ಚಿಕ್ಕಬಳ್ಳಾಪುರ: ಕ್ಷೀರಸಂಜೀವಿನ ಯೋಜನೆ ಮೂಲಕ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಸು ಖರೀದಿಗೆಂದೇ 7 ಲಕ್ಷ ಅನುದಾನ ನೀಡಲಾಗುತ್ತಿದ್ದು ಈ ಬಾರಿ ಚಲಕಾಯಲಪರ್ತಿ ಡೇರಿಗೆ ಕೊಡಲಾಗಿದೆ. ಇದರಲ್ಲಿ 14 ಮಹಿಳೆಯರಿಗೆ 45 ಸಾವಿರದಂತೆ ಬಡ್ಡಿರಹಿತ ಸಾಲವಿತರಣೆ ಮಾಡಲಾಗುತ್ತಿದೆ ಎಂದು ಚಿಮುಲ್ ನಿರ್ದೇಶಕ ಹಾಗೂ ಕೆಎಂಎಫ್ ಸಾಮನಿರ್ದೇಶಿತ ಸದಸ್ಯ ಭರಣಿ ವೆಂಕಟೇಶ್ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಚಿಮುಲ್ ಶಿಬಿರ ಕಚೇರಿಯಲ್ಲಿ ಏರ್ಪಡಿಸಿದ್ದ ಪರಿಕರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಸರಕಾರ ಮತ್ತು ಕೆ.ಎಂ.ಎಫ್ ಜಂಟಿಯಾಗಿ ಅನುಷ್ಠಾನಗೊಳಿಸಿರುವ ಕ್ಷೀರ ಸಂಜೀವಿನಿ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದ ಬಡ ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವುದು. ಅವರ ಜೀವನೋಪಾಯವನ್ನು ಸುಧಾರಿಸುವುದೇ ಆಗಿದೆ. ಈ ಯೋಜನೆ ಯ ಮೂಲಕ ಮಹಿಳಾ ಡೈರಿಗಳನ್ನು ಸ್ಥಾಪಿಸಿ ತರಬೇತಿ ಮತ್ತು ತಾಂತ್ರಿಕ ನೆರವು ನೀಡುವು ದಾಗಿದೆ. ಹಸು ಎಮ್ಮೆ ಖರೀಧಿಸಲು ಬಡ್ಡಿರಹಿತ ಸಾಲದ ಸೌಲಭ್ಯ ಒದಗಿಸಲು ಸಹ ಕ್ರಮವಹಿಸಲಾಗಿದೆ ಎಂದರು.
ಇದನ್ನೂ ಓದಿ: Chinthamani News: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈಜು ಕಲೆ ಅಗತ್ಯ: ಕೇಶವ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೇಶವ
ಚಿಕ್ಕಬಳ್ಳಾಪುರ ತಾಲೂಕಿನ 15 ಮಹಿಳಾ ಹಾಲು ಉತ್ಪಾದಕರ ಸಹಕರ ಸಂಘಗಳಿರುವುದು ಹೆಮ್ಮೆಯ ವಿಚಾರವಾಗಿದೆ. ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವಲ್ಲಿ ಈ ಮಾತೆಯರ ಶ್ರಮ ಅಪಾರವಾಗಿದೆ.ಇಂತಹ ಮಹಿಳಾ ಹಾಲು ಉತ್ಪಾದಕರನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕ್ಷೀರ ಸಂಜೀವಿನಿ ಮೂಲಕ ಸ್ಟೆಫ್ 5 ಯೋಜನೆ ಚಾಲ್ತಿಯಲ್ಲಿದೆ. ಈ ಮೂಲಕ ಡೈರಿ ಸ್ಥಾಪನೆಗೆ ಬೇಕಾದ ಖುರ್ಚಿ ಟೇಬಲ್ ಮೊದಲಾಗಿ ಬೇಕಾದ ಎಲ್ಲಾ ಪರಿಕರಗಳನ್ನು ಒದಗಿಸಲಾಗುವುದು.
ಬಡ್ಡಿರಹಿತವಾಗಿ ಒಂದು ಹಸು ಖರೀದಿಸಲು 45 ಸಾವಿರ ನೀಡಲಾಗುತ್ತಿದೆ. ಚಲಕಾಯಲ ಪರ್ತಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 7 ಲಕ್ಷ ಸಾಲ ನೀಡಲಾಗುತ್ತಿದೆ. ಹಂತಹAತವಾಗಿ ಒಂದು ತಾಲೂಕಿಗೆ ಎರಡೋ ಮೂರೋ ಬರಲಿವೆ. ನನ್ನ 7 ವರ್ಷಗಳ ಅವಧಿಯಲ್ಲಿ ಸ್ಟೆಫ್ ಯೋಜನೆಯನ್ನು ಕ್ಷೇತ್ರದ ಎಲ್ಲಾ ಡೇರಿಗಳಿಗೆ ಒದಗಿಸಿದ್ದೇನೆ. 7 ಲಕ್ಷ ಹಣದಲ್ಲಿ 14 ಮಂದಿಗೆ ಸಾಲ ನೀಡಬಹುದು, ಹಾಗೆಯೇ ಮರುಪಾವತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ಟೆಫ್ ಯೋಜನೆಯ ಉಪ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ 14 ಸದಸ್ಯರಿಗೆ ಹಸು ಖರೀದಿ ಮಾಡಲು ತಲಾ 45 ಸಾವಿರ ಸಾಲ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಹೀಗೆ ಪಡೆದ ಹಣದಲ್ಲಿ ಹಸು ಖರೀದಿ ಮಾಡಿ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಿ ದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ. ಜಿಲ್ಲೆಯಲ್ಲಿ ಈಗಾಗಲೇ 5 ಮಂದಿ ಮಹಿಳೆಯರಿಗೆ ಸಾಲ ನೀಡಿದ್ದು ಅವರು ಹಸು ಖರೀದಿ ಮಾಡಿದ್ದಾರೆ. ಕೆಲವರು ಇರೋ ಹಸುವನ್ನೇ ತೋರಿಸಿ ಹಣ ಪಡೆದು ಸುಮ್ಮನಾಗುತ್ತಾರೆ. ಹೀಗಾಗಬಾರದು ಎಂದು ಕಿವಿ ಮಾತು ಹೇಳಿದರು. ರಾಸುಗಳಿಗೆ 80 ಸಾವಿರ ಪ್ರತಿಹಸುವಿಗೆ ವಿಮೆ ಮಾಡಿಸಲಾಗುತ್ತಿದೆ. ಸಾಲ ಪಡೆದವರು ತಿಂಗಳಿಗೆ 2 ಸಾವಿರದಂತೆ ಮರುಪಾವತಿ ಮಾಡಬೇಕಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಪ್ರತಿದಿನ 5 ಲಕ್ಷ 4 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ.ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗದಂತೆ ನೋಡಿ ಕೊಳ್ಳಲು ಹಸಿ ಮೇವು ಬೆಳೆಯುವ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗಿದೆ. ಎಕರೆಗೆ ಮೂರುವರೆ ಸಾವಿರದಂತೆ ಪ್ರೋತ್ಸಾಹದನ ಕೂಡ ನೀಡಲಾಗು ತ್ತಿದೆ. ಇದೇ ಕಾರಣವಾಗಿ ಬೇಸಿಗೆ ಇದ್ದರೂ ಕೂಡ ಹಾಲಿನ ಶೇಖರಣೆ ಏರುಗತಿಯಲ್ಲಿರುವು ದನ್ನು ಕಾಣುತ್ತೇವೆ ಎಂದರು.
ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದ ನಿರ್ದೇಶಕಿ ಶ್ರೀಮತಿ ಸುಧಾ ಮಾತನಾಡಿ ಹೈನೋದ್ಯಮ ಮಹಿಳೆಯರ ಪಾಲಿಗೆ ವರದಾನವಾಗಿದೆ.ಹೆಚ್ಚೆಚ್ಚು ಮಹಿಳಾ ಸಂಘಗಳು ಆದಲ್ಲಿ ಗ್ರಾಮ ಗಳಲ್ಲಿ ಆರ್ಥಿಕ ಚೈತನ್ಯ ಉಂಟಾಗಲಿದೆ. ಪ್ರತಿಯೊಬ್ಬರೂ ಕೂಡ ಹಸುಗಳನ್ನು ಸಾಕುವ ಮೂಲಕ ಹಾಲು ಸರಬರಾಜು ಮಾಡಬೇಕು.ಇದಕ್ಕೆ ಒಕ್ಕೂಟ ಬೆಂಬಲವಾಗಿ ನಿಲ್ಲಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುತ್ತಣ್ಣ, ಸ್ಟೆಫ್ ಯೋಜನೆಯ ಉಪವ್ಯವಸ್ಥಾಪಕ ಮಂಜುನಾಥ್, ಪ್ರಭಾರ ವ್ಯವಸ್ಥಾಪಕ, ಹಿರಿಯ ಸಹಕಾರಿ ಚಲಕಾಯಲಪರ್ತಿ ಹಾಲು ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ, ಉಪ ವ್ಯವಸ್ಥಾಪಕ ಡಾ. ಮನೋರಂಜನ್ ರೆಡ್ಡಿ, ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಉಪಾಧ್ಯಕ್ಷರು ಕಾರ್ಯದರ್ಶಿಗಳು, ವಿಸ್ತರಣಾಧಿಕಾರಿ ಶ್ರೀನಿವಾಸ್, ಅರುಣಾ, ಹರೀಶ್, ಶುಭ, ಮೀನಾ ಮತ್ತಿತರರು ಇದ್ದರು.