ಚಿಕ್ಕಬಳ್ಳಾಪುರ: ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳಿಸಿ, ಹಳ್ಳಿಗಳ ನಡುವೆ ಕ್ರೀಡಾ ಸ್ಫೂರ್ತಿ ಮತ್ತು ಸಾಮಾಜಿಕ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಈಶ ಗ್ರಾಮೋತ್ಸವ–2026ರ ಕ್ಲಸ್ಟರ್ ಪಂದ್ಯಾವಳಿ ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಸಂಭ್ರಮ, ಸಡಗರ ಮತ್ತು ಭರ್ಜರಿ ಪೈಪೋಟಿಯೊಂದಿಗೆ ನಡೆಯಿತು.
ಈಶ ಔಟ್‌ರೀಚ್ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ 380 ಪುರುಷ ವಾಲಿಬಾಲ್ ಆಟಗಾರರು ಹಾಗೂ 100 ಮಹಿಳಾ ಥ್ರೋಬಾಲ್ ಆಟಗಾರ್ತಿಯರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪಂದ್ಯಾವಳಿಗೆ ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಹುರಿದುಂಬಿಸಿದ ಪರಿಣಾಮ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ರೋಚಕ ಪೈಪೋಟಿಯ ಬಳಿಕ ಪುರುಷರ ವಾಲಿಬಾಲ್ ವಿಭಾಗದಲ್ಲಿ ಜಂಗಮಕೋಟೆ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆದು ವಿಭಾಗೀಯ ಹಂತಕ್ಕೆ ಅರ್ಹತೆ ಗಳಿಸಿತು. ಮಾಸ್ತೇನಹಳ್ಳಿ ಗ್ರಾಮದ ಅಪ್ಪು ಬಾಯ್ಸ್ ತಂಡ ದ್ವಿತೀಯ, ಬೀಚಗಾನಹಳ್ಳಿ ತಂಡ ತೃತೀಯ ಹಾಗೂ ಸೋಮೇನಹಳ್ಳಿ ಬಾಯ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಇದನ್ನೂ ಓದಿ: Chikkaballapur News: ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ 4237 ರಕ್ತದಾನಿಗಳಿಗೆ ಕೋಟಿ ನಮನ: ಕೆ.ವಿ. ನವೀನ್ ಕಿರಣ್
ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ಹೊನ್ನೇನಹಳ್ಳಿಯ ಜೈ ಭಜರಂಗಿ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ಕೋಲಾರದ ಸಿ.ಎಸ್.ಎ. ತಂಡ ದ್ವಿತೀಯ, ಹೊನ್ನೇನಹಳ್ಳಿಯ ಜೈ ಹನುಮಾನ್ ತಂಡ ತೃತೀಯ ಹಾಗೂ ಏನಂಗೂರು ತಂಡ ನಾಲ್ಕನೇ ಸ್ಥಾನ ಗಳಿಸಿತು. ವಿಜೇತ ತಂಡಗಳು ಆಗಸ್ಟ್‌ನಲ್ಲಿ ನಡೆಯಲಿರುವ ವಿಭಾಗೀಯ ಹಂತದ ಪಂದ್ಯಾವಳಿಗೆ ಅರ್ಹತೆ ಪಡೆದಿವೆ.
ಮುಖ್ಯ ಅತಿಥಿಗಳಾಗಿ ಭಾರತವನ್ನು ಗಾಲ್ಫ್ ಕ್ರೀಡೆಯಲ್ಲಿ ಪ್ರತಿನಿಧಿಸಿರುವ ಎಸ್. ಚಿಕ್ಕರಂಗಪ್ಪ, ರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ರಿಷಿಕಾ ಹಾಗೂ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದ ಪ್ರಭಾವಿ ಮದನ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈಶ ಪ್ರತಿನಿಧಿ ರಾಘವೇಂದ್ರ ಮಾತನಾಡಿ, ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಗ್ಗೂಡಿಸಿ, ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆ ಯನ್ನು ಬೆಳೆಸುವ ವೇದಿಕೆಯಾಗಿದೆ. ಗ್ರಾಮೀಣ ಕರ್ನಾಟಕದಿಂದ ದೊರೆತಿರುವ ಅಭೂತಪೂರ್ವ ಸ್ಪಂದನೆ ಹಳ್ಳಿಗಳಲ್ಲಿರುವ ಪ್ರತಿಭೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ವರ್ಷ ಈಶ ಗ್ರಾಮೋತ್ಸವದ 18ನೇ ಆವೃತ್ತಿ ನಡೆಯುತ್ತಿದ್ದು, ಪಂದ್ಯಾವಳಿಯು 10 ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದೆ. ದೇಶದ 40 ಸಾವಿರಕ್ಕೂ ಹೆಚ್ಚು ಗ್ರಾಮ ಗಳಿಂದ 80 ಸಾವಿರಕ್ಕೂ ಅಧಿಕ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಗ್ರಾಮೀಣ ಕ್ರೀಡೆಗೆ ನೀಡಿದ ವಿಶೇಷ ಕೊಡುಗೆಗಾಗಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಈಶ ಗ್ರಾಮೋತ್ಸವವನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆಯಾಗಿ ಗುರುತಿಸಿದೆ. 2018ರಲ್ಲಿ ಬೇರುಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸಿದ ಸಾಧನೆಗಾಗಿ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ ಪುರಸ್ಕಾರವೂ ಲಭಿಸಿದೆ.
ಕರ್ನಾಟಕದ ಕ್ಲಸ್ಟರ್ ಹಂತದ ಪಂದ್ಯಗಳು 18 ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಅಂತಿಮ ಪಂದ್ಯಗಳು ಸೆಪ್ಟೆಂಬರ್ 4ರಿಂದ 6ರವರೆಗೆ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯ ಲಿವೆ. ದೇಶದ ವಿವಿಧ ರಾಜ್ಯಗಳ ಅತ್ಯುತ್ತಮ ಗ್ರಾಮೀಣ ತಂಡಗಳು ಒಂದು ಕೋಟಿಗೂ ಅಧಿಕ ಬಹುಮಾನದ ಮೊತ್ತಕ್ಕಾಗಿ ಸೆಣಸಲಿವೆ.