ಚಿಕ್ಕಬಳ್ಳಾಪುರ : ಕಂದಾಯ ಗ್ರಾಮ ಅಭಿಯಾನ ಹಾಗೂ ವಿವಿಧ ಆಶ್ರಯ ಯೋಜನೆಗಳಡಿ ಜಿಲ್ಲೆಯ ನಿವೇಶನ ರಹಿತರಿಗೆ ಹಕ್ಕುಪತ್ರ(Title deed for the homeless)ಗಳನ್ನು ವಿತರಿಸುವಾಗ ಇ-ಸ್ವತ್ತಿ(e-property)ನ ಜೊತೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು (District Collector G. Prabhu)ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ "ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಹಾಗೂ ಜನಗಣತಿ" ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಸತಿ/ನಿವೇಶನ ಯೋಜನೆಗಳಡಿ ಜಿಲ್ಲೆಯಲ್ಲಿ 308.47 ಎಕರೆ ಜಮೀನು ಲಭ್ಯವಿದ್ದು, 8939 ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿದೆ. ಆದ್ದರಿಂದ ಮಂಜೂರಾಗಿರುವ ಜಮೀನುಗಳನ್ನು ಮೇ 15 ರೊಳಗೆ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಆಶ್ರಯ ಯೋಜನೆಗಳಿಗೆ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ನಿಯಮಾವಳಿ ರೀತ್ಯ ಸಮರ್ಪಕವಾಗಿಯೇ ಆಯ್ಕೆ ಮಾಡಿ ಅರ್ಹರಿಗೆ ವಿತರಣೆ ಆಗಬೇಕು ಈ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮಂಜೂರಾತಿ ಆಗಿರುವ ಜಮೀನಿನಲ್ಲಿ ನಿವೇಶನಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಗ್ರಾಮ ಸಭೆಗಳು ಜಿಲ್ಲೆಯಲ್ಲಿ ಇನ್ನು ಮುಂದೆ ಬಹಳ ಕಟ್ಟುನಿಟ್ಟಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯವರ ಹಾಜರಾತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಬೇಕು. ಈ ಬಗ್ಗೆ ಅಧಿಕೃತ ದಾಖಲೆಗಳು, ಛಾಯಾಚಿತ್ರಗಳನ್ನು ಹಾಗೂ ವಿಡಿಯೋಗ್ರಫಿ ಮಾಡಿಸಿಡಬೇಕು. ಯಾವುದೇ ಒತ್ತಡಗಳಿಗೆ, ಶಿಫಾ ರಸ್ಸುಗಳಿಗೆ ಮಣಿಯಬಾರದು. ಆಶ್ರಯ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಈಗಾಗಲೇ 2018ರಲ್ಲಿ ಸಮೀಕ್ಷೆ ಮಾಡಿ ಅರ್ಜಿ ಸ್ವೀಕರಿಸಿರುವ ಪಟ್ಟಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಆದ್ಯತೆ ನೀಡಬೇಕು. ಮೊದಲು ಅರ್ಜಿ ಹಾಕಿದವರಿಗೆ ಪ್ರಥಮ ಆದ್ಯತೆ ನೀಡ ಬೇಕು ಎಂದರು.
ಸರ್ಕಾರದ ಆದೇಶಗಳಲ್ಲಿ ಹಾಗೂ ಸುತ್ತೋಲೆಗಳಲ್ಲಿ ಏನೆಲ್ಲ ಮಾನದಂಡಗಳಿವೆಯೋ ಅವುಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.ಒಂದು ವೇಳೆ ಅರ್ಹರಲ್ಲದ ಒಬ್ಬ ಫಲಾನುಭವಿಗೆ ನಿವೇಶನ ವಿತರಣೆ ಆದರೂ ಇಡೀ ಆಡಳಿತ ವ್ಯವಸ್ಥೆಯ ಮೇಲೆ ಅತಿಕೆಟ್ಟ ಪರಿಣಾಮ ಬೀರುತ್ತದೆ. ಆ ರೀತಿಯ ಲೋಪಗಳಿಗೆ ಅವಕಾಶ ನೀಡಿದರೆ ಸಹಿಸುವುದಿಲ್ಲ ಈ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಗ್ರಾಮ ಪಂಚಾಯತ್ ವಾರು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜನಗಣತಿ ಸಂವಿಧಾನದತ್ತ ಕಾರ್ಯ
ಜನಗಣತಿ ಕಾರ್ಯಕ್ಕೆ ನಿಯೋಜನೆ ಆಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜನಗಣತಿಯ ಅವಧಿಯಲ್ಲಿ ರಜೆಯ ಅವಕಾಶವೇ ಇರುವುದಿಲ್ಲ. ಜನಗಣತಿಯು ಸಂವಿಧಾನದತ್ತವಾದ ಕಾರ್ಯ ವಾಗಿದ್ದು ಇದರ ಮಹತ್ವವನ್ನು ಅರಿತು ನಿಯೋಜಿತರೆಲ್ಲರೂ ಕರ್ತವ್ಯ ಮಾಡಬೇಕು. ತಮಗೆ ನಿಯೋಜನೆ ಆಗಿರುವ ಕೆಲಸವನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕ ವಾಗಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು. ಚಿಂತಾಮಣಿ ನಗರ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯದ ಪ್ರಗತಿ ಬಹಳ ಕುಂಠಿತ ವಾಗಿದೆ, ಜಿಲ್ಲೆಯ ಯಾವ ಬ್ಲಾಕ್ ಗಳಲ್ಲಿ ಜನಗಣತಿ ಕಾರ್ಯ ಕುಂಟಿವಾಗಿದೆ ಅದರ ಬಗ್ಗೆ ಸಮಗ್ರ ಮಾಹಿತಿ ಪಡೆದು ಪರಿಶೀಲಿಸಿ ಸಂಬAಧಪಟ್ಟವರ ಮೇಲೆ ಕಾನೂನು ಕ್ರಮಕ್ಕೆ ವರದಿ ಮಾಡುವಂತೆ ಉಪವಿಭಾಗಾಧಿಕಾರಿಯವರಿಗೆ ಸೂಚನೆ ನೀಡಿದರು.
ತಾಲ್ಲೂಕುವಾರು ಸಹಾಯವಾಣಿ ಆರಂಭಿಸಿ
ಜಿಲ್ಲೆಯ ಯಾವುದೇ ಗ್ರಾಮಗಳು, ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ೨೪ ಗಂಟೆಯ ಒಳಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಸಾರ್ವಜನಿಕರ ನೀರಿನ ಬವಣೆಯ ಪರಿಹಾರಕ್ಕೆ ತಾಲ್ಲೂಕುವಾರು ಸಹಾಯ ವಾಣಿಗಳನ್ನು ಆರಂಭಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕಾರ ಮಾಡಿಕೊಂಡು ತ್ವರಿತವಾಗಿ ಪರಿಹರಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು, ಪೌರಾಯುಕ್ತರು ಹಾಜರಿದ್ದರು.