ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಭಾಷೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಸಾಂಸ್ಥಿಕ ಚೌಕಟ್ಟಿನ ಪ್ರತಿರೂಪ ಕಸಾಪ

ಕರ್ನಾಟಕ ಸಾಹಿತ್ಯ ಪರಿಷತ್ತು ರೂಪುಗೊಳ್ಳಲು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಸರದಾರ್ ಎಂ.ಕಾಂತರಾಜೇ ಅರಸ್, ಎಚ್.ವಿ.ನಂಜುಂಡಯ್ಯ, ಎಂ.ಶ್ಯಾಮರಾವ್, ಎಂ.ಎಸ್. ಕುಟ್ಟಣ್ಣ, ಎಂ.ಕೆ.ವೆಂಕಟಕೃಷ್ಣಯ್ಯ, ಎಚ್.ಲಿಂಗರಾಜೇ ಅರಸ್, ಕರ್ಪೂರ ಶ್ರೀನಿವಾಸ ರಾವ್, ಬಿ.ಕೃಷ್ಣಪ್ಪ, ಕವಿ ತಿಲಕಶಾಸ್ತ್ರಿ, ಮುದವೀಡು ಕೃಷ್ಣರಾಯರು, ವಾಸುದೇವಾಚಾರ್, ಆಲೂರು ವೆಂಕಟರಾಯರು ಹೀಗೆ ಹಲವರು ಕಾರಣರಾಗಿದ್ದಾರೆ

ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಬಂಧ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಗಣ್ಯರು ಮಾಡಿದರು.

ಚಿಕ್ಕಬಳ್ಳಾಪುರ: ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಬೆಳವಣಿಗೆಯ ಸಾಂಸ್ಥಿಕ ಚೌಕಟ್ಟಿನ ರೂಪವೇ ಕಸಾಪ ಆಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ತಿಳಿಸಿದರು. ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 112ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಸಹಯೋಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಜತೆಗೆ ನೆಲಜಲದ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಕನ್ನಂಬಾಡಿ ಕಟ್ಟೆ(ಕೆಆರ್ ಎಸ್), ಭದ್ರಾವತಿ ಯಲ್ಲಿ ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕ್, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹೀಗೆ ಹತ್ತು, ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಕೆ.ರವಿ ಸ್ಮರಿಸಿದರು.    

ವಯಸ್ಕರಿಗೆ ಶಿಕ್ಷಣ, ಮೀಸಲಾತಿ ಹೀಗೆ ಹಲವಾರು ಜನಪರ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರಾಗಿದ್ದಾರೆ. ಕನ್ನಡ ನಾಡು ಹತ್ತು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಮೈಸೂರು ಸಂಪದಭ್ಯುದಯ ಸಮಾಜ’ವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯವಿದೆ ಎಂದು ಅರಿತು ಮೇ.15, 1915ರಲ್ಲಿ ಬೆಂಗಳೂರಿನ ಸರ್ಕಾರಿ ಹೈಸ್ಕೂಲ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಉದಯವಾಯಿತು ಎಂದರು.

ಇದನ್ನೂ ಓದಿ: Chinthamani News: 3 ರಾಜ್ಯಗಳಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು: ಚಿಂತಾಮಣಿಯಲ್ಲಿ ಬಿ ಜೆ ಪಿ ಕಾರ್ಯಕರ್ತರ ಸಂಭ್ರಮಾಚರಣೆ

ಕರ್ನಾಟಕ ಸಾಹಿತ್ಯ ಪರಿಷತ್ತು ರೂಪುಗೊಳ್ಳಲು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಸರದಾರ್ ಎಂ.ಕಾಂತರಾಜೇ ಅರಸ್, ಎಚ್.ವಿ.ನಂಜುಂಡಯ್ಯ, ಎಂ.ಶ್ಯಾಮರಾವ್, ಎಂ.ಎಸ್. ಕುಟ್ಟಣ್ಣ, ಎಂ.ಕೆ.ವೆಂಕಟಕೃಷ್ಣಯ್ಯ, ಎಚ್.ಲಿಂಗರಾಜೇ ಅರಸ್, ಕರ್ಪೂರ ಶ್ರೀನಿವಾಸ ರಾವ್, ಬಿ.ಕೃಷ್ಣಪ್ಪ, ಕವಿ ತಿಲಕಶಾಸ್ತ್ರಿ, ಮುದವೀಡು ಕೃಷ್ಣರಾಯರು, ವಾಸುದೇವಾಚಾರ್, ಆಲೂರು ವೆಂಕಟರಾಯರು ಹೀಗೆ ಹಲವರು ಕಾರಣರಾಗಿದ್ದಾರೆ ಎಂದು ತಿಳಿಸಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತ ನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀ ಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ. ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಕಾಲಕ್ಕೆ ಮೈಸೂರು ರಾಜ್ಯವು ಆಡಳಿತವು ದೇಶ ವಿದೇಶಗಳವರಿಗೆ ಪ್ರಯೋಗ ಶಾಲೆಯಂತಿತ್ತು. ರಾಜ್ಯಾಡಳಿತವನ್ನು ಅಭ್ಯಸಿಸಲು ದೇಶ ವಿದೇಶ ಗಳಿಂದ ಜನತೆ ಬರುತ್ತಿದ್ದರು ಎಂದರು.  

ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ,  ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಚಳುವಳಿಯ ಹರಿಕಾರರು, ಎಲ್ಲಾ ಊರುಗಳಲ್ಲಿ ಪ್ರಜಾಪ್ರಭುತ್ವದ ಗೌರವ ಸೃಷ್ಠಿಸಿದವರು. ರಾಜ್ಯಕ್ಕೆ ಬೇಕಾದ ಕಾರ್ಯಗಳು ಪ್ರಭುತ್ವದ ತೀರ್ಮಾನ ಆಗಬಾರದು, ಸಾರ್ವಜನಿಕ ಪ್ರತಿನಿಧಿಗಳು ಚರ್ಚಿಸ ಬೇಕು ಎನ್ನುವ ಕಾರಣಕ್ಕೆ ೧೯೦೯ರಲ್ಲಿ ಜನಪ್ರತಿನಿಧಿ ಸಮಿತಿ ರಚಿಸಿದ್ದರು. ಶಾಹು ಮಹಾರಾಜರನ್ನು ಬಿಟ್ಟರೆ ಪ್ರಜಾಪ್ರಭುತ್ವದೊಳಗೆ ರಾಜ್ಯಭಾರ ಮಾಡಿದ ಎರಡನೇ ರಾಜ ನಾಲ್ವಡಿ ಒಡೆಯರ್ , ಆ ಕಾಲಕ್ಕೇ ಒಡೆಯರ್ ಸಾಮಾಜಿಕ ಅನಿಷ್ಠಗಳನ್ನು ನಿಷೇಧಿಸಿದರು. ದೇಶದಲ್ಲಿ ಸಂವಿಧಾನ ರಚನೆ ಆಗುವ ಮೊದಲೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರು ಎಂದರು.

ಈ ವೇಳೆ, ಕನ್ನಡದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಪ್ರಬಂಧ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಡೀನ್ ಮತ್ತು ಪ್ರಾಂಶು ಪಾಲ ಡಾ.ಜಿ.ಪಿ.ಬಾಹುಬಲಿ, ಡಿಡಿಪಿಐ ರಮೇಶ್,  ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಎಂ. ಚನ್ನಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ,  ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ. ಶಂಕರ್, ಉಪನ್ಯಾಸಕಿ ಆರತಿ, ಜಿಲ್ಲಾ ಕ.ಸಾ.ಪ. ಸಮಿತಿ ಸದಸ್ಯರಾದ ಪ್ರೇಮಲೀಲಾವೆಂಕಟೇಶ್ , ಮಂಚನ ಬಲೆ ಶ್ರೀನಿವಾಸ್, ನಂದಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮೀರಾ, ಜಿಲ್ಲಾ ಕ.ಸಾ.ಪ ಗೌರವ ಜಂಟಿ ಕಾರ್ಯದರ್ಶಿಗಳಾದ ಟಿ.ವಿ. ಚಂದ್ರಶೇಖರ್, ಪಾ.ಮು. ಚಲಪತಿಗೌಡ, ಎಸ್.ಎನ್. ಅಮೃತ್ ಕುಮಾರ್, ಜಿಲ್ಲೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಕಾರ್ಯಕಾರಿ ಸದಸ್ಯರುಗಳು ಭಾಗವಹಿಸಿದ್ದರು.