ಚಿಕ್ಕಬಳ್ಳಾಪುರ: ಅಂಬೇಡ್ಕರ್ ಅವರ ಬದುಕು ಬರಹದ ಸುತ್ತ ಹಣೆದಿರುವ ಕೋಟಿಗಾನ ಹಳ್ಳಿ ರಾಮಯ್ಯರ ಅಂಬೇಡ್ಕರ್ ಕೊಲಾಜ್ ಎಂಬ ನಾಟಕವು ಪ್ರೇಕ್ಷಕರನ್ನು ಹೊಸ ರೀತಿಯ ಚಿಂತನೆಗೆ ಹಚ್ಚುವ ನಾಟಕವಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ, ಬುಡ್ಡಿದೀಪ ಸಂಸ್ಥೆ, ಸಕಲರಂಗಹೆಜ್ಜೆ ಟ್ರಸ್ಟ್, ದಲಿತ ಸಂಘಟನೆಗಳು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರಿನ ರಂಗಾಯಣ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋಟಿಗಾನಹಳ್ಳಿ ರಾಮಯ್ಯ ಅವರ ಅಂಬೇಡ್ಕರ್ ಕೊಲಾಜ್ ಎಂಬ ನಾಟಕ ಪ್ರದರ್ಶನದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಫಲವಾದ ಮೊಬೈಲ್ ಎಂಬ ಸಾಧನದ ಸೆಳೆತಕ್ಕೆ ಸಿಕ್ಕಿ ದಿಕ್ಕು ತಪ್ಪಿರುವ ಈ ಹೊತ್ತಿನಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರಂತಹ ಚಿಂತಕ ಹೋರಾಟ ಗಾರರು ಅಂಬೇಡ್ಕರ್ ಎಂಬ ಮಹಾಮಾನವತಾವಾದಿಯನ್ನು ರಂಗರೂಪಕ್ಕಿಳಿಸಿ ಇಲ್ಲಿ ಪ್ರದರ್ಶನವಾಗುವಂತೆ ನೋಡಿಕೊಂಡಿರುವುದು ಅತ್ಯಂತ ಮಹತ್ವದ ಸಂದರ್ಭವೆಂದೇ ನಾನು ಭಾವಿಸುತ್ತೇನೆ. ಅಂಬೇಡ್ಕರ್ ಅವರದ್ದು ಜನಪ್ರಿಯ ವ್ಯಕ್ತಿತ್ವವಾಗಿದ್ದು ಅದನ್ನು ರಂಗರೂಪಕ್ಕಿಳಿಸಿ ಯಶಸ್ವಿಯಾಗುವುದು ಸವಾಲಿನ ಕೆಲಸವೇ ಸರಿ. ಅದನ್ನು ಇವರು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ.ಅದಕ್ಕಾಗಿ ಜಿಲ್ಲೆಯ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಅಂಬೇಡ್ಕರ್ ಕೊಲಾಜ್ ನಾಟಕದ ಮೂಲಕ ಬಾಬಾ ಸಾಹೇಬರು ನಡೆದು ಬಂದ ಹಾದಿ ಯನ್ನು 21ನೇ ಶತಮಾನದ ಚಿಂತನೆಯೊಂದಿಗೆ ಮುಖಾಮುಖಿಯಾಗಿಸುವುದೇ ಒಂದು ಜವಾಬ್ದಾರಿಯ ಕೆಲಸ.ಅಂಬೇಡ್ಕರ್ ಬದುಕನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ರಂಗಾಯಣ ದ ಕಲಾವಿದರು ಅಭಿನಯಿಸಿದ್ದಾರೆ. ಅಂಬೇಡ್ಕರ್ ಪಾತ್ರಧಾರಿ ಹೇಳುವ ಮಾತು "ನನ್ನ ಆಶಯಗಳನ್ನು ಹಿಡಿಯದೆ, ನನ್ನ ಚಿತ್ರಪಟವನ್ನು ಹಿಡಿದಿದ್ದೀರಿ" ಎನ್ನುವ ಮಾತು ನನ್ನನ್ನು ಬಲವಾಗಿ ಆಕರ್ಷಿಸಿದ ಮಾತಾಗಿದೆ ಎಂದರು.
ಇವತ್ತು ಅದರ ಬಗ್ಗೆ ನಾವೆಲ್ಲಾ ಯೋಚಿಸಬೇಕಾಗಿದೆ. ಈ ಒಂದು ಮಾತನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ನೂರಾರು ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂಬುದು ನನ್ನ ಭಾವನೆ.ಇದರ ಜತೆಗೆ ಬಹಳ ದು:ಖದಿಂದ ಜವಾಬ್ದಾರಿಯಿಂದ ಸಂಕಟ ದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಈ ನಾಟಕದಲ್ಲಿಕೆರೆಯ ನೀರನ್ನು ಕೆಲವರಿಗೆ ದೂರ ವಿಟ್ಟದ್ದು, ಮುಟ್ಟಲು ಬಿಡದೇ ಇರುವಂತಹುದು ಬರುತ್ತದೆ. ಇದನ್ನು ಮಾಡಿದ್ದು ಅಂದಿನ ಶ್ರೀಮಂತ ವರ್ಗ, ಅಥವಾ ಮೇಲ್ಜಾತಿವಾರ್ಗ ಎನ್ನಬಹುದು. ಆದರೆ ಇವತ್ತಿನ ದಿನ ಅದೇ ಬಲಾಢ್ಯ ಪ್ರಭಾವಿ ವರ್ಗವು ನಮ್ಮ ಜಿಲ್ಲೆಗಳ ನೀರನ್ನು ವಿಷಮಯ ಮಾಡಿ ಅವತ್ತಿನ ರೀತಿಯಲ್ಲೇ ಇವತ್ತು ಮಾಡುವಂತಹ ಒಂದು ಹುನ್ನಾರ ನಡೆಯುತ್ತಿದೆ.
ನಾವು ಎಚ್ಚರಗೊಳ್ಳದಿದ್ದರೆ ಖಂಡಿತ 10 ವರ್ಷಗಳಲ್ಲಿ ಪವಿತ್ರವಾದ ಅಂತರ್ಜಲ ಮಲಿನ ವಾಗಿ ನಮ್ಮ ನಿಮ್ಮ ಕುಟುಂಬಗಳಲ್ಲಿ ಕ್ಯಾನ್ಸರ್ ರೋಗಿಗಳು, ಕಿಡ್ನಿ ವೈಫಲ್ಯದ ರೋಗಿಗಳು, ಇನ್ನೂ ಅನೇಕ ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಂದರ್ಭವಿದೆ. ಇವತ್ತೇ ಎಚ್ಚರ ಗೊಂಡರೆ ಅದನ್ನು ತಡೆಯಲು ಸಾಧ್ಯವಿದೆ.ದಲಿತ ನಾಯಕರು ಇತ್ತ ಕೂಡ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸಂದೀಪ್‌ರೆಡ್ಡಿ ಮಾತನಾಡಿ, ಕೋಟಿಗಾನಹಳ್ಳಿ ರಾಮಯ್ಯ ಅವರ ಎದುರು ಮಾತನಾಡಲು ಭಯವಾಗುತ್ತಿದೆ. ಆದರೆ ತುಂಬಾ ವರ್ಷಗಳ ನಂತರ ನಾಟಕವನ್ನು 2 ಗಂಟೆ ಕೂತು ನೋಡಿದೆ. ನನ್ನ ಸಮಯ ವ್ಯರ್ಥವಾಗಲಿಲ್ಲ. ರಂಗಾಯಣ ಕಲಾವಿದರು ಅಮೋಘವಾಗಿ ಅಭಿನಯಿಸಿದ್ದಾರೆ. ಇದನ್ನು ಆಗು ಮಾಡಿದ ಕೋಟಿಗಾನಹಳ್ಳಿ ರಾಮಣ್ಣ, ಕಾವಿದರು, ನಿರ್ದೇಶಕರು, ತಾಂತ್ರಿಕ ವರ್ಗಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ, ಶೋಷಿತ ವರ್ಗಕ್ಕೆ ದಾರಿ ತೋರಿದ ರೀತಿ ಅಮೋಘ. ಭಾರತದ ಚರಿತ್ರೆ ರಥವನ್ನು ಇಂದಿಗೂ ಮುಂದಕ್ಕೆ ಕೊಂಡೊಯ್ಯವ ಶಕ್ತಿಯನ್ನು ನೀಡಿದವರು ಅಂಬೇಡ್ಕರ್ ಆಗಿದ್ದಾರೆ. ಇಂತಹ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡಬೇಕಿತ್ತು. ಬಂದು ನೋಡ ದವರು ನತದೃಷ್ಟರೆಂದೇ ಹೇಳಬೇಕು. ದೇಶಕ್ಕೆ ತ್ಯಾಗ ಮಾಡಿದ ಚೇತನಗಳ ಬಗ್ಗೆ ಸ್ಮರಿಸುವುದು ನಮ್ಮ ಕರ್ತವ್ಯವಾಗಲಿ ಎಂದು ಹೇಳಿದರು.
ಕೋಡಿರಂಗಪ್ಪ ಅಂಬೇಡ್ಕರ್ ಚಿಂತನೆಗಳನ್ನು ಎದೆಗಿಳಿಸುವ ಕೆಲಸ ಮಾಡುವಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶತಮಾನ ಗಳಿಂದ ಕಟ್ಟಿದ್ದ ಅಮಾನವೀಯ ಚಿಂತನೆಗಳನ್ನು ಛಿದ್ರಗೊಳಿಸಿ ಇದಕ್ಕೆ ಸಮಾನತೆಯ ಆಶಯಗಳಿಗೆ ಶಾಶ್ವತವಾದ ಜೀವವನ್ನು ಸಂವಿಧಾನದ ಮೂಲಕ ತುಂಬಿದ್ದಾರೆ. ನಾಟಕ ನೋಡುವ ಸ್ಪೂರ್ತಿ ಜಿಲ್ಲೆಯ ಜನತೆಗೆ ಬರಬೇಕಿದೆ. ಅಂಬೇಡ್ಕರ್ ಅವರನ್ನು ಮೊದಲು ಓದಬೇಕು. ಆಗಲೇ ಎದೆಗೆ ಬಿದ್ದ ಅಕ್ಷರ ಫಲ ಕೊಡಲಿದೆ ಎಂದರು.
ಉಪನ್ಯಾಸಕ ಅರಿಕೆರೆ ಎಂ ಮುನಿರಾಜು ಮಾತನಾಡಿ ಜಗತ್ತಿನ ಶ್ರೇಷ್ಟ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಬರೆದ ಅಸಂಗತ ನಾಟಕದ ಮಾದರಿಯಲ್ಲಿ ರಾಮಯ್ಯ ಅವರ ಅಂಬೇಡ್ಕರ್ ಕೊಲಾಜ್ ನಾಟಕವಿದೆ. ರಾಮಯ್ಯ ಈ ನಾಟಕದಲ್ಲಿ ಅನೇಕ ರೂಪಕಗಳಿವೆ. ಅಂಬೇಡ್ಕರ್ ಇದ್ದ ೨೦ನೇ ಶತಮಾನ, ನಾವಿರುವ 21ನೇ ಶತಮಾನ ಎರಡೂ ಯುಗಧರ್ಮ ವನ್ನು ಸಮರ್ಥವಾಗಿ ಮುಖಾಮುಖಿಯಾಗಿಸಿದ್ದಾರೆ. ನಾಟಕದ ಕೊನೆಯಲ್ಲಿ ಕಾರ್ಲ್ ಮಾಕ್ಸ್ ತಂದಿದ್ದು ಯಾಕೆ? ಎಂಬ ಪ್ರಶ್ನೆಯ ಜತೆಗೆ, ಅಂಬೇಡ್ಕರ್ ಬಳಸುವ ಭಾಷೆ, ಉಳಿದ ಪಾತ್ರವರ್ಗ ಬಳಸುವ ಭಾಷೆ ಸೌಮ್ಯವಾಗಿರಬೇಕು, ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿರಬೇಕಿತ್ತು ಎಂಬ ಅಸಮಾಧಾನ ಮೂಡಿಸದಿರದು.ಮುಂದಿನ ಪ್ರದರ್ಶನಗಳಲ್ಲಿ ನಿರ್ದೇಶಕರು ಇತ್ತ ಗಮನ ಹರಿಸುವರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ, ಸುಧಾವೆಂಕಟೇಶ್, ಗಾ,ನ.ಅಶ್ವತ್ಥ್, ರಾಜಾಕಾಂತ್, ಡಾ.ಶಂಕರ್, ವೆಂಕಟರಾಮ್, ದಿಲೀಪ್‌ಕುಮಾರ್, ಬಿ.ವಿ.ಆನಂದ್, ಪರಮೇಶ್, ಜಿ.ಸಿ.ವೆಂಕಟರೋಣಪ್ಪ, ಮಂಚನಬಲೆ ಡ್ಯಾನ್ಸ್ ಶ್ರೀನಿವಾಸ್, ಪಟ್ರೇನಹಳ್ಳಿ ಕೃಷ್ಣ ಮತ್ತಿತರರು ಇದ್ದರು.