ಚಿಕ್ಕಬಳ್ಳಾಪುರ : ಜಾತ್ಯತೀತ ಜನತಾದಳ(JDS( ಸ್ಥಾಪನೆಯಾಗಿ ೨೫ ವರ್ಷ(25 years old) ತುಂಬಿದ ಸಂದರ್ಭ ದಲ್ಲಿ ಪಕ್ಷದ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ನ.೨೧ ಮತ್ತು ೨೨ರಂದು ಬೆಳ್ಳಿಹಬ್ಬ ಆಚರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಿಂದ 2500 ಮಂದಿ ಭಾಗಿ ಯಾಗುತ್ತಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷ ಉದಯಿಸಿ ನವೆಂಬರ್ ೧೬ಕ್ಕೆ ೨೫ ವರ್ಷಗಳಾಗಿದ್ದು,ಇದರ ಅಂಗವಾಗಿ ನವೆಂಬರ್ ೨೧ ಮತ್ತು ೨೨ ರಂದು ಬೆಂಗಳೂರಿನ ಪಕ್ಷದ ಕಚೇರಿಯಾದ ಜೆಪಿ ಭವನದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶ ನಡೆಯಲಿದೆ. ಬೆಳ್ಳಿಹಬ್ಬ ಆಚರಣೆಯ ರೂಪು ರೇಷೆಯ ಬಗ್ಗೆ ಸಲಹೆ, ಸೂಚನೆಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದು ರಾಜ್ಯದೆಲ್ಲೆಡೆ ರಜತ ಮಹೋತ್ಸವ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ.ಅದರಂತೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜತೆಗೆ ಬೆಂಗಳೂರಿನ ಕಾರ್ಯಕ್ರಮಕ್ಕೆ ಬೇಕಾದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಜೆಡಿಎಸ್ ಪಕ್ಷದ ಸಂಸ್ಥಾಪಕರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದ ಪರಿಣಾಮ ಜೆಡಿಎಸ್ ಪಕ್ಷವು ೨೫ ವರ್ಷ ಪೂರೈಸಲು ಕಾರಣವಾಗಿದೆ. ಜತೆಗೆ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ನೇತೃತ್ವವು ಕೂಡ ಪಕ್ಷವು ತಳಮಟ್ಟದಲ್ಲಿ ಮತ್ತಷ್ಟು ಬೇರೂರುವಂತೆ ಮಾಡಿತು ಎಂದು ಹೇಳಿದರು.
ಬೆಳ್ಳಿಹಬ್ಬ ಆಚರಣೆ ಅಂಗವಾಗಿ ೨೧ರಂದು ಸಂಜೆ ಜೆ.ಪಿ.ಭವನದಲ್ಲಿ ಸೇವಾದಳ ಘಟಕ ದಿಂದ ಧ್ವಜಾರೋಹಣ ನಡೆಯಲಿದೆ. ನಂತರ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಪ್ರದರ್ಶಿನಿ ಉದ್ಘಾಟನೆ ಮಾಡುವರು. ಸಂಜೆ ೬-೩೦ಕ್ಕೆ ವಿವಿಧ ರಾಜ್ಯಗಳಿಂದ ಬಂದಿರುವ ಪಕ್ಷದ ರಾಜ್ಯ ಪರಿಷತ್, ರಾಷ್ಟ್ರೀಯ ಪರಿಷತ್‌ಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. ೨೨ರಂದು ಪಕ್ಷದ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಮಹಾ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಲಾಂಚನ ಬಿಡುಗಡೆ, ಕಿರುಚಿತ್ರ ಹಾಗೂ ಪಕ್ಷ ಬೆಳೆದು ಬಂದ ಹಾದಿಯ ಪ್ರದರ್ಶಿನಿಯ ಉದ್ಘಾಟನೆ ಕೂಡ ನಡೆಯಲಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲಿಷ್ಟವಾದ ಕಾರ್ಯಕರ್ತರ ಪಡೆಯಿದೆ.ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲೂಕುಗಳಲ್ಲಿ ಶಾಸಕರಾಗಿರುವ ಶಾಸಕರಾಗುವ ಅರ್ಹತೆಯಿರುವ ನಾಯಕರೂ ಇದ್ದಾರೆ.ಮುಂಬರುವ ಚುನಾವಣೆಗಳಲ್ಲಿ ಎನ್‌ಡಿಎ ಒಕ್ಕೂಟವು ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಲಿದೆ.ಪ್ರಸ್ತುತ ಬೆಂಗಳೂರಿನಲ್ಲಿ ಜೆಡಿಎಸ್‌ನ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ನಾವು ಕಾರ್ಯೋನ್ಮುಖವಾಗಿದ್ದೇವೆ. ಡಿಸೆಂಬರ್ ೧ ರಿಂದ ೧೫ ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದರ್ಶಿನಿಗಳು ಹಾಗೂ ಕಾರ್ಯ ಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಬೃಹತ್ ಕಾರ್ಯಕರ್ತರ ಬೃಹತ್ ಸಮಾವೇಶ ಏರ್ಪಡಿಸಲು ಕೂಡ ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ರಾಜ್ಯ ಕಾರ್ಯದರ್ಶಿ ನಾರಾಯಣಗೌಡ,ತಾಲ್ಲೂಕು ಅಧ್ಯಕ್ಷ ಮುನಿರಾಜು, ತಾಲ್ಲೂಕು ಮಹಿಳಾ ಅಧ್ಯಕ್ಷೆ ಅರುಣಾ, ಗೌರಿಬಿದನೂರಿನ ನರಸಿಂಹಮೂರ್ತಿ, ಶಾಂತಮೂರ್ತಿ, ಮಂಚೇನಹಳ್ಳಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಸ್ಟುಡಿಯೋ ಮಂಜು,ಮತ್ತಿತರರು ಇದ್ದರು.