ಚಿಕ್ಕಬಳ್ಳಾಪುರ: ಕನ್ನಡ ಅತ್ಯಂತ ವಿಶ್ವ ಶ್ರೇಷ್ಠ ಭಾಷೆಯಾಗಿದ್ದು, ನಮ್ಮ ಸಂಸ್ಕೃತಿ - ಸಂಭ್ರಮ, ಅಭಿಮಾನ ಮತ್ತು ನಮ್ಮ ಅಸ್ಮಿತೆಯಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ಬಣ್ಣಿಸಿದ್ದಾರೆ.
ಚಿಕ್ಕಬಳ್ಳಾಪುರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ನಮ್ಮ ಮತ್ತು ಭಾಷೆಯಾಗಿರುವುದು ನಮ್ಮ ಸೌಭಾಗ್ಯವಾಗಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಕರ್ನಾಟಕದ ಮಣ್ಣು, ಹವಾಗುಣ, ವೈವಿಧ್ಯತೆ ಇಡೀ ವಿಶ್ವದ ಜನರನ್ನು ಆಕರ್ಷಿಸುತ್ತಿದೆ ಎಂದರು.
ಕನ್ನಡ ಮಣ್ಣಿನಲ್ಲಿ ಹಲವು ರಾಜ್ಯ ಮಹಾರಾಜರುಗಳು ಸಾಂಸ್ಕೃತಿಕ ವೈಭವದ ಕೊಡುಗೆಯನ್ನು ನೀಡಿದ್ದಾರೆ. ದಾಸರು, ದಾರ್ಶನಿಕರು, ವಚನಕಾರರು, ಸಾಹಿತಿಗಳು, ವಿಧ್ವಾಂಸರು ತಮ್ಮದೇ ಆದ ವಿಶಿಷ್ಟವಾದ ಸಾಹಿತ್ತಿಕ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Rajyotsava 2026: ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ
6500 ಹೊಸ ಬಸ್
ರಾಜ್ಯದ ಜನತೆಗೆ ಇನ್ನಷ್ಟು ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ಪಿಎಂ ಇ- ಡ್ರೈವ್ ಯೋಜನೆಯಡಿ 4500 ಮತ್ತು ವಿಶ್ವಬ್ಯಾಂಕ್ ನೆರವಿನಲ್ಲಿ 2000 ಬಸ್ ಗಳನ್ನು ಪಡೆದು ಕೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸ ಲಾಗುತ್ತಿದೆ ಎಂದು ಹೇಳಿದರು. ಈ ಒಟ್ಟು 6500 ಹೊಸ ಬಸ್ ಗಳನ್ನು ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.
ಶಕ್ತಿ ಯಶಸ್ವಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ಇದುವರೆಗೆ 845.33 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರ 22281.94 ಕೋಟಿ ರೂಪಾಯಿ ಗಳನ್ನು ವೆಚ್ಚ ಮಾಡಿದೆ ಎಂದು ಮಾಹಿತಿ ನೀಡಿದರು.
10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಇಲ್ಲಿಯವರೆಗೆ 10,07,755 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ವಿತರಿಸಲಾಗಿದೆ. ಮೆಟ್ರೋ ಮತ್ತು ಬಸ್‌ಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಇಂಟಿಗ್ರೇಟೆಡ್ ಮೊಬೈಲ್ app ಅನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಸಚಿವರು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಹೆಸರು
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು “ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರು ನಾಮಕರಣ” ಮಾಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 3318 ಕೋಟಿ ರೂಪಾಯಿ ಗ್ಯಾರಂಟಿ ಅನುದಾನ
- ಪಂಚ ಗ್ಯಾರಂಟಿ ಯೋಜನೆಯ ಮುಖಾಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ 3,318.37 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಬಹುಕಾಲದ ಕುಡಿಯುವ ನೀರಿನ ಶಾಶ್ವತಯೋಜನೆಯಾದ ಎತ್ತಿನಹೊಳೆ ಯೋಜನೆಯಲ್ಲಿ ಜಿಲ್ಲೆಗೆ ಒಟ್ಟು 5.093 ಟಿಎಂಸಿ ನೀರು ಹಂಚಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
24 ಸಾವಿರ ನಿವೇಶನ
ಕಂದಾಯ ಇಲಾಖೆಯಿಂದ ಜಿಲ್ಲೆಯನ್ನು ಸಂಪೂರ್ಣ “ಕಂದಾಯ ಗ್ರಾಮ ವಿಶೇಷ ಅಭಿಯಾನ” ಹಮ್ಮಿಕೊಳ್ಳಲಾಗುತ್ತಿದೆ. ನಿವೇಶನರಹಿತರಿಗೆ ಸುಮಾರು 24,112 ನಿವೇಶನಗಳನ್ನು ಹಂಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ರೈತರಿಗೆ ನೆರವು
ಬರದ ನಿರ್ವಹಣೆಯ ಭಾಗವಾಗಿ 1.53 ಲಕ್ಷ ರೈತರನ್ನು ಬೆಳೆ ವಿಮೆ ಯೋಜನೆಯಡಿ ನೋಂದಾ ಯಿಸಲಾಗಿದೆ. ಈ ಪೈಕಿ ಬಿತ್ತನೆ ಕಾರ್ಯ ವಿಫಲವಾಗಿರುವ 1.3 ಲಕ್ಷ ರೈತರಿಗೆ 140.44 ಕೋಟಿ ಅನುದಾನ ನೀಡಲು ಕ್ರಮವಹಿಸಲಾಗಿದೆ. ರೈತರ ಸಂಕಷ್ಟ ಅರಿತಿರುವ ನಮ್ಮ ಸರ್ಕಾರವು ಈ ಬರ ಛಾಯೆಯಲ್ಲಿ ರೈತರಿಗೆ ನೆರವಾಗಲು ಹಾಲಿನ ದರವನ್ನು 8 ರೂಪಾಯಿ ಪ್ರತಿ ಲೀಟರ್‌ಗೆ ಹೆಚ್ಚಿಸ ಲಾಗಿದೆ. ಅದರಲ್ಲಿ 7 ರೂ. ನೇರವಾಗಿ ರೈತರಿಗೆ ತಲುಪುತ್ತದೆ. ಈ ಮೂಲಕ ನಮ್ಮ ರೈತರಿಗೆ ನಮ್ಮ ಸರ್ಕಾರ ಈ ಮೂಲಕ ಬೆಂಗಾವಲಾಗಿ ನಿಂತಿದೆ ಎಂದರು.
ಹೈಟೆಕ್ ಮಾರುಕಟ್ಟೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೂ.200 ಕೋಟಿ ವೆಚ್ಚದ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ, ಚಿಕ್ಕಬಳ್ಳಾಪುರದಲ್ಲಿ ರೂ.141.50 ಕೋಟಿ ವೆಚ್ಚದ ಅಂತರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಹಾಗೂ ನಂದಿ ಬೆಟ್ಟದಲ್ಲಿ 94 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣ ಕಾರ್ಯಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸಚಿವರು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.