ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಿ: ಜಂಗಮಕೋಟೆ ಹೋಬಳಿ ರೈತ ಸಂಘಟನೆ ಅಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭ

ಸರಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ, ಕೃಷಿ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರಕಾರ ಬಲವಂತದ ಭೂಮಿ ವಶಕ್ಕೆ ಮುಂದಾದರೆ ಪರಿಸ್ಥಿತಿ ಬೇರೆ ಆಗಲಿದೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೀಕರಣಕ್ಕಾಗಿ ಕೆಐಎಡಿಬಿಯು 2332"ಎಕರೆ ಭೂಸ್ವಾಧೀನಕ್ಕೆ ಹೊರಡಿಸಿರುವ ಅಂತಿಮ ಅಧಿಸೂಚನೆ ಅಧಿ ಸೂಚನೆ ವಾಪಸ್ ಪಡೆಯಬೇಕು. ಯಾವ ಕಾರಣಕ್ಕೂ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳ ಬಾರದು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನಾ ಧರಣಿ ಪ್ರಾರಂಭಿಸಿವೆ.

ಧರಣಿಯಲ್ಲಿ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಪ್ರಾರಂಭವಾಗಿವೆ.

ಸರಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ, ಕೃಷಿ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರಕಾರ ಬಲವಂತದ ಭೂಮಿ ವಶಕ್ಕೆ ಮುಂದಾದರೆ ಪರಿಸ್ಥಿತಿ ಬೇರೆ ಆಗಲಿದೆ ಎಂದು ಜಿಲ್ಲಾಡಳಿತಕ್ಕೆ ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ವೇದಿಕೆಯಲ್ಲಿ ನಾಮ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೊಡುವುದಿಲ್ಲ. ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಇದನ್ನೂ ಓದಿ: Shidlaghatta News: ಮಳ್ಳೂರು ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮ

ರೈಕ್ಷ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, 'ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಒಟ್ಟು 2332 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ನಾವು ಜಮೀನು ನೀಡುವುದಿಲ್ಲ ಎಂದು ಸಾಗುವಳಿ ನಾಡುವ ರೈತರು ಹೇಳಿದರೂ ಬಲವಂತದಿಂದ ಜಮೀನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ' ಎಂದು ದೂರಿದರು.

ನಮ್ಮ ಹೋರಾಟದ ಫಲವಾಗಿ 471 ಎಕರೆ ನೀರಾವರಿ ಕೃಷಿ ಫಲವತ್ತಾದ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ. ಉಳಿದ ಜಮೀನನ್ನೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು. ಸರ್ಕಾರ ರೈತರನ್ನು ವಿಭಜಿಸುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದು ಗುಡುಗಿದರು.

ಶೇ.75ರಷ್ಟು ರೈತರು ಜಮೀನು ನೀಡುವುದಿಲ್ಲ ಎಂದು ಹೇಳಿದರೂ ಸರ್ಕಾರ ಸ್ವಾಧೀನಕ್ಕೆ ಮುಂದಾ ಗಿದೆ. ಉತ್ತರ ಭಾರತದ ಕೈಗಾರಿಕೆಗಳನ್ನು 'ಇಲ್ಲಿಗೆ ತರಲು ಮುಂದಾಗಿದ್ದಾರೆ. ಇದೇ ರೀತಿಯಲ್ಲಿ ಮೊಂಡುತನ ಮಾಡಿದರೆ ಸರ್ಕಾರ ಮನೆಗೆ ಹೋಗುತ್ತದೆ ಎಂದು ಎಚ್ಚರಿಸಿದರು.

ಸರಕಾರಕ್ಕೆ 13 ಹಳ್ಳಿಗಳ ಜಮೀನು ಬಿಟ್ಟರೆ ತಾಲೂಕಿನಲ್ಲಿ ಬೇರೆಲ್ಲೂ ಭೂಮಿ ಇಲ್ಲವೆ? ಜಂಗಮ ಕೋಟೆ ಪ್ರದೇಶದಲ್ಲಿಯೇ ಏಕೆ ಬೇಕು? ಚಿನ್ನದಂತ ಭೂಮಿಯನ್ನು ಕಸಿದುಕೊಂಡು ನಮ್ಮನ್ನು ನಿರ್ಗತಿಕರನ್ನಾಗಿ ಮಾಡಲು ಬರುವುದು ಸರಿಯಲ್ಲ. ಬಹುತೇಕ ರೈತರು ಭೂಮಿ ಕೊಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರೂ ಇದನ್ನು ಕಡೆಗಣಿಸಿ ಸ್ವಾಧೀನಕ್ಕೆ ಮುಂದಾಗುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ ರಾಮನಾಥರೆಡ್ಡಿ, ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಸಿ.ಎಂ. ಬೈರೇಗೌಡ, ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್, ಪರಿಸರವಾದಿ ಚೌಡಪ್ಪ,ನೆಲಮಾಕನಹಳ್ಳಿ ಗೋಪಾಲ್, ಕರವೇ ರಾಮೇಗೌಡ, ನಾರಾಯಣಸ್ವಾಮಿ,ಪೈ ಪಾಳ್ಯ ರವಿ, ದಸಂಸ ತಾಲೂಕು ಅಧ್ಯಕ್ಷ ಪರಮೇಶ್, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಇದ್ದರು.