ಚಿಕ್ಕಬಳ್ಳಾಪುರ: ಕನ್ನಡ ಭಾಷೆ, ಸಾಹಿತ್ಯ ಮತ್ತು ಕನ್ನಡ ಮಾಧ್ಯಮ ಶಿಕ್ಷಣದ ಬಲವರ್ಧನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಿರುವ ಎಂಟು ನಿರ್ಣಯಗಳನ್ನು ಜಾರಿಗೊಳಿಸಲು ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು(Kannada Sahithya Parishad) ಒತ್ತಡ ತರಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ತಿಳಿಸಿದರು.
ಚಿಂತಾಮಣಿ ನಗರದಲ್ಲಿ ನಡೆದ 11ನೇ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸರ್ವಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahally Shivaprasad) ಮಂಡಿಸಿದ ಎಂಟು ನಿರ್ಣಯಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪರಿಷತ್ತು ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ಸಮ್ಮೇಳನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ನೂರಾರು ಕನ್ನಡಪರ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಹಾಗೂ ಸಾಹಿತ್ಯ ಸಮ್ಮೇಳನಗಳ ಮೂಲಕ ಆಯೋಜಿಸಿರುವ ಬಗ್ಗೆ ತೃಪ್ತಿಯಿದೆ. ಆದರೆ ಸಂಪೂರ್ಣ ತೃಪ್ತಿ ಇಲ್ಲ. ಸಮ್ಮೇಳನದ ಸಿದ್ಧತೆ, ಸಂಘಟನೆ ಮತ್ತು ಪ್ರಚಾರದಲ್ಲಿ ಕಂಡುಬಂದಿರುವ ಸಣ್ಣಪುಟ್ಟ ಕೊರತೆಗಳನ್ನು ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಲೋಪಗಳನ್ನು ಸರಿಪಡಿಸಿಕೊಂಡು ಕನ್ನಡ ಕೈಂಕರ್ಯವನ್ನು ಮುನ್ನಡೆಸಬೇಕಿದೆ ಎಂದರು.
ಇದನ್ನೂ ಓದಿ: Kannada Sahithya Sammelana: ತೆಲುಗು ಆಡುಭಾಷೆಯಾಗಿದ್ದರೂ ಕನ್ನಡವೇ ಹೃದಯದ ಭಾಷೆ; ನೆಲವೇ ಕುಲವಾಗಲಿ: ಗಣ್ಯರ ಆಶಯ
ತಮ್ಮ ಅವಧಿಯಲ್ಲಿ 'ನುಡಿ ತೋರಣ' ಕಾರ್ಯಕ್ರಮದ ಮೂಲಕ 15 ಸಾವಿರಕ್ಕೂ ಹೆಚ್ಚು ಪುಸ್ತಕ ಗಳನ್ನು ವಿತರಿಸಿ ಓದು ಸಂಸ್ಕೃತಿ ಬೆಳೆಸಲು ಶಕ್ತಿಮೀರಿ ಪ್ರಯತ್ನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅದೇ ರೀತಿಯಲ್ಲಿ ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನೂ ಆಯೋಜಿಸಲಾಗಿದೆ. ಕವಿ, ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಅಂಚಿನ ವರ್ಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಗಡಿ ಭಾಗದಲ್ಲಿ ಭಾಷಾ ಸಾಮರಸ್ಯ ಕಾಪಾಡಿಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಸ್ನೇಹಿತರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಎಲ್ಲರ ಮಾರ್ಗದರ್ಶನ ಮತ್ತು ಸಹಕಾರದಿಂದ ಕನ್ನಡಪರ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಆರಂಭದಲ್ಲಿ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ ಎಂಬ ಅಳುಕಿತ್ತು. ಸಂಸ್ಥೆಗೆ ಆರ್ಥಿಕ ನೆರವಿನ ಕೊರತೆಯೂ ಇದ್ದುದರಿಂದ ಪರಿಷತ್ತನ್ನು ಹೆಚ್ಚಿನ ಮಟ್ಟದಲ್ಲಿ ಜನರ ಬಳಿಗೆ ಕೊಂಡೊಯ್ಯಲು ಕೆಲವು ಮಿತಿಗಳಿದ್ದವು. ಆದರೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಮಾಧ್ಯಮಗಳ ಸಹಕಾರದಿಂದ ತಮ್ಮ ಇತಿಮಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿರುವ ಆತ್ಮತೃಪ್ತಿಯಿದೆ ಎಂದು ಹೇಳಿದರು.
ಅಧಿಕಾರಾವಧಿ ಮುಗಿಯುವ ಮುನ್ನ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ವಹಿಸಿಕೊಂಡಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಲಾಗುವುದು. ತಮ್ಮ ಅವಧಿಯಲ್ಲಿ ನಡೆದಿರುವ ಸಮಗ್ರ ಕನ್ನಡಪರ ಚಟುವಟಿಕೆಗಳ ಕುರಿತು ಜನರಿಗೆ ಮಾಹಿತಿ ನೀಡಲು ಉದ್ದೇಶಿಸ ಲಾಗಿದೆ. ಮುಂದಿನ ದಿನಗಳಲ್ಲಿ ಕಸಾಪ ಚುಕ್ಕಾಣಿ ಯಾರೇ ಹಿಡಿದರೂ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಕನ್ನಡ ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಕೋಡಿ ರಂಗಪ್ಪ ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಂಡಿಸಿದ ನಿರ್ಣಯಗಳಲ್ಲಿ ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆ, ಸರ್ಕಾರಿ ಶಾಲೆಗಳ ಖಾಲಿ ಶಿಕ್ಷಕರ ಹುದ್ದೆಗಳ ಭರ್ತಿ, ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ, ಕನ್ನಡ ಧ್ವಜ ಸ್ತಂಭಗಳ ನಿರ್ಮಾಣ, ಎಚ್.ಎನ್. ವ್ಯಾಲಿ ನೀರಿನ ಶುದ್ಧೀಕರಣ ಹಾಗೂ ಸಮಗ್ರ ನೀರಾವರಿ ಯೋಜನೆ, ಕನ್ನಡ ಭವನ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರಗಳ ಸ್ಥಾಪನೆ ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳು ಒಳಗೊಂಡಿವೆ.