ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದ ಆವರಣ ಭಾನುವಾರ ಕಲೆ ಸಂಸ್ಕೃತಿ, ಮತ್ತು ಪ್ರತಿಭೆಗಳ ಪ್ರತಿಭೋತ್ಸವದ ಹಬ್ಬಕ್ಕೆ ಸಾಕ್ಷಿಯಾಯಿತು. ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ಚಿಕ್ಕಬಳ್ಳಾಪುರ ಸಾಂಸ್ಕೃತಿಕ ಪ್ರತಿಭೋತ್ಸವ–2026 ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೫೦ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದ ದಿವಂಗತ ಆರ್.ಅಶ್ವತ್ ನಾರಾಯಣ್ ಅವರ ಪುತ್ರಿ, ರಂಗಭೂಮಿ ಕಲಾವಿದೆ ಲೀಲಾ ಅಶ್ವತ್ಥ್ ನಾರಾಯಣ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಶಿಸ್ತಿನಿಂದ ಹಾಗೂ ಭಾವಪೂರ್ಣವಾಗಿ ನಡೆಯಿತು. ವೇದಿಕೆಯಲ್ಲಿ ಕಲೆಯ ವೈಭವ ಮೆರೆಯಿತು.
ಮಂಚನಬೆಲೆ ಡ್ಯಾನ್ಸ್ ಶ್ರೀನಿವಾಸ್ ಅವರ ತಂಡದಿಂದ ಪ್ರದರ್ಶಿತವಾದ ಶಿವ ತಾಂಡವ ನೃತ್ಯ ಪ್ರೇಕ್ಷಕರ ಮನಗೆದ್ದಿತು. ಯುವ ಗಾಯಕ ರಿಂದ ಸುಗಮ ಸಂಗೀತದ ಮಧುರ ಗಾನ, ಶಾಲಾ ಮಕ್ಕಳಿಂದ ಚಿತ್ರಕಲೆ, ಏಕಪಾತ್ರಾಭಿ ನಯ, ಮಿಮಿಕ್ರಿ ಸೇರಿದಂತೆ ಹಲವಾರು ವೈವಿಧ್ಯ ಮಯ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಚಿಂತನೆಗೂ ಆಹ್ವಾನ ನೀಡಿದವು.
ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ನೀಡಿದ ಕರ್ನಾಟಕ ಸಾಮಾಜಿಕ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಏಡುಕೊಂಡಲ ಶ್ರೀನಿವಾಸ್, “ಸಾಂಸ್ಕೃತಿಕ ಸಂಘಟನೆಗಳು ಕೇವಲ ಕಾರ್ಯಕ್ರಮಗಳ ನಿರ್ವಹಣೆಗೆ ಸೀಮಿತ ವಾಗಬಾರದು; ಅವು ಸಮಾಜದ ಅಭಿವೃದ್ಧಿಗೆ ದಾರಿದೀಪವಾಗಬೇಕು. ಲೀಲಾ ಅಶ್ವತ್ಥ್ ನಾರಾಯಣ್ ಅವರು 21 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಸೇವೆ ನಿಜಕ್ಕೂ ಪ್ರಶಂಸನೀಯ” ಎಂದು ಹೇಳಿದರು.
“ಸುಮಾರು 2500 ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವುದೇ ಸಂಸ್ಥೆಗಳ ನಿಜವಾದ ಸಾಧನೆ” ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮಾತನಾಡಿ “ಕಲೆ ಮತ್ತು ಸಾಹಿತ್ಯಕ್ಕೆ ನೀಡುವ ಪ್ರೋತ್ಸಾಹ ಕನ್ನಡ ಸಂಸ್ಕೃತಿಗೆ ಸಲ್ಲಿಸುವ ಮಹತ್ವದ ಸೇವೆ ಎಂದು ಭಾವಿಸಿ ಕನ್ನಡ ಕೈಂಕರ್ಯದಲ್ಲಿ ಈ ಸಂಸ್ಥೆ ಮುನ್ನಡೆದಿರುವುದು, ಇದರ ಹೆಸರಲ್ಲಿ ಪ್ರಶಸ್ತಿ ಪಡೆದಿರುವುದು ಸೌಭಾಗ್ಯ ಎಂದು ಹೇಳಿದರು.
ಕಾರ್ಮಿಕ ಮುಖಂಡ ಮೂರ್ತಿ ಅವರಿಗೂ ಕೂಡ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈ ವೇಳೆ ಮಾತನಾಡಿ “ಭಾಷೆ ಮತ್ತು ಸಂಸ್ಕೃತಿಯ ಮೂಲಕ ಏಕತೆಯನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ದ್ವೇಷವಿಲ್ಲದೆ ಸಹೋದರತ್ವವನ್ನು ಬೆಳೆಸುವ ಕಾರ್ಯಗಳು ನಡೆಯ ಬೇಕು” ಎಂದು ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ತಿಪ್ಪೇನಹಳ್ಳಿ ನಾರಾಯಣ ಅವರು, “ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಸಾಧಕರನ್ನು ಸನ್ಮಾನಿಸುವುದು ಸಂಸ್ಥೆಯ ಮಹತ್ವದ ಸಾಧನೆ. ಈ ಕಾರ್ಯಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಹಾರೈಸಿದರು.
ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಮಂಚನಬಲೆ ಡ್ಯಾನ್ಸ್ ಶ್ರೀನಿವಾಸ್ ಅವರಿಗೆ ಕರ್ನಾಟಕ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯ ಸಂಸ್ಥಾಪಕಿ ಲೀಲಾ ಅಶ್ವತ್ಥ್ ನಾರಾಯಣ್ ಮಾತನಾಡಿ, “ಗಡಿನಾಡಾದ ಚಿಕ್ಕ ಬಳ್ಳಾಪುರದಲ್ಲಿ ಕಾರ್ಯಕ್ರಮ ಆಯೋಜಿಸಲು ನೆರವಾದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರೇಮಾವತಿ, ಯುವ ಮುಖಂಡ ಅನುಆನಂದ್, ಮೆಕ್ಯಾನಿಕ್ ಸಂಘದ ದೇವರಾಜ್, ಪ್ರಾಂಶುಪಾಲ ಆಂಜಿನಪ್ಪ ಸೇರಿದಂತೆ 50 ಮಂದಿಗೆ ಸಾಮಾಜಿಕ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಸ್ಕೃತಿ, ಕಲೆ ಮತ್ತು ಪ್ರತಿಭೆಗಳ ಸಮಾಗಮವಾಗಿ ಮೂಡಿಬಂದ ಈ ಕಾರ್ಯಕ್ರಮ, ಭಾಗವಹಿಸಿದ ಪ್ರತಿಯೊಬ್ಬರ ಮನದಲ್ಲಿ ದೀರ್ಘಕಾಲದ ನೆನಪಾಗಿ ಉಳಿಯಿತು.