Leelavathy Vijaykumar Column: ಕರಿಗಲ್ಲಿನ ಮಹತ್ವ
ಆಯಾ ಊರಿನ ಗುರು- ಹಿರಿಯರ, ದೈವಸ್ಥರ ನಿರ್ಣಯವಾಗಿರುವುದು. ಈ ಕರಿಗಲ್ಲಗಳನ್ನು ಸಾಮಾನ್ಯ ವಾಗಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಭಾಗದ ಪ್ರತಿ ಊರುಗಳಲ್ಲಿ ಕಾಣುತ್ತೇವೆ. ಇದು ಆಯಾ ಊರುಗಳ ಅಸ್ತಿತ್ವವನ್ನು, ಗಡಿಯನ್ನು ಸಂಕೇತಿಸುವುದೂ ಆಗಿದೆ.


ಪ್ರತಿಯೊಬ್ಬರಿಗೂ ನಾವು ಹುಟ್ಟಿ ಬೆಳೆದ ಊರುಗಳ ಬಗ್ಗೆ, ಅಲ್ಲಿನ ವಿಶೇಷತೆಯ ಬಗ್ಗೆ ಹೆಮ್ಮೆ, ಕಾಳ ಜಿ, ಅಭಿಮಾನ ಇದ್ದೇ ಇರುತ್ತದೆ. ಪ್ರತಿಯೊಂದು ಊರಿನಲ್ಲೂ ಬಹು ಹಿಂದೆ ಪೂರ್ವಜರು ಇಲ್ಲವೇ ಊರ ಹಿರಿಯರು ಸೇರಿ ಸ್ಥಾಪಿಸಿದ ಕರಿಗಲ್ಲು ಅಥವಾ ಕರೆಗಲ್ಲು ನಿಜಕ್ಕೂ ವಿಶಿಷ್ಟ, ಆಡುಮಾತಿನಲ್ಲಿ ‘ಕರ್ಗಲ್ಲು’ ಎಂದೇ ಹೇಳುವ ಕರಿಗಲ್ಲುಗಳು ಪ್ರತೀ ಊರಿನ ಬ್ರಹ್ಮಸ್ಥಾನ ಅಂದರೆ ಊರ ಮಧ್ಯಭಾಗ ದಲ್ಲಿ, ದೇವಸ್ಥಾನದ ಪಕ್ಕ ಅಥವಾ ಊರ ಪ್ರದೇಶದ ಆರಂಭದಲ್ಲಿಯೋ ಇದ್ದೆ ಇರುವುದನ್ನು ನೋಡುತ್ತೇವೆ. ಕೆಲವು ಊರುಗಳಲ್ಲಿ ಊರಿನ ನಾಲ್ಕು ದಿಕ್ಕಿನಲ್ಲಿಯೂ ಮತ್ತು ಊರಿನ ನಡುವೆ ಒಂದು ಕರಿಗಲ್ಲು ಸ್ಥಾಪಿಸಿರುವರು.
ಅದು ಆಯಾ ಊರಿನ ಗುರು- ಹಿರಿಯರ, ದೈವಸ್ಥರ ನಿರ್ಣಯವಾಗಿರುವುದು. ಈ ಕರಿಗಲ್ಲಗಳನ್ನು ಸಾಮಾನ್ಯವಾಗಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಭಾಗದ ಪ್ರತಿ ಊರುಗಳಲ್ಲಿ ಕಾಣುತ್ತೇವೆ. ಇದು ಆಯಾ ಊರುಗಳ ಅಸ್ತಿತ್ವವನ್ನು, ಗಡಿಯನ್ನು ಸಂಕೇತಿಸುವುದೂ ಆಗಿದೆ.
ಊರಿನ ಎಲ್ಲರಿಂದ ಪೂಜಿಸಲ್ಪಡುವ ‘ಕರಿಗಲ್ಲಿ’ಗೆ ಪ್ರತ್ಯೇಕವಾದ ಮಂಟಪ, ಗುಡಿ ಯಾವುದೂ ಇರುವುದಿಲ್ಲ. ಪೂಜೆ ಎಂದರೆ, ಮಾಮೂಲಿ ನಾವು ಮಾಡುವಂತಹ ಪೂಜೆಯಷ್ಟೇ. ಏನು ಇರದಿ ದ್ದರೂ ಕರಗಲ್ಲಿಗೆ ಎಣ್ಣೆ ಹಾಕುವುದು ಕಡ್ಡಾಯ. ನೋಡಲು ಉದ್ಭವ ಶಿವಲಿಂಗದಂತೆ ಇರುವ ಕಡುಕಪ್ಪು ನುಣುಪಾದ, ಗುಂಡನೆಯ ಶಿಲೆಯನ್ನು, ಗುರುಗಳ ನೇತೃತ್ವದಲ್ಲಿ ಕುಂಭಾಭಿಷೇಕ, ರುದ್ರಾಭಿಷೇಕವ ಮೂಲಕ ಶಾಸ್ತೋಕ್ತವಾಗಿ ಶಕ್ತಿ ಸಂಚಯಿಸಿ ಊರಿನ ನಿಗದಿತ ಭೂಮಿಯಲ್ಲಿ ಸ್ಥಾಪಿಸಿರುವರು.
ಊರಿನ ಮೂಲ ಕೇಂದ್ರ, ಶಕ್ತಿ ಕೇಂದ್ರ ‘ಕರಿಗಲ್ಲು’ ಹೇಗೆಂದರೆ, ಒಂದು ಕಟ್ಟಡ ಕಟ್ಟುವಾಗ ‘ಶಂಕು ಸ್ಥಾಪನೆ’ಗೆ ಎಷ್ಟು ಮಹತ್ವವೋ, ಅಷ್ಟು ಮಹತ್ವವಿದೆ ಕರಿಗಲ್ಲಿಗೆ. ಇದರ ಸ್ಥಾಪನೆಗೆ ಇಡೀ ಊರಿನ ಭಾಗಿಯಾಗುವಿಕೆ, ಆಶೀರ್ವಾದದ ಸಡಗರ-ಸಂಭ್ರಮ, ಪ್ರಸಾದ ವ್ಯವಸ್ಥೆ ಇರುತ್ತದೆ. ಯುಗಾದಿ, ಪಂಚಮಿ, ದೀಪಾವಳಿಯಂತಹ ದೊಡ್ಡ ದೊಡ್ಡ ಹಬ್ಬಗಳಲ್ಲಿ ಕರಿಗಲ್ಲಿಗೆ ಅಭಿಷೇಕ-ಪೂಜೆ ಸಲ್ಲಿಸು ವುದು ನಿಯಮ.
ಹಾಗೆಯೇ ಹೊಸದಾಗಿ ಮದುವೆ ಯಾದಾಗ, ಹುಟ್ಟಿದ ಮಗುವನ್ನು ಮೊದಲ ಬಾರಿಗೆ ಊರಿಗೆ ಕರೆದುಕೊಂಡು ಬರುವಾಗ, ಗೃಹಪ್ರವೇಶದಲ್ಲಿ ಗಂಗೆ ಹೊತ್ತು ಬರುವಾಗ, ಶುಭಕಾರ್ಯಗಳು ನಡೆ ದಾಗ,‘ಕರಿಗಲ್ಲನ್ನು ದಾಟಿ ಬರಬೇಕು’/ ’ಕರಿಗಲ್ಲು ದಾಟಿಸಬೇಕು’ ಎಂಬ ನಿಯಮವಿದೆ. ಅಂದರೆ ಪೂಜೆ ಸಲ್ಲಿಸಿ ಬರಬೇಕು. ಇದರರ್ಥ ಕರಿಗಲ್ಲಿಗೆ ನಮಿಸಿದರೆ, ಆ ಊರಿಗೆ ಗೌರವಿಸುವುದು, ಮತ್ತೊಂದು ಆ ಊರಿನ ಮೂಲ ಶಕ್ತಿ ಸ್ಥಾನಕ್ಕೆ ಗೌರವ ಸಲ್ಲಿಸಿದಂತೆ ಎಂದರ್ಥ.
ಅಷ್ಟೇ ಏಕೆ, ಕೆಲವು ಊರುಗಳಲ್ಲಿ ವ್ಯಕ್ತಿಯ ಅಂತಿಮ ಪಯಣವನ್ನು, ಊರಿಗೆ ಅವರ ಕೊನೆಯ ನಮನ ಎನ್ನುವುದರ ಸೂಚ್ಯವಾಗಿ ಕರಿಗಲ್ಲಿನ ಮೂಲಕವೇ ನಡೆಸುವ ಪದ್ದತಿ. ನಾವು ಮೂಲ ಊರಿನಲ್ಲಿ ಇರದಿದ್ದರೂ, ವರ್ಷಕ್ಕೆ ಒಮ್ಮೆಯಾದರೂ ಕರ್ಗಲ್ಲಿಗೆ ಪೂಜಿಸ ಬೇಕು ಎಂದು ಹಿರಿಯರು ಹೇಳುವುದು ವಾಡಿಕೆ. ಅದು ನಮ್ಮ ಊರಿನೊಂದಿಗಿನ ಬೆಸುಗೆಯನ್ನು ಇನ್ನೂ ಗಟ್ಟಿಗೊಳಿಸುವುದು. ಮೂಲ ಬೇರು ಸಡಿಲವಾಗದಂತೆ ತಡೆಯುವುದು ಎಂಬುದು ಹಿರಿಯರು, ಅನುಭವಿಗಳ ಮಾತು.
ಈಗೀಗಂತೂ ಊರುಗಳು ಬೆಳೆದು ಹೊಸ ಬಡಾವಣೆ- ಕಾಲೋನಿಗಳು ನಿಮಾರ್ಣವಾಗುವುದು ಸಹಜವೇ. ಹಾಗಾಗಿ ಅಲ್ಲಿ ವಾಸಿಸುವವರಿಗೆ ಅನುಕೂಲ ವಾಗಲೆಂದು, ಇತ್ತೀಚಿನ ದಿನಗಳಲ್ಲಿ, ಬಡಾವಣೆಗೊಂದು ಕರಿಗಲ್ಲು ಹಾಕುವುದು ನೋಡುತ್ತೇವೆ. ಹಾಗಾಗಿಯೇ, ’ಕರ್ಗಲ್ಲು ಬೇರೆಯಾದರೆ ಊರೇ ಬೇರೆಎಂಬ ಮಾತು ಇತ್ತೀಚಿಗೆ ಪ್ರಚಲಿತವಿದ್ದರೂ, ಮೂಲ ಊರಿನೊಂದಿಗಿನ ಬಾಂಧವ್ಯ ಸುಲಭವಾಗಿ ಸಡಿಲವಾಗುವಂತಹುದಲ್ಲ, ಅಲ್ಲವೇ?