ಗೌರಿಬಿದನೂರು: ಸ್ನೇಹಿತನ ಹೆಸರಿನಲ್ಲಿ ಸ್ಥಾಪನೆ ಮಾಡಿರುವ ಪ್ರಶಸ್ತಿಯನ್ನು ಮತ್ತೊಬ್ಬ ಸ್ನೇಹಿತನಿಗೆ ನೀಡುವುದು ವಿಶಿಷ್ಟವಾದುದು ಮತ್ತು ಅನನ್ಯವಾದುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ನಗರಗೆರೆ ರಮೇಶ್ ನುಡಿದರು.
ನಗರದಲ್ಲಿ ಪ್ರೊ.ಕೆ.ನಾರಾಯಣಸ್ವಾಮಿ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆ.ನಾರಾಯಣಸ್ವಾಮಿ ಜನಸಂಸ್ಕೃತಿ ಪ್ರಶಸ್ತಿಯನ್ನು ಕೃಷಿ ಆರ್ಥಿಕ ತಜ್ಞ ಡಾ.ಎಸ್. ಬಿಸಲಯ್ಯರಿಗೆ ಪ್ರದಾನ ಮಾಡಿ ಮಾತನಾಡುತ್ತ ಕೆ.ನಾರಾಯಣಸ್ವಾಮಿ ಮತ್ತು ಡಾ.ಎಸ್. ಬಿಸಲಯ್ಯ ದೀರ್ಘ ಕಾಲದ ಸ್ನೇಹಿತರು. ಸಮಾನ ಮನಸ್ಕರು. ಸಾಮಾಜಿಕ ಕಳಕಳಿಯನ್ನು ಹೊಂದಿರುವವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದವರು. ಇಂತಹ ಮೇಧಾವಿ ಗಳನ್ನು ಪ್ರಶಸ್ತಿ ಮೂಲಕ ಸಮಾಗಮ ಮಾಡಿರುವುದು ಸಮಂಜಸವಾಗಿದೆ ಎಂದರು.
ತಹಸೀಲ್ದಾರ್ ಕೆ.ಎಂ.ಅರವಿAದ ಮಾತನಾಡಿ ನಾನು ವಿದ್ಯಾರ್ಥಿಯಾಗಿದ್ದಾಗ ಕೆ.ನಾರಾಯಣಸ್ವಾಮಿಯನ್ನು ನೋಡಿದ್ದೆ. ಅವರ ಸರಳತೆ, ಸಜ್ಜನಿಕೆಯನ್ನು ನಮ್ಮ ತಂದೆಯಿಂದ ಕೇಳಿ ತಿಳಿದುಕೊಂಡಿದ್ದೇನೆ. ಅವರು ಸಮಾಜದ ಬಗ್ಗೆ ಹೊಂದಿದ್ದ ಕಳಕಳಿ ಯನ್ನು ಕೇಳಿದ ಬಳಿಕ ನಾನು ಅವರಂತೆ ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳ ಬೇಕೆಂಬ ಭಾವನೆ ಮೂಡಿತು. ಅದು ನನ್ನ ಮೇಲೆ ಗಾಢ ಪ್ರಭಾವ ಬೀರಿತು ಎಂದು ನುಡಿದರು.
ಇದನ್ನೂ ಓದಿ: Gauribidanur News: ತಾಲೂಕು ಆಡಳಿತ ವತಿಯಿಂದ ಸದ್ಗುರು ಕೈವಾರ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತೋತ್ಸವ
ಅಹಿಂದ ಮುಖಂಡ ಆರ್.ಅಶೋಕಕುಮಾರ್ ಮಾತನಾಡಿ ಪಕ್ಷ ರಾಜಕಾರಣಕ್ಕೆ ಸೀಮಿತ ವಾಗಿದ್ದ ನನ್ನನ್ನು ಸಮಾಜಮುಖಿ ಕೆಲಸಗಳತ್ತ ಕರೆತಂದವರು ಕೆ.ನಾರಾಯಣಸ್ವಾಮಿ. ಅವರ ಒಡನಾಟದಿಂದ ಸಮುದಾಯದ ಪ್ರತಿಭಾ ಪುರಸ್ಕಾರ ಸಮಾರಂಭಗಳು ಸೇರಿದಂತೆ ದಲಿತ ಸಂಘರ್ಷ ಸಮಿತಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ತಳ ಸಮುದಾಯಗಳ ಜೊತೆಗೆ ನಿಲ್ಲುವಂತಾಯಿತು. ನನ್ನಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿ ನನ್ನನ್ನು ಅಹಿಂದ ಮುಖಂಡನನ್ನಾಗಿಸಿದ ಕೆಎನ್ನೆಸ್‌ಗೆ ಋಣ ಎಂದರು.
ಅನಾರೋಗ್ಯ ನಿಮಿತ್ತ ಡಾ.ಎಸ್.ಬಿಸಲಯ್ಯ ಸಭೆಗೆ ಗೈರಾಗಿದ್ದರಿಂದ ಅವರ ಶಿಷ್ಯ ಡಾ.ಹೆಚ್.ಅರುಣಕುಮಾರ್‌ರಿಗೆ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ 20 ಸಾವಿರ ರೂ ಪ್ರದಾನ ಮಾಡಲಾಯಿತು.
ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ಗಾಯಕ ಮುನಿರೆಡ್ಡಿ, ಡಾ.ವೆಂಕಟೇಶ್, ಗುಡಿಬಂಡೆ ಗಂಗಪ್ಪ, ಪ್ರೊ.ಎನ್.ಮಹೇಶ್, ಟ್ರಸ್ಟ್ನ ಅಧ್ಯಕ್ಷ ಸಿ.ಜಿ.ಗಂಗಪ್ಪ, ಉಪಾಧ್ಯಕ್ಷ ನಾಗರಾಜಪ್ಪ, ಎಚ್.ಎನ್.ಪದ್ಮ, ಕೆ.ಎಲ್.ವೇಣುಗೋಪಾಲ, ಡಾ.ಕೆ.ಪಿ.ನಾರಾಯಣಪ್ಪ, ರಾಮಕೃಷ್ಣಪ್ಪ, ಶ್ರೀರಂಗಾಚಾರಿ, ದಾಸಪ್ಪ, ಪಿ.ನರಸಿಂಹಮೂರ್ತಿ, ಮ.ನಾ.ಕೃಷ್ಣಮೂರ್ತಿ, ಡಿ.ಪಾಳ್ಯಮೂರ್ತಿ, ಬಾಲಪ್ಪ, ಆದಿನಾರಾಯಣಪ್ಪ, ಸೋಮಯ್ಯ ಇದ್ದರು.