ಶಿಡ್ಲಘಟ್ಟ: ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನೂ ಬದ್ಧರಾಗಿರಬೇಕು. ಕನ್ನಡಿಗರ ಬದುಕು, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್(MLA B N Ravikumar) ಕರೆ ನೀಡಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ದರು.
ಇಡೀ ಭಾರತದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು. ಏಳು ಕೋಟಿ ಕನ್ನಡಿಗರ ಹೃದಯ ಶ್ರೀಮಂತಿಕೆ ಈ ನಾಡಿನ ಸೌಭಾಗ್ಯವಾಗಿದೆ. ಪ್ರಕೃತಿ ವಿಕೋಪಗಳು ಹಾಗೂ ದೊಡ್ಡ ಪ್ರಮಾಣದ ದುರಂತಗಳು ಕಡಿಮೆ ಸಂಭವಿಸುವ ಈ ನೆಲದಲ್ಲಿ ಹುಟ್ಟಿರುವ ನಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: MLA B N Ravikumar: ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಆದ್ಯತೆ: ಶಾಸಕ ರವಿಕುಮಾರ್
ನಾಡಿಗಾಗಿ ಹೋರಾಡಿ ತನು, ಮನ, ಧನ ತ್ಯಾಗ ಮಾಡಿದ ಮಹನೀಯರನ್ನು ಪ್ರತಿನಿತ್ಯ ಸ್ಮರಿಸಬೇಕು. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ವರನಟ ಡಾ. ರಾಜ್ಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಎಂಬ ಮಾತಿನ ಆಶಯವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್.ಎಂ. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಕೆಆರ್ಎಸ್ ಅಣೆಕಟ್ಟಿನಿಂದ ಬೆಂಗಳೂರಿನ ಕೋಟ್ಯಂತರ ಜನರಿಗೆ ಕಾವೇರಿ ನೀರು ದೊರೆಯುತ್ತಿದೆ. ಲಕ್ಷಾಂತರ ರೈತರು ಕೃಷಿ ಮಾಡಲು ಸಾಧ್ಯವಾಗಿದೆ. ಕನ್ನಡ ನಾಡು, ಭಾಷೆ ಹಾಗೂ ಕನ್ನಡಿಗರ ಬದುಕು ಕಟ್ಟಲು ಶ್ರಮಿಸಿದ ಮಹನೀಯ ರನ್ನು ಸ್ಮರಿಸುವುದೇ ಕನ್ನಡಮ್ಮನಿಗೆ ಸಲ್ಲಿಸುವ ನಿಜವಾದ ಸೇವೆಯಾಗಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಮೊಹಮ್ಮದ್ ಖಾಸಿಂ ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆ ಹಾಗೂ ನೆಲದ ಮಹತ್ವವನ್ನು ವಿವರಿಸಿದರು. ಕನ್ನಡ ಭಾಷೆಯ ಮೂಲಕವೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ನಿಲ್ಲಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳ ಬೆಳವಣಿಗೆ, ಸಾಹಿತಿಗಳ ಕೊಡುಗೆ ಹಾಗೂ ಕನ್ನಡಿಗರ ಜವಾಬ್ದಾರಿಗಳ ಕುರಿತು ಅರಿವು ಮೂಡಿಸು ವುದು ಇಂದಿನ ಅಗತ್ಯವಾಗಿದೆ ಎಂದರು.
ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಪೀಠದ ಶ್ರೀ ಮಂಗಳನಾಥಸ್ವಾಮಿ, ಕಾವೇರಿ ಹ್ಯಾಂಡ್ಲೂಮ್ಸ್ ಅಧ್ಯಕ್ಷ ಬಿ.ಜಿ.ಗಣೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಎಂ.ರಾಮಣ್ಣ, ತಹಶೀಲ್ದಾರ್ ಎನ್.ಗಗನಸಿಂಧು, ಇಒ ಆರ್.ಹೇಮಾವತಿ, ಬಿಇಒ ಪಿ. ಸ್ವಾಮಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರೂಪಸಿ ರಮೇಶ್, ಡಾ.ಸತ್ಯನಾರಾಯಣರಾವ್, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್, ತಾದೂರು ರಘು, ಕುಂದಲಗುರ್ಕಿ ಮುನೀಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕನ್ನಡಪರ ಹೋರಾಟಗಾರರು ಹಾಗೂ ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.
ಕನ್ನಡಕ್ಕೆ ಪ್ರಥಮ ಗೌರವ ನೀಡೋಣ: ಶ್ರೀ ಮಂಗಳನಾಥಸ್ವಾಮಿ
ಜಗತ್ತಿನ ಎಲ್ಲ ಭಾಷೆಗಳನ್ನೂ ಕಲಿಯೋಣ, ಮಾತನಾಡೋಣ, ಬರೆಯೋಣ. ಆದರೆ ಕನ್ನಡ ಭಾಷೆಯನ್ನು ನಮ್ಮ ತಾಯಿಯಂತೆ ಪ್ರೀತಿಸಿ, ಆರಾಧಿಸಿ ಪ್ರಥಮ ಗೌರವ ನೀಡಬೇಕು ಎಂದು ಆದಿಚುಂಚನಗಿರಿ ಮಹಾಪೀಠದ ಶ್ರೀ ಮಂಗಳನಾಥಸ್ವಾಮಿ ಆಶೀರ್ವಚನ ನೀಡಿದರು.
ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದಿಕವಿ ಪಂಪನಿಂದ ಕುವೆಂಪು ಅವರ ಕಾಲದವರೆಗೂ ಕನ್ನಡ ಸಾಹಿತ್ಯದ ಕಂಪು ಹರಡಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಎಂಬ ಹೆಗ್ಗಳಿಕೆ ಕನ್ನಡಕ್ಕಿದೆ. ಇದು ಕನ್ನಡ ಭಾಷೆ, ನೆಲ, ಜಲ ಹಾಗೂ ಸಾಹಿತ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ನಾವೆಲ್ಲರೂ ಒಂದಾಗಿರುವುದು ಕನ್ನಡದ ಡಿಂಡಿಮ ಬಾರಿಸಲು ಹಾಗೂ ಕನ್ನಡದ ಭಾವುಟ ಹಾರಿಸಲು. ಕನ್ನಡ ಸಾಹಿತ್ಯ ಪರಂಪರೆ, ಕನ್ನಡಿಗರ ಬದುಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಗ್ಗಟ್ಟಿನಿಂದ ಎದ್ದು ನಿಲ್ಲಬೇಕು. ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಜ್ಞಾನ ಹೊಂದಿರಬೇಕು, ಆದರೆ ಅವುಗಳ ವ್ಯಾಮೋಹಕ್ಕೆ ಒಳಗಾಗಬಾರದು. ಕನ್ನಡ ನಮ್ಮ ಉಸಿರು ಮತ್ತು ಬದುಕಾಗಬೇಕು. ಮಾತೃಭಾಷೆ ಕನ್ನಡದ ಮೇಲೆ ಹಿಡಿತವಿದ್ದರೆ ಇತರ ಭಾಷೆಗಳನ್ನು ಕಲಿಯುವ ಜ್ಞಾನಶಕ್ತಿಯೂ ದೊರೆಯುತ್ತದೆ. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೇಂದ್ರೆ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯ, ಸಂಗೀತ, ಕಲೆ ಮತ್ತು ಭಾಷೆಗೆ ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಬಾಕ್ಸ್: ಮೆರವಣಿಗೆಯಲ್ಲಿ ಜನಪದ ಕಲಾತಂಡಗಳ ಮೆರುಗು
ನಗರದ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾ ಯಿತು. ತಹಶೀಲ್ದಾರ್ ಗಗನಸಿಂಧು ರಾಷ್ಟ್ರಧ್ವಜ, ಪೌರಾಯುಕ್ತೆ ಅಮೃತ ನಾಡಧ್ವಜ ಹಾಗೂ ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ನಂತರ ನಗರದ ಸಾರಿಗೆ ಬಸ್ ನಿಲ್ದಾಣದ ಬಳಿಯ ಚಿಕ್ಕಬಳ್ಳಾಪುರ ರಸ್ತೆಯ ಇಂದಿರಾ ಕ್ಯಾಂಟೀನ್ ಸಮೀಪದಿಂದ ತಾಯಿ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷ ವೈ.ಎನ್. ದಾಶರಥಿ ಅವರ ಮೆರವಣಿಗೆ ಆರಂಭಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ವಾಸವಿ ಕಲ್ಯಾಣ ಮಂಟಪ ತಲುಪಿತು.
ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನಾಗರಿಕರು ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸಮ್ಮೇಳನಾಧ್ಯಕ್ಷರು, ಶ್ರೀ ಮಂಗಳನಾಥಸ್ವಾಮಿ ಹಾಗೂ ಶಾಸಕ ಬಿ.ಎನ್. ರವಿಕುಮಾರ್ ಅವರಿಗೆ ಕುಂಭ ಸ್ವಾಗತ ನೀಡಲಾಯಿತು.