಲಾಲಸೆಯಿಂದ ಯುವಜನತೆ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಹಾಗೂ ಕ್ರೌರ್ಯ ಹೆಚ್ಚುತ್ತಿರುವುದು ವಿಜ್ಞಾನ ಕ್ಕೂ ಸವಾಲಾಗಿದೆ ಎಂದು ಹೇಳಿದರು. ಭಾರತೀಯ ಕುಟುಂಬ ಪದ್ಧತಿ ಮಾನವನ ವಿಕಾಸ ಮತ್ತು ನೈತಿಕ ಉನ್ನತಿಗೆ ಬಲವಾದ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಸಿ.ವಿ.ರಾಮನ್, ಡಾ.ಎಸ್.ಚಂದ್ರಶೇಖರ್, ಸರ್ ಎಂ.ವಿಶ್ವೇಶ್ವರಯ್ಯ ಮುಂತಾದ ವಿಶ್ವಪ್ರಸಿದ್ಧ ಭಾರತೀಯ ವಿಜ್ಞಾನಿಗಳ ಸಾಧನೆಗಳನ್ನು ಸ್ಮರಿಸಿ, ಭಾರತೀಯರ ವೈಜ್ಞಾನಿಕ ಪ್ರತಿಭೆ ವಿಶ್ವಮಾನ್ಯ ವಾಗಿದೆ ಎಂದು ಹೇಳಿದರು.
ಚೌದಶ ಸಂಸ್ಕಾರಗಳು ನಮ್ಮ ಸಂಸ್ಕೃತಿಯಲ್ಲಿ ಅಡಗಿದ್ದು, ಗರ್ಭಧಾರಣೆಯ ದಿನದಿಂದ ಮೊದಲ 1000 ದಿನಗಳು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತಿ ಮುಖ್ಯವಾಗಿವೆ ಎಂದು ತಿಳಿಸಿದರು.
ಈ ಅವಧಿಯಲ್ಲಿ ತಾಯಿಯ ಪೌಷ್ಟಿಕ ಆಹಾರ, ತಾಯಿ ಮಡಿಲಿನ ಶಿಕ್ಷಣ ಹಾಗೂ ಕೌಟುಂಬಿಕ ಮೌಲ್ಯಗಳು ಮಗುವಿನ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ತಾಯಿ ಹಾಲು ಮಗುವಿನ ಆರೋಗ್ಯಕ್ಕಾಗಿ ಅತ್ಯಗತ್ಯವಾಗಿದ್ದು, ಅನೇಕ ಶಾರೀರಿಕ ಹಾಗೂ ಮಾನಸಿಕ ನ್ಯೂನತೆ ಗಳನ್ನು ತಪ್ಪಿಸಲು ಸಹಕಾರಿ ಎಂದು ವಿವರಿಸಿದರು. ಹೈದರಾಬಾದ್‌ನ 10 ಆಸ್ಪತ್ರೆಗಳಲ್ಲಿ “ಮದರ್ಸ್ ಮಿಲ್ಕ್ ಬ್ಯಾಂಕ್” ಮೂಲಕ ತಾಯಿ–ಮಗು ಆರೈಕೆ ಕಾರ್ಯಗಳು ನಡೆಯುತ್ತಿರುವುದನ್ನು ಉದಾ ಹರಣೆಯಾಗಿ ನೀಡಿದರು.
ಈ ಕಾರ್ಯಕ್ರಮದ ರೂವಾರಿಗಳಾದ ಆರ್. ನಾರಾಯಣಪ್ಪ, ಹನುಮಂತರೆಡ್ಡಿ, ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಕನಕಶ್ರೀ ಮಂಜುನಾಥ್, ಸಾವಿತ್ರಿ, ದೀನದಯಾಳು ಜನಸೇವಾ ಸಮಿತಿ ಪ್ರತಿನಿಧಿಗಳು, ಡಾ.ಟಿ.ಗೋವಿಂದಪ್ಪ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.