ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಕರ್ನಾಟಕ ಸಹಕಾರ ರತ್ನಪ್ರಶಸ್ತಿ ಪುರಸ್ಕೃತ ಆವುಲರೆಡ್ಡಿರವರ ಸೇವೆ ಶ್ಲಾಘನೀಯ: ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಸೇವೆಯಲ್ಲಿದ್ದಾಗ ಮತ್ತು ನಿವೃತ್ತಿಯ ನಂತರವೂ ಆವುಲರೆಡ್ಡಿ ಅವರು ಸಹಕಾರ ಸಂಘದಲ್ಲಿ ಮಾಡಿದ ಸೇವೆಯನ್ನು ಗುರ್ತಿಸಿ ಸರ್ಕಾರ ಮತ್ತು ಸಹಕಾರ ಇಲಾಖೆ ನೀಡಿರುವ ಪ್ರಶಸ್ತಿಯ ಜೊತೆಗೆ ನಿಮ್ಮೆಲ್ಲರ ಪ್ರೀತಿ ಮಹತ್ತರವಾಗಿದೆ

ರೈತರು ಕೃಷಿಯ ಜೊತೆಗೆ ಹೈನು ಗಾರಿಕೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ

ಕರ್ನಾಟಕ ಸಹಕಾರ ರತ್ನಪ್ರಶಸ್ತಿ ಪುರಸ್ಕೃತ ಆವುಲರೆಡ್ಡಿರವರ ಸೇವೆ ಶ್ಲಾಘನೀಯ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.

Profile Ashok Nayak Jan 29, 2025 1:03 AM

ಗೌರಿಬಿದನೂರು: ಕರ್ನಾಟಕ ಸಹಕಾರ ರತ್ನಪ್ರಶಸ್ತಿ ಪುರಸ್ಕೃತ ಆವುಲರೆಡ್ಡಿರವರ ಸೇವೆ ಶ್ಲಾಘ ನೀಯ  ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.

ನಗರ ಹೊರವಲಯದಲ್ಲಿರುವ ಚಿಮುಲ್ ಶಿಬಿರ ಕಚೇರಿಯ ಆವರಣದಲ್ಲಿ ಸೋಮವಾರ ಚಿಕ್ಕ ಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮತ್ತು ಗೌರಿಬಿದನೂರು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ವಿಸ್ತರಣಾಧಿಕಾರಿ ಆವುಲರೆಡ್ಡಿ ಅಭಿ ನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Leelavathy Vijaykumar Column: ಕರಿಗಲ್ಲಿನ ಮಹತ್ವ

ಸೇವೆಯಲ್ಲಿದ್ದಾಗ ಮತ್ತು ನಿವೃತ್ತಿಯ ನಂತರವೂ ಆವುಲರೆಡ್ಡಿ ಅವರು ಸಹಕಾರ ಸಂಘದಲ್ಲಿ ಮಾಡಿದ ಸೇವೆಯನ್ನು ಗುರ್ತಿಸಿ ಸರ್ಕಾರ ಮತ್ತು ಸಹಕಾರ ಇಲಾಖೆ ನೀಡಿರುವ ಪ್ರಶಸ್ತಿಯ ಜೊತೆಗೆ ನಿಮ್ಮೆಲ್ಲರ ಪ್ರೀತಿ ಮಹತ್ತರವಾಗಿದೆ. ಸಹಕಾರ ಕ್ಷೇತ್ರದಲ್ಲಿ ಮಾಡಿದ ಪ್ರಾಮಾಣಿಕ ಸೇವೆ, ಶಿಸ್ತು, ಜನಪರವಾದ ಕಾರ್ಯಗಳಿಂದ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ. ರೈತರು ಕೃಷಿಯ ಜೊತೆಗೆ ಹೈನು ಗಾರಿಕೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.

ಸ್ಥಳೀಯ ರೈತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಿ ಅವುಗಳ ಪರಿಹಾರಕ್ಕೆ ನಾವು ಸದಾ ಬದ್ದ ರಾಗಿರುತ್ತೇವೆ.  ಕೃಷಿ ಮತ್ತು ಹೈನುಗಾರಿಕಾ ಚಟುವಟಿಕೆಗಳ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಅವರ ಉಜ್ವಲ ಬದುಕಿಗೆ ಸಹಕಾರಿಯಾಗಬೇಕಾಗಿದೆ. ತಿಸ್ತು, ಸಂಯಮ, ದಕ್ಷತೆ, ಬದ್ಧತೆ, ಕ್ರಿಯಾಶೀಲವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗೆ ವೃತ್ತಿಯಲ್ಲಿ ನಿವೃತ್ತಿ ಇರು ವುದಿಲ್ಲ, ಸಮಾಜಕ್ಕೆ ಅವರ ಸೇವೆ ಸದಾ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.

ಕೋಚಿಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಜೆ.ಕಾಂತರಾಜು ಮಾತನಾಡಿ, ಸರ್ಕಾರವು ಪ್ರತೀ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರ್ತಿಸಿ ಪ್ರಶಸ್ತಿ ನೀಡಿ ಅಭಿನಂಧಿಸುತ್ತಾರೆ. ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿ ಜನರ ಪ್ರೀತಿ, ವಿಶ್ವಾಸ, ನಂಬಿಕೆಗೆ ಪಾತ್ರವಾಗಿರುವ ಆವುಲರೆಡ್ಡಿ ಯವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಶ್ಲಾಘ ನೀಯವಾಗಿದೆ.

ತಾಲ್ಲೂಕಿನ 37 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ರಚನೆ ಮತ್ತು ವ್ಯವಸ್ಥಿತವಾಗಿ ನಡೆಯಲು ಆವುಲರೆಡ್ಡಿ ಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೈನುಗಾರಿಕೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಾಕಷ್ಟು ಬದಲಾವಣೆ ತಂದು ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಪರಿಗಣಿಸಿ ಸರ್ಕಾರ ನೀಡಿರುವ ಪ್ರಶಸ್ತಿಯು ನಿಜಕ್ಕೂ ಇಡೀ ತಾಲ್ಲೂಕಿನ ಹೈನುದಾರರಿಗೆ ದೊರೆತಿರುವ ಅಭಿನಂಧನೆಯಾಗಿದೆ.

ಚಿಕ್ಕಬಳ್ಳಾಪುರ ಒಕ್ಕೂಟವು ಆರಂಭವಾಗಿದ್ದು, ಸಾಕಷ್ಟು ಸವಾಲುಗಳ ನಡುವೆ ಅಭಿವೃದ್ಧಿಯ ಪಥದತ್ತ ಸಾಗಲಿದೆ. ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟವನ್ನು ಸದೃಢಗೊಳಿಸೋಣ ಎಂದು ಹೇಳಿದರು.

ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎ.ಸಿ.ಶ್ರೀನಿವಾಸರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ನಿತ್ಯ 4.50 ಲಕ್ಷ ಲೀಟರ್ ನಷ್ಟು ಸಂಗ್ರಹವಾಗುತ್ತಿದ್ದು, ಇದರಿಂದಾಗಿ ವಿವಿಧ ಹಾಲಿನ ಉತ್ಪನ್ನಗಳನ್ನು ಸಿದ್ದಮಾಡುತ್ತಿದ್ದೇವೆ. ಹೈನುದಾರರು ಒಕ್ಕೂಟಕ್ಕೆ ಗುಣಮಟ್ಟದ ಹಾಲ ನ್ನು ಪೂರೈಸುವ ಮೂಲಕ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತ್ತು ಒಕ್ಕೂಟ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿದೆ ಮತ್ತು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಮತ್ತು ಲಸಿಕೆ ಸೌಲಭ್ಯಗಳನ್ನು ಹೈನುದಾರರು ತಮ್ಮ ರಾಸುಗಳಿಗೆ ಕೊಡಿಸಬೇಕಾಗಿದೆ. ರಾಸುಗಳಿಗೆ ಗುಂಪು ವಿಮೆ ಸೌಲಭ್ಯ ಮತ್ತು ಚಿಮುಲ್ ಘಟಕದಿಂದ ಜನವರಿ ೨೦೨೫ ರಿಂದ ರೈತರ ಹಾಲಿಗೆ ಹಣ ದೊರೆಯಲಿದೆ. ನಿಮ್ಮೆಲ್ಲರ ಸಹಕಾರದಿಂದ ಒಕ್ಕೂಟವು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಲಿದೆ ಎಂದು ಹೇಳಿದರು.

ಕೋಚಿಮುಲ್ ತಾಲ್ಲೂಕು ಘಟಕದ ಉಪವ್ಯವಸ್ಥಾಪಕರಾದ ಡಾ.ನರೇಂದ್ರ ಸಿದ್ದಣ್ಣ ಬೂದಿಯಾಳ್ ಮಾತನಾಡಿ, ದಶಕಗಳ ಕಾಲ ಕೋಚಿಮುಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವುಲರೆಡ್ಡಿ ರವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರವಾಗಿದೆ.

ಕೋಚಿಮುಲ್ ನ ನಿರ್ದೇಶಕರು ಹಾಗೂ ಮಾರ್ಗದರ್ಶಕರಾದ ಜೆ.ಕಾಂತರಾಜು ರವರ ನಿರ್ದೇಶನ ದಂತೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಟೆಪ್ ವಿಭಾಗದ ನಿವೃತ್ತ ವಿಸ್ತರಣಾಧಿಕಾರಿ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಆವುಲರೆಡ್ಡಿ, ಪಶು ಮತ್ತು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಸ್ ಮಾರುತಿ ರೆಡ್ಡಿ, ರೈತ ಸಂಘದ ಅಧ್ಯಕ್ಷರಾದ ಜಿ.ವಿ.ಲೋಕೇಶ್ ರೆಡ್ಡಿ, ನೌಕರರ ಸಂಘದ ಅಧ್ಯಕ್ಷರಾದ ವೆಂಕಟೇಶರೆಡ್ಡಿ, ಶಿಬಿರ ಕಚೇರಿಯ ಅಧಿಕಾರಿಗಳಾದ ಗಗನ್ ಸಂಜಯ್, ನಿವೇದಿತಾ, ನವೀನ್, ನವೀನ್ ಚಂದ್ರ, ಉದಯ್, ಎಂ.ಆರ್. ಶ್ರೀನಿವಾಸ್, ಮಲ್ಲಿಕಾರ್ಜುನ, ಡಿ.ಜೆ.ಶ್ರೀನಿವಾಸ್, ಯೋಗಾನಂದ ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯ ದರ್ಶಿಗಳು, ಸಹಾಯಕರು, ಹಾಲು ಉತ್ಪಾದಕ ರೈತರು ಸೇರಿದಂತೆ ಇತರರು ಭಾಗವಹಿಸಿದ್ದರು.