ಚಿಂತಾಮಣಿ: ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ(J K Krishna Reddy) ರವರ ನಿವಾಸದಲ್ಲಿ ಇಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಜೆಕೆ ಕೃಷ್ಣಾರೆಡ್ಡಿ ರವರು ಕಳೆದ ಹಲವು ವರ್ಷಗಳಿಂದ ನಮ್ಮ ಪಕ್ಷದ ಕಚೇರಿಯಲ್ಲಿ ದಸರಾ ಹಬ್ಬವನ್ನು ನಿರಂತರವಾಗಿ ಹಾಗೂ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿ ಮತ್ತು ಚಾಮುಂಡೇಶ್ವರಿಯ ಆರಾಧನೆ ನಡೆಸಿ,ಕೆಟ್ಟ ಶಕ್ತಿಗಳ ಸಂಹಾರದ ಪ್ರತೀಕವಾದ ವಿಜಯ ದಶಮಿಯಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪೂಜೆ ಸಲ್ಲಿಸಿ,ಸಿಹಿ ಹಂಚಿ ಸಂಭ್ರಮಿಸುವುದು ನಮ್ಮ ವಾಡಿಕೆ"ಎಂದು ಹೇಳಿದರು.
ಇದನ್ನೂ ಓದಿ: J K Krishna Reddy: ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಜೆ.ಕೆ. ಕೃಷ್ಣಾರೆಡ್ಡಿ ಪ್ರಚಾರ
ಮುಂದುವರಿದು ಮಾತನಾಡಿದ ಅವರು,"ಇಂದು ಸುಮಾರು ಮೂರು ಸಾವಿರ ಕಾರ್ಯಕರ್ತರು ಒಟ್ಟಾಗಿ ಸೇರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿರುವುದು ಅತ್ಯಂತ ಸಂತಸ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಅಲ್ಲದೆ,"ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದೆ ಎಲ್ಲರೂ ಸುಖ,ಶಾಂತಿ ಮತ್ತು ಸಮೃದ್ಧಿಯಿಂದ ಬಾಳುವಂತಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ" ಎಂದು ತಿಳಿಸಿದರು.
ಈ ವಿಶೇಷ ಪೂಜಾ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.