ಶಿಡ್ಲಘಟ್ಟ: ತಾಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಬ್ಬೂರಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸು ತ್ತಿದ್ದಾರೆ. ವಿಶೇಷವಾಗಿ ಬಾಗೇಪಲ್ಲಿ–ಚಿಂತಾಮಣಿ ಮುಖ್ಯ ರಸ್ತೆಯ ಮೇಲೆಯೇ ಚರಂಡಿ ನೀರು ಹರಿಯುತ್ತಿರುವುದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮದ ಹಲವೆಡೆ ಚರಂಡಿಗಳು ತುಂಬಿ ಬ್ಲಾಕ್ ಆಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ. ಕೆಲವರು ಚರಂಡಿಗಳನ್ನು ಮುಚ್ಚಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿರುವ ಪರಿಣಾಮ ನೀರು ಸರಿಯಾಗಿ ಹರಿಯದೇ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Shidlaghatta News: ಪಿ.ಎಸ್.ಐ ವೇಣುಗೋಪಾಲ್ ನೇತೃತ್ವದಲ್ಲಿ ಸುಗಮ ಸಂಚಾರಕ್ಕೆ ಅಡ್ಡಲಾಗಿದ್ದ ಅಂಗಡಿಗಳ ತೆರವು
ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಚರಂಡಿ ನೀರು ಮನೆಗಳೊಳಗೆ ನುಗ್ಗುತ್ತಿದೆ. ಸುಮಾರು 30 ರಿಂದ 40 ಮನೆಗಳ ನಿವಾಸಿಗಳು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಅಸ್ವಚ್ಛ ವಾತಾವರಣದಿಂದ ಸ್ಥಳೀಯರು ಬೇಸತ್ತಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮತ ಕೇಳುವಾಗ ಮಾತ್ರ ಜನಪ್ರತಿನಿಧಿ ಗಳು ಬರುತ್ತಾರೆ. ಸಮಸ್ಯೆ ಹೇಳಿದರೆ ಸಾಬೂಬು ಹೇಳಿ ಕಾಲಹರಣ ಮಾಡುತ್ತಾರೆ” ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
ತಕ್ಷಣ ಚರಂಡಿ ಸ್ವಚ್ಛತೆ ನಡೆಸಿ, ಅಕ್ರಮ ನಿರ್ಮಾಣ ತೆರವುಗೊಳಿಸಿ ಸೂಕ್ತ ನೀರು ಹರಿವು ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.