ಜಿಲ್ಲಾಡಳಿತದ ವತಿಯಿಂದ ಕನ್ನಡ ಭವನದಲ್ಲಿ ನಡೆದ ದಾಸ ಶ್ರೇಷ್ಠ ಶ್ರೀ ಕನಕ ದಾಸರ ಜಯಂತಿಯಲ್ಲಿ ಹೇಳಿಕೆ
ಚಿಕ್ಕಬಳ್ಳಾಪುರ: ದಾಸರಲ್ಲಿ ಶ್ರೇಷ್ಠ ಒಬ್ಬರಾದ ಕನಕದಾಸರು ೧೬ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಮತ್ತು ಶ್ರೇಣಿಕರಣದ ವಿರುದ್ಧ ಸಮರ ಸಾರಿದ್ದ ಬಹುದೊಡ್ಡ ಕ್ರಾಂತಿಕಾರಿ ಯಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್( District In-charge Minister Dr. M.C. Sudhakar) ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕುರುಬರ ಸಂಘದ ವತಿಯಿಂದ ಶನಿವಾರ ನಗರದ ಕನ್ನಡ ಭವನದಲ್ಲಿ ನಡೆದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಅಸಮಾನತೆ ಮತ್ತು ಕರ್ಮಠ ಆಚರಣೆಗಳ ವಿರುದ್ಧ ಬಹುದೊಡ್ಡ ಕ್ರಾಂತಿ ಮಾಡಿದ ಅವರು ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಇಂತಹ ಮಹಾನ್ ಚೇತನ ತಿಪ್ಪೇನಹಳ್ಳಿ ಬಳಿಯ ರಂಗಸ್ಥಳದ ರಂಗನಾಥ ಸ್ವಾಮಿಯ ದರ್ಶನ ಮಾಡಿದ್ದಲ್ಲದೆ ರಂಗನಾಥಸ್ವಾಮಿಯ ಬಗ್ಗೆ ಹತ್ತಾರು ಕೀರ್ತನೆಗಳನ್ನು ರಚಿಸಿದ್ದಾರೆ. ಹೀಗಾಗಿ ಅವರು ತಿರುಪತಿಗೆ ಹೋಗುವ ಮಾರ್ಗಮಧ್ಯೆ ಚಿಕ್ಕಬಳ್ಳಾಪುರಕ್ಕೆ ಬಂದಿರಬಹುದಾದ ಸಾಧ್ಯತೆಗಳಿವೆ ಎಂಬುದನ್ನು ಕೇಳಿ ಸಂತೋಷವಾಗಿದೆ ಎಂದರು.
ಇದನ್ನೂ ಓದಿ: Dr. M.C. Sudhakar: ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ವಿರುದ್ಧ ಗುಡುಗಿದ ಸಚಿವ ಡಾ.ಎಂ.ಸಿ.ಸುಧಾಕರ್
ಯುದ್ಧವೀರನಾಗಿದ್ದ ಕನಕ ಯುದ್ಧದ ಭೀಕರತೆಯಿಂದ ರೋಸಿಹೋಗಿ ಮಾನವತೆಯ ಕಡೆ ಮುಖಮಾಡುತ್ತಾರೆ.ಶ್ರೀಕೃಷ್ಣನ ಪರಮ ಭಕ್ತರಾಗಿ ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ನಳಚರಿತೆ ಬರೆದಿದ್ದಾರೆ.ಈ ಕೃತಿಗಳಲ್ಲಿ ಭಕ್ತಿಯೊಂದಿಗೆ ಮಾನವತೆ ಯನ್ನು ಒತ್ತಿ ಹೇಳಿದ್ದು ಭಗವಂತನ ಕಾಣಲು ಭಕ್ತಿ ಮುಖ್ಯವೇ ವಿನಃ ಜಾತಿಯಲ್ಲ ಎಂದು ಬಲವಾಗಿ ಸಾರಿದ್ದಾರೆ.ಜಾತಿ ಶೋಷಣೆ ವಿರುದ್ಧ ದೊಡ್ಡ ಧನಿಯಾಗಿದ್ದ ಕನಕರು ಭಕ್ತಿಯ ಮೂಲಕವೇ ಸಮಾಜದಲ್ಲಿ ಸಾಮರಸ್ಯವನ್ನು ಸಾರಿದ್ದ ಬಹುದೊಡ್ಡ ಸಂತರಾಗಿದ್ದಾರೆ. ನಾವು ಈ ಭೂಮಿಗೆ ಬರುವುದು ಗೊತ್ತಾಗುವುದಿಲ್ಲ, ಹೋಗುವುದು ಕೂಡ ಗೊತ್ತಾಗುವು ದಿಲ್ಲ, ಇವೆರಡರ ನಡುವೆ ಬಾಳಿ ಬದುಕುವ ಮೂಲಕ ಸಮಾಜಕ್ಕೆ ಮಾದರಿಯಾದ ಜೀವನ ಸಾಗಿಸೋಣ. ಅದೇ ನಾವು ಇಲ್ಲಿಗೆ ಬಂದಿದ್ದಕ್ಕೆ ನೀಡುವ ಕೊಡುಗೆಯಾಗಿದೆ ಎಂದರು.
ಕನಕದಾಸರತಹ ಸಾಧು ಸಂತರ ಬದುಕು, ಬರಹ ನಮ್ಮದಾಗಲಿ, ಅವರು ಬಿಟ್ಟು ಹೋದ ಸಾಮರಸ್ಯದ ಹಾದಿಯಲ್ಲಿ ನಾವು ನೀವೆಲ್ಲಾ ಸಾಗೋಣ. ನಮ್ಮ ಸುತ್ತಮುತ್ತಲ ಸಮಾಜದಲ್ಲಿ ಜೀವಿಸುವ ನಾವು ಸಹಜೀವಿಗಳೊಂದಿಗೆ ಎಂದಿಗೂ ಕೂಡ ಮೇಲು ಕೀಳು ಮಾಡಬಾರದು. ಪ್ರತಿಭೆಯನ್ನು ಪ್ರತಿಭೆಯಂತೆ ನೀಡಬೇಕು.ಅದಕ್ಕೆ ಜಾತಿಯ ಸೋಂಕು ಅಂಟಿಸಬೇಡಿ, ಸಮುದಾಯದ ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಿ ಎಂದು ಕರೆ ನೀಡಿದರು.
ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದ ಭವ್ಯವಾದ ಕನ್ನಡ ಭವನ ಲೋಕಾರ್ಪಣೆ ಗೊಂಡು ಇಲ್ಲಿ ಕನಕ ಜಯಂತಿ ಆಗಲು ಸಾಧ್ಯವಾಗಿದೆ. ದೇವರಾಜು ಅರಸು ನಂತರ ದೀನ ದಲಿತರು ಹಿಂದುಳಿದವರ ಏಳಿಗೇ ನೂರಾರು ಯೋಜನೆಗಳು ಜಾರಿಯಾಗಿವೆ. ವಸತಿ ಶಾಲೆಗಳ ಪ್ರಾರಂಭದ ಮೂಲಕ ಪ್ರಾಥಮಿಕ ಮತು ಪ್ರೌಢ ಶಿಕ್ಷಣಕ್ಕೆ ಒತ್ತು ನೀಡಿರುವ ನಮ್ಮ ಸರಕಾರ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕೆ ಸಾಕ್ಷಿ ಯೆಂಬಂತೆ ದಾಖಲಾತಿಗಿದ್ದ ಸಮಸ್ಯೆ ನಿವಾರಣೆ ಮಾಡಲಾಗಿದೆ.ಇದರಂತೆ ೬೦-೪೦ ಅನುಪಾತದಲ್ಲಿ ದಾಖಲಾತಿಯಲ್ಲಿ ಬದಲಾವಣೆ ತರಲಾಗಿದೆ.ಇನ್ನು ಗ್ಯಾರಂಟಿ ಯೋಚನೆ ಬಹುಸಂಖ್ಯಾತರ ಬಾಳಿಗೆ ಆಶಾಕಿರಣವಾಗಿದೆ.ಆದರೂ ಇದನ್ನು ಟೀಸುವವರು ಗ್ಯಾರಂಟಿ ಯೋಜನೆಳನ್ನು ಬಳಸಿಕೊಳ್ಳದೆ ತಿರಸ್ಕಾರ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ನ. ೨೪ರಂದು ಮುಖ್ಯಮಂತ್ರಿ ಜಿಲ್ಲೆಗೆ ಬರುತ್ತಾರೆ.ಅಂದು ೧೮೦೦ ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕಗ್ಗಂಟಾಗಿರುವುದನ್ನು ಮನಗಂಡು ಶುಕ್ರವಾರ ಇಡೀದಿನ ಸತತ ೧೨ ಗಂಟೆಗಳ ಕಾಲ ಸಭೆ ಮಾಡಿ ಸಮಸ್ಯೆ ಈಡೇರಿಸಿ ರೈತ ಮೊಗದಲ್ಲಿ ಸಂತೋಷ ಹುಕ್ಕುವಂತೆ ಮಾಡಿದ್ದಾರೆ.ಇಂತಹ ಜನಪರ ಮುಖ್ಯಮಂತ್ರಿಗೆ ಭಗವಂತ, ಕನಕ ಇನ್ನಷ್ಟು ಶಕ್ತಿ ನೀಡಲಿ, ಆಮೂಲಕ ಜನಸೇವೆ ಮಾಡುವ ಬಲ ತುಂಬಲಿ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಪಲ್ಲಕ್ಕಿಗಳನ್ನು ಆಕರ್ಷಕ ವಾಗಿ ಮಾಡಿಕೊಂಡು ಬಂದಿದ್ದವರಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
ಸಮುದಾಯದ ಮುಖಂಡರಾದ ಎಂ ಚಂದ್ರಶೇಖರ್ ಅವರು ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವರು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಮರಳಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಬಿ.ಬಿ ರಸ್ತೆ ಮುಖಾಂತರ ವೇದಿಕೆ ಕಾರ್ಯಕ್ರಮದ ಕನ್ನಡ ಭವನದ ವರೆಗೂ ಅದ್ದೂರಿಯಾಗಿ ಸಾಗಿ ಜನರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ , ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಉಪ ವಿಭಾಗಧಿಕಾರಿ ಅಶ್ವಿನ್, ತಹಸೀಲ್ದಾರ್ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿ ಕುಮಾರ್, ಸಮುದಾಯದ ಮುಖಂಡ ರಾದ ಎ.ನಾಗರಾಜ್, ಎಂ. ಎಲೆಮರಿಸ್ವಾಮಿ,ವೆಂಕಟರಮಣಪ್ಪ, ಶ್ರೀನಿವಾಸ್, ರಂಗಪ್ಪ, ಎಂ ಶಂಕರ್, ಎನ್. ಎಸ್ ನಾರಾಯಣಸ್ವಾಮಿ, ನಾಗರಾಜ್,ವೀಣರಾಮು,ಚಂದ್ರು,ಗೋಪಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.