ಚಿಂತಾಮಣಿ: 11ನೇ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya Sammelana)ಕ್ಕೆ ದಿನಗಣನೆ ಆರಂಭವಾಗಿದ್ದರೂ ಆಹ್ವಾನ ಪತ್ರಿಕೆಗಳು ಸಾರ್ವಜನಿಕರ ಕೈ ಸೇರದಿರು ವುದು, ಸಂಘಟನಾ ಹಂತದಲ್ಲಿ ಸಮನ್ವಯದ ಕೊರತೆ ಕಂಡುಬರುತ್ತಿರುವುದು ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಹಿರಿಯರು, ಮಾಜಿ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಭಾಗಿತ್ವದಲ್ಲಿ ಸಮ್ಮೇಳನ ಆಯೋಜಿಸಬೇಕಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಲಯನ್ ಡಾ.ಕೈವಾರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನ.19 ಮತ್ತು 20ರಂದು ನಡೆಯಲಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಆಯ್ಕೆಯಾಗಿರುವ ಜಾನಪದ ತಜ್ಞ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಹಾಗೂ ಗೀತರಚನಾಕಾರ ಗೊಲ್ಲಹಳ್ಳಿ ಶಿವಪ್ರಸಾದ್(Gollahally Shivaprasad) ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡಹಬ್ಬದ ಮಾದರಿಯಲ್ಲಿ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವುದು ಜಿಲ್ಲೆಯ ಕನ್ನಡಾಭಿಮಾನಿಗಳ ಆಶಯವಾಗಿದೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ಡಾ.ಎಂ.ಸಿ.ಸುಧಾಕರ್(Dr M C Sudhakar) ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಆಸಕ್ತಿಯಿದೆ.
ಈ ಹಿಂದೆ ಅವರು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ರಾಜ್ಯಮಟ್ಟದ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಮಾದರಿಯಲ್ಲಿ ಯಶಸ್ವಿಯಾಗಿ ಸಂಘಟಿಸಿ ದ್ದಾರೆ.
ಅವರ ಅನುಭವ ಮತ್ತು ಸಹಕಾರವನ್ನು ಬಳಸಿಕೊಂಡಿದ್ದರೆ ಪ್ರಸ್ತುತ ಸಮ್ಮೇಳನವನ್ನು ಇನ್ನಷ್ಟು ವಿಜೃಂಭಣೆಯಿಂದ ಆಯೋಜಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.
ನ.21ರಂದು ಜಿಲ್ಲಾಧ್ಯಕ್ಷರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ತರಾತುರಿಯಿಂದ ಸಮ್ಮೇಳನ ಆಯೋಜಿಸುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣ ವಾಗಿದೆ.
ಸಮ್ಮೇಳನಕ್ಕೆ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದರೂ ಆಹ್ವಾನ ಪತ್ರಿಕೆಗಳು ಸಾರ್ವಜನಿಕರ ಕೈ ಸೇರದಿರುವುದು ವಿಷಾದನೀಯ. ಹಿರಿಯರನ್ನು ವಿಶ್ವಾಸಕ್ಕೆ ಪಡೆದು ಮುಂಚಿತವಾಗಿಯೇ ಸಿದ್ಧತೆಗಳನ್ನು ಕೈಗೊಳ್ಳಬೇಕಿತ್ತು ಎಂದು ತಿಳಿಸಿದರು.
ಕಸಾಪ ಬೈಲಾ ನಿಯಮಗಳ ಪ್ರಕಾರ ನಿಕಟಪೂರ್ವ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಗಳಿಗೆ ಆಹ್ವಾನಿಸಬೇಕಿದ್ದರೂ, ಕಳೆದ ಐದು ವರ್ಷಗಳಲ್ಲಿ ನಡೆದ ಸಭೆಗಳಿಗೆ ತಮ್ಮನ್ನು ಒಮ್ಮೆಯೂ ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಪರಿಷತ್ತಿನ ಹಿತದೃಷ್ಟಿಯಿಂದ ಯಾವುದೇ ವಿರೋಧಾ ತ್ಮಕ ಹೇಳಿಕೆ ನೀಡದೆ ಕನ್ನಡದ ಕೆಲಸಗಳಿಗೆ ಸಹಕಾರ ನೀಡುತ್ತಾ ಬಂದಿದ್ದೇನೆ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಗಿಂತ ಕನ್ನಡದ ಹಿತವೇ ಮುಖ್ಯ ಎಂಬುದು ತಮ್ಮ ನಿಲುವಾಗಿದೆ ಎಂದರು.
ನ.16ರ ಬ್ಯಾಂಕ್ ಸಂದೇಶದ ಪ್ರಕಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಖಾತೆಯಲ್ಲಿ 7,12,949.19 ಲಭ್ಯವಿದೆ. ಇಷ್ಟೊಂದು ಹಣ ಲಭ್ಯವಿರುವಾಗ ಹಾಗೂ ತಾಲ್ಲೂಕು ಆಡಳಿತವೂ ಸಹಕಾರ ನೀಡುತ್ತಿರುವಾಗ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮ್ಮೇಳನವನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಸಂಘಟನಾ ಲೋಪಗಳ ಬಗ್ಗೆ ಅಸಮಾಧಾನವಿದ್ದರೂ ಅವುಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಅಥವಾ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ. ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಮತ್ತು ಘನತೆಗೆ ಧಕ್ಕೆಯಾಗದಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು.
ಪಕ್ಷಭೇದ, ಪಂಥಭೇದ ಹಾಗೂ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪರ ಚಟುವಟಿಕೆಗಳ ಸ್ಮರಣೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು, ಲಯನ್ ಡಾ. ಕೈವಾರ ಶ್ರೀನಿವಾಸ್ ಅವರು ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ 45ಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ಸಾವಿರಾರು ಕನ್ನಡಪರ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿರುವುದನ್ನು ಸ್ಮರಿಸಿದರು.
'ಮನೆಗಳಂಗಳದಲ್ಲಿ ನುಡಿಸಿರಿ', 'ಶಾಲೆಯಂಗಳದಲ್ಲಿ ನುಡಿಸಿರಿ', 'ಕಸಾಪ ನಡೆ ಸಾಧಕರ ಕಡೆಗೆ' ಮುಂತಾದ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಮನೆಮನ ಗಳಿಗೆ ಹಾಗೂ ವಿದ್ಯಾರ್ಥಿಗಳ ಮನಸ್ಸುಗಳಿಗೆ ತಲುಪಿಸುವ ಕಾರ್ಯ ಮಾಡಿದ್ದರು.
ಕೃಷಿ ಸಮಾವೇಶಗಳು, ಹಳೆಗನ್ನಡ ಅಧ್ಯಯನ ಶಿಬಿರಗಳು, ವಿಚಾರ ಸಂಕಿರಣಗಳು ಮತ್ತು ಕವಿಗೋಷ್ಠಿಗಳ ಮೂಲಕ ಜಿಲ್ಲೆಯ ಸಾಹಿತ್ಯಿಕ ವಲಯಕ್ಕೆ ಹೊಸ ಚೈತನ್ಯ ನೀಡಿದ್ದರು ಎಂದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಬೆಳವಣಿಗೆಗೆ ನಿರಂತರ ಸಾಹಿತ್ಯಿ ಕ ಚಟುವಟಿಕೆಗಳು ಅಗತ್ಯವಾಗಿದ್ದು, 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕವಿಗಳು ಹಾಗೂ ಕನ್ನಡಾಭಿಮಾನಿಗಳು ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸನ್, ಮಾಜಿ ತಾಲ್ಲೂಕು ಅಧ್ಯಕ್ಷ ಮೂ. ಪಾಪಣ್ಣ, ಮಾಜಿ ಕಾರ್ಯದರ್ಶಿ ಬಿ.ಸಿ. ಜನಾರ್ದನ್, ಮೊಹಮ್ಮದ್ ಇಸಾಕ್ ಖಾನ್, ಗುಡಿಬಂಡೆ ಆನಂದ್, ಶ್ರೀನಿವಾಸ್ ಯಾದವ್, ಎಂ. ನಂಜುಂಡಪ್ಪ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು