ಗೌರಿಬಿದನೂರು: ಆಡಂಬರ, ವರದಕ್ಷಿಣೆ ಹಾಗೂ ಜಾತೀಯತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವ ಉದ್ದೇಶದಿಂದ ರಾಷ್ಟ್ರಕವಿ ಕುವೆಂಪು(Kuvempu) ಅವರು ಪ್ರತಿಪಾದಿಸಿದ ‘ಮಂತ್ರ ಮಾಂಗಲ್ಯ’ ವಿವಾಹ ಪದ್ಧತಿಯನ್ನು ಯುವಜನತೆ ಅಳವಡಿಸಿ ಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ. ರಮೇಶ್ ಚಂದ್ರ ದತ್ತ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಂಯುಕ್ತ ಆಶ್ರಯದಲ್ಲಿ ಎ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಅವರ ಮಂತ್ರ ಮಾಂಗಲ್ಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂತ್ರ ಮಾಂಗಲ್ಯವು ಮೂಢನಂಬಿಕೆ, ಅನಗತ್ಯ ಆಚರಣೆ ಹಾಗೂ ಪುರೋಹಿತಶಾಹಿ ಯಿಂದ ಮುಕ್ತವಾಗಿ, ವೈಚಾರಿಕತೆ ಮತ್ತು ಸರಳತೆಗೆ ಆದ್ಯತೆ ನೀಡುವ ವಿವಾಹ ಪದ್ಧತಿ ಯಾಗಿದೆ. ಇಂದಿನ ಯುವಜನರು ದುಬಾರಿ ಮದುವೆಗಳಿಗಾಗಿ ಸಾಲದ ಸುಳಿಗೆ ಸಿಲುಕದೆ, ಸರಳ ಹಾಗೂ ಅರ್ಥಪೂರ್ಣ ವಿವಾಹ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಕೃಷಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆಗಳ ಸಮನ್ವಯ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟಾಚಲಪತಿ ಎಚ್.ಎಸ್. ಮಾತನಾಡಿ, ಹಿಂದೆ ಮದುವೆಗಳು ಮನೆ ಅಂಗಳದಲ್ಲಿ ಕುಟುಂಬದವರು, ಬಂಧುಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸರಳವಾಗಿ ನಡೆಯುತ್ತಿದ್ದವು. ಆದರೆ ಇಂದು ಅನಗತ್ಯ ಆಡಂಬರಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಲದ ಹೊರೆ ಹೊತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಸರಳತೆ ಹಾಗೂ ಕುವೆಂಪು ಅವರ ಮಂತ್ರ ಮಾಂಗಲ್ಯದಂತಹ ಮೌಲ್ಯಾಧಾರಿತ ಚಿಂತನೆಗಳನ್ನು ಮತ್ತೆ ಅಳವಡಿಸಿಕೊಳ್ಳು ವುದು ಅಗತ್ಯ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಡಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಮಂತ್ರ ಮಾಂಗಲ್ಯದ ಹಿನ್ನೆಲೆ ಹಾಗೂ ಇಂದಿನ ಯುವಪೀಳಿಗೆಗೆ ಅದರ ಪ್ರಸ್ತುತತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸಿ ದ್ದರು. ಐಕ್ಯೂಎಸಿ ಸಂಚಾಲಕ ಡಾ. ವೆಂಕಟೇಶ್ ವಿ., ಉಪನ್ಯಾಸಕರಾದ ಹನುಮಂತರಾಜು ಕೆ.ಎಚ್., ಶ್ರೀನಿವಾಸಯ್ಯ ಎಂ., ಗೋವಿಂದರಾಜು ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕ ಹನುಮಂತರಾಯಪ್ಪ ಪಿ.ವಿ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಿಕ್ಕಣ್ಣ ಬಿ.ಎಸ್. ನಿರೂಪಿಸಿದರು. ಉಪನ್ಯಾಸಕ ಗಿರೀಶ್ ಎಸ್. ವಂದಿಸಿದರು.