ಚಿಕ್ಕಬಳ್ಳಾಪುರ: ಜೆಡಿಎಸ್ (JDS) ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಳಿಸಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿರುವುದು ಸಂತೋಷದ ಸಂಗತಿಯಾಗಿದೆ. ಜೆಡಿಎಸ್ ಎಂದರೆ ನಾಯಕರನ್ನು ಹುಟ್ಟುಹಾಕುವ ಪಕ್ಷವಾಗಿದೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಎಸ್‌ಐಆರ್ ಸಮೀಕ್ಷೆ ಕುರಿತ ಪಕ್ಷದ ಬಿಎಲ್‌ಎ-2ಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಪ್ರಾದೇಶಿಕ ಪಕ್ಷಗಳಲ್ಲಿ ಜೆಡಿಎಸ್ ಪಕ್ಷವೇ ಇಂದಿಗೂ ಬಲವಾಗಿ ಉಳಿದು ಕೊಂಡಿರುವ ಪಕ್ಷವಾಗಿದೆ. 25 ವರ್ಷಗಳನ್ನು ಪೂರೈಸಿ ಜನಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಇಲ್ಲಿ ಗೆದ್ದು ಶಾಸಕರು,ಸಚಿವರಾದ ಕೆಲವರು ಬೇರೆ ಪಕ್ಷಗಳಿಗೆ ಹೋಗಿದ್ದರೂ ಕಾರ್ಯಕರ್ತರು ಮಾತ್ರ ಪಕ್ಷದೊಂದಿಗೆ ಗಟ್ಟಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ
ಪಕ್ಷದ ಸಂಸ್ಥಾಪಕ ದೇವೇಗೌಡರು ದೆಹಲಿಯಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಮಹಿಳೆ ಯರ ಮೇಲೆ ವಿಶೇಷ ಕಾಳಜಿ ಇಟ್ಟು ಮಹಿಳಾ ಮೀಸಲಾತಿ ಜಾರಿಗೆ ತರಲು ಮುಂದಾಗಿ ದ್ದರು. ರಾಜ್ಯದಲ್ಲಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದರು. ಈಗ ಎನ್‌ಡಿಎ ಜೊತೆಗೆ ಗುರುತಿಸಿ ಕೊಂಡಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಖಚಿತ ಎಂದರು.
ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ವಿಶೇಷ ಪರಿಷ್ಕರಣೆ ಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಸ್‌ಐಆರ್ ಮೂಲಕ ಪರಿಶುದ್ಧ ಮತಪಟ್ಟಿ ತಯಾರಾಗಲಿದ್ದು, ಈ ಪರಿಷ್ಕರಣೆಯಲ್ಲಿ ಪಕ್ಷದ ಏಜೆಂಟರು ಸಕ್ರಿಯ ವಾಗಿ ಭಾಗವಹಿಸಬೇಕು. ಮನೆಮನೆಗೆ ಭೇಟಿ ನೀಡುವ ಮೂಲಕ ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಕೊಂಡರೆ, ಅದು ಮೊದಲ ಹಂತದ ಚುನಾವಣಾ ಪ್ರಚಾರ ವಾಗುತ್ತದೆ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಬೇಕಾದರೆ ನಮ್ಮ ಗೆಲುವು ಅನಿವಾರ್ಯ ಎಂದರು.
ಕಾರ್ಯಾಗಾರದಲ್ಲಿ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ಬಿಎಲ್‌ಎಗಳು ಅಲ್ಲೇ ಹಾಜರಿದ್ದು ಮತದಾರರ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಜೊತೆಗೆ ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕೆಂದು ಕಾರ್ಯಾಗಾರದಲ್ಲಿ ಪಕ್ಷದ ಹಿರಿಯರು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಕ್ತ ಮುನಿಯಪ್ಪ ಅವರು ಪ್ರತಿ ಬಿಎಲ್‌ಎಗೆ ತಮ್ಮ ವತಿಯಿಂದ ಉತ್ತಮ ಗುಣಮಟ್ಟದ ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಿ ಪ್ರಶಂಸೆಗೆ ಪಾತ್ರರಾದರು. ಪಕ್ಷದ ಯಾವುದೇ ಕಾರ್ಯಕ್ರಮವಾಗಲಿ, ಸಮಸ್ಯೆಯಾಗಲಿ ಮುಕ್ತ ವಾಗಿ ಕಚೇರಿಗೆ ಬಂದು ತಿಳಿಸಿ. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ಕರೆ ನೀಡಿದರು.
ಇದೇ ವೇಳೆ, ಪಕ್ಷದ ರಾಜ್ಯ ವಕ್ತಾರ ದೇವರಾಜ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಪ್ರಾರಂಭಿಸಿರುವ ಎಸ್‌ಐಆರ್ ಮೂಲಕ ಪರಿಶುದ್ಧ ಮತಪಟ್ಟಿ ತಯಾರಾಗಲಿದೆ. ಈ ಪರಿಷ್ಕರಣೆಯನ್ನು ಪಕ್ಷದ ಏಜೆಂಟ್‌ಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಮನೆಮನೆಗೆ ಭೇಟಿ ನೀಡುವ ಮೂಲಕ ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಅದು ಮೊದಲ ಹಂತದ ಚುನಾವಣಾ ಪ್ರಚಾರವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಡ್ಲು ಶ್ರೀನಿವಾಸ್, ನಾರಾಯಣಗೌಡ, ಕೆ.ಆರ್.ರೆಡ್ಡಿ, ಪ್ರಭಾ ನಾರಾಯಣಗೌಡ, ಮಹಿಳಾ ತಾಲೂಕು ಅಧ್ಯಕ್ಷೆ ಅರುಣಾ, ಸ್ಟುಡಿಯೋ ಮಂಜುನಾಥ್, ಅಕಿಲ್ ರೆಡ್ಡಿ, ಮಂಚೇನಹಳ್ಳಿ ಅಧ್ಯಕ್ಷ ಪ್ರಕಾಶ್, ವಾಸುದೇವ್ ಅನ್ವರ್, ಸಾದಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.