ಚಿಕ್ಕಬಳ್ಳಾಪುರ: 21ನೇ ಶತಮಾನದ ಮಹಿಳೆ ತನಗೆ ದೊರೆತ ಎಲ್ಲಾ ರೀತಿಯ ಅವಕಾಶ ಗಳನ್ನು ಸಮರ್ಥವಾಗಿ ಬಳಸಿಕೊಂಡು ಮುಂದುವರೆದ ಪರಿಣಾಮವೇ ಇಂದು ಪುರುಷನಿಗೆ ಸರಿಸಮನಾಗಿ ಬೆಳೆದು ನಿಲ್ಲುವಂತಾಗಿದೆ ಎಂದು ಜಿಲ್ಲಾಧಿಕಾರಿ ಜಿ ಪ್ರಭು ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಘವು ಹಮ್ಮಿ ಕೊಂಡಿರುವ ಮಹಿಳಾ ಕ್ರೀಡಾ ಕೂಟಕ್ಕೆ ಚಾಲನೆ ನೀಡಿರುವುದು ಹೆಚ್ಚಿನ ಸಂತಸ ಮೂಡಿಸಿದೆ. ಮುಂದಿನ ವರ್ಷದಲ್ಲಿ ಈ ಕ್ರೀಡಾಕೂಟವನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಆಡಳಿತ ವರ್ಗದಲ್ಲಿ, ದುಡಿ ಯುವ ಕ್ಷೇತ್ರದಲ್ಲಿ ಸೇರಿದಂತೆ ಎಲ್ಲಾ ರಂಗಗಳಲ್ಲಿ ಪುರುಷನಿಗೆ ಸರಿ ಸಮಾನವಾಗಿ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಮಹಿಳಾ ವರ್ಗದ ಬಗ್ಗೆ ಪ್ರತಿ ಯೊಬ್ಬರಿಗೂ ಗೌರವ ಹಾಗೂ ಅಭಿಮಾನ ಇರಬೇಕು. ಇಲ್ಲವಾದಲ್ಲಿ ಬದುಕಿಗೆ ಅರ್ಥವೇ ಇರುವುದಿಲ್ಲ ಎಂದರು.
ಮಹಿಳೆಯು ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ, ಮಗಳಾಗಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ಮನುಕುಲದ ಸಂತತಿಯ ಮುಂದುವರಿಕೆಯ ಭಾಗವಾಗಿ ತನ್ನದೇ ಆದಂತಹ ಮಹತ್ತರವಾದ ಪಾತ್ರವನ್ನು ನಿರ್ವಹಿಸುವ ಮಹಿಳೆಗೆ ತನ್ನದೆ ದಿನಾಚರಣೆ ಇದೆ ಎಂಬುದೇ ಕೆಲವರಿಗೆ ಗೊತ್ತಿಲ್ಲ. ಈ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಮಹಿಳಾ ಕ್ರೀಡಾಕೂಟಗಳು ಮಹಿಳೆಯರ ದೈಹಿಕ ಸಾಮರ್ಥ್ಯ ವೃದ್ಧಿಸಿ ಆತ್ಮವಿಶ್ವಾಸ ಮತ್ತು ಕ್ರೀಡಾಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳಾಗಿವೆ.ಇವುಗಳನ್ನು ತಾಲೂಕು, ಜಿಲ್ಲಾ ಹಂತ ಮಾತ್ರವಲ್ಲ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ಕೂಡ ಆಯೋಜಿಸಲಾಗುತ್ತದೆ.ಇಲ್ಲೆಲ್ಲಾ ಭಾಗಿಯಾಗುವ ಮಹಿಳೆಯರು ಕ್ರಿಕೆಟ್, ಅಥ್ಲೆಟಿಕ್ಸ್, ಕುಸ್ತಿ, ಬ್ಯಾಡ್‌ಮಿಂಟನ್, ಮತ್ತು ಶೂಟಿಂಗ್ ವಿಭಾಗಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸು ತ್ತಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಅನೇಕ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ.ಅದರಂತೆ ನಮ್ಮ ರಾಜ್ಯವೂ ಇದಕ್ಕೆ ಹೊರತಾಗಿಲ್ಲ ಎಂದರು.
ಮಹಿಳೆಯರು ಅಂಜಿಕೆಯಿಲ್ಲದೆ ಕ್ರೀಡೆಗಳಲ್ಲಿ ಭಾಗಿಯಾಗುವುದು ಮುಖ್ಯ. ಕ್ರೀಡಾ ಕೂಟ ಗಳಲ್ಲಿ ಭಾಗಿಯಾಗುವವರಿಗೆ ಸೋಲು ಗೆಲುವನ್ನು ಸಹಜ.ಸೋಲೇ ಗೆಲುವಿನ ಮೆಟ್ಟಿಲು. ಸೋತವರು ಕುಗ್ಗದೆ,ಗೆದ್ದವರು ಬೀಗದೆ ಗುರಿಯತ್ತ ಮುನ್ನಡೆದರೆ ಆಟದ ಸೊಬಗು ಅನುಭವಿಸಬಹುದು ಎಂದರು.
ಜಿಲ್ಲೆಯ ಮಹಿಳೆಯರಲ್ಲಿರುವ ಪ್ರತಿಭೆ ಗುರ್ತಿಸುವಿಕೆಗೆ ಈ ಮಹಿಳಾ ಕ್ರೀಡಾಕೂಟ ಸಹಕಾರಿ ಯಾಗಿದೆ. ಪ್ರತಿಯೊಬ್ಬರು ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಆದ್ದರಿಂದ ಜಿಲ್ಲಾಡಳಿತ ಮಹಿಳೆಯರಲ್ಲಿ ಕ್ರೀಡಾ ಮನೋಭವ ಉತ್ತೇಜಿಸಲು ಈ ಕ್ರೀಡಾಕೂಟ ಆಯೋಜಿಸಿದೆ. ತಾವೆಲ್ಲರೂ ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು "ಗುಂಡು ಎಸೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳಾ ಕ್ರೀಡಾಕೂಟಕ್ಕೆ ಪ್ರೇರಣೆ ನೀಡಿದರು. ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ವೆಂಕಟೇಶ ರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೆ.ಆರ್.ಜಯಲಕ್ಷ್ಮೀ ಬಾಯಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು ಹಾಜರಿದ್ದರು.