ಚಿಕ್ಕಬಳ್ಳಾಪುರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಅಸಂಘಟಿತ ವಲಯದ ತಾಯಂದಿರನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸುತ್ತಿರುವುದು ಶ್ಲಾಘನೀಯ. ಹತ್ತು ವರ್ಷಗಳಿಂದ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಭಗತ್ ಸಿಂಗ್ ಚಾರಿಟೆಬಲ್ ಟ್ರಸ್ಟ್ನ ಸಂದೀಪ್ ಬಿ. ರೆಡ್ಡಿ ಅವರ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್(MLA S R Vishwanath) ಹೇಳಿದರು.
ನಗರದ ಹೊರವಲಯದ ಹೋಟೆಲ್ ಸಮರಾಸ್ ಸಮೀಪ ಭಗತ್ ಸಿಂಗ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬಿಸಿಯೂಟ ಸಿಬ್ಬಂದಿ, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆ ಯರಿಗಾಗಿ ಆಯೋಜಿಸಿದ್ದ ‘ನಾರೀ ಸೇವಾ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದು. ತಾಯಿ ಭುವನೇಶ್ವರಿ ಯ ಆರಾಧನೆಯ ಸಂದರ್ಭದಲ್ಲಿ ಮಾತೃಸ್ವರೂಪದ ಮಹಿಳೆಯರನ್ನು ಗೌರವಿಸುವುದು ಅರ್ಥಪೂರ್ಣವಾಗಿದೆ. ದೇಶದ ಏಕೀಕರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಮಹತ್ವದ್ದು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾದ ಬಳಿಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮತ್ತಷ್ಟು ಗುರುತಿನ ಗೌರವ ದೊರೆತಿದೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಇದನ್ನೂ ಓದಿ: MLA S.R. Vishwanath: 'ನಮ್ಮ ಒಬ್ಬ ಮುಖಂಡರನ್ನು ಮುಟ್ಟಿದರೆ ನಿಮ್ಮ ಕಡೆಯಿಂದ ಇಬ್ಬರನ್ನು ಕರೆತರುತ್ತೇನೆ'
ಭಗತ್ ಸಿಂಗ್ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿರುವ ಸಂದೀಪ್ ರೆಡ್ಡಿ ಹಲವು ವರ್ಷಗಳಿಂದ ಬಡವರಿಗೆ ಮನೆ ನಿರ್ಮಾಣಕ್ಕೆ ನೆರವು, ಆಸ್ಪತ್ರೆಗಳಿಗೆ ಸಹಾಯ, ಶಿಕ್ಷಣಕ್ಕೆ ಪ್ರೋತ್ಸಾಹ, ಹಸಿದವರಿಗೆ ಅನ್ನದಾನ, ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಹಬ್ಬದ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಸೇರಿದಂತೆ ಹತ್ತಾರು ಜನಪರ ಕಾರ್ಯಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದಾರೆ. ರಾಜಕಾರಣಿಯಾಗಿರದಿದ್ದರೂ ಸಮಾಜಸೇವೆಯಲ್ಲಿ ತೊಡಗಿರುವ ಇಂತಹವರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಐತಿಹಾಸಿಕ ದೇವಾಲಯಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ವನ್ನೂ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂದೀಪ್ ರೆಡ್ಡಿ ಜನಪ್ರತಿನಿಧಿಯಾಗಿ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂದೀಪ್ ರೆಡ್ಡಿ ನೂರಾರು ವರ್ಷಗಳ ಕಾಲ ಜನನಾಯಕರಾಗಿ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ಹುಟ್ಟೂರಿನ ನೆಲದಲ್ಲಿ ಜನರೊಂದಿಗೆ ಜನ್ಮದಿನ ಆಚರಿಸುವ ಮೂಲಕ ಮಣ್ಣಿನ ಮಗನಾಗಿ ಗುರುತಿಸಿಕೊಂಡಿರುವ ಅವರ ಸೇವಾ ಮನೋಭಾವ ಶ್ಲಾಘನೀಯ ಎಂದರು.
ಸೇವೆ ಮಾಡಲು ಅಧಿಕಾರವೇ ಬೇಕಿಲ್ಲ: ಸಂದೀಪ್ ರೆಡ್ಡಿ
ಕಾರ್ಯಕ್ರಮದ ಆಯೋಜಕ ಸಂದೀಪ್ ರೆಡ್ಡಿ ಮಾತನಾಡಿ, ಸಮಾಜಸೇವೆ ಮಾಡಲು ಅಧಿಕಾರವೇ ಬೇಕಿಲ್ಲ. ಅಸಹಾಯಕರು, ಬಡವರು ಹಾಗೂ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಸಂಕಲ್ಪ ವಿದ್ದರೆ ಸಾಕು. ಜೀವನದ ಕೊನೆಯ ಉಸಿರಿರುವವರೆಗೂ ಕ್ಷೇತ್ರದ ಜನರೊಂದಿಗೆ ನಿಂತು ಸೇವೆ ಸಲ್ಲಿಸುತ್ತೇನೆ ಎಂದರು.
ಮಹಿಳೆಯರನ್ನು ಗೌರವಿಸುವುದಷ್ಟೇ ಅಲ್ಲದೆ, ಅವರ ಕುಟುಂಬಗಳ ಸಂಕಷ್ಟಕ್ಕೂ ಸ್ಪಂದಿಸುವುದು ತಮ್ಮ ಉದ್ದೇಶ. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವುದರ ಜತೆಗೆ ಭ್ರೂಣಹತ್ಯೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಪ್ರತಿ ವರ್ಷ ತಮ್ಮ ಜನ್ಮದಿನದಂದು ‘ನಾರೀ ಸೇವಾ ನಮನ’ ಕಾರ್ಯಕ್ರಮ ಮುಂದುವರಿಸಲಾಗುವುದು.ಚುನಾವಣೆಗೆ ನಿಲ್ಲುವುದು ಖಚಿತ,ಗೆದ್ದೇಗೆಲ್ಲುತ್ತೇನೆ ಎಂಬ ಹುಂಬತನವಿಲ್ಲ, ನನಗಿಂತ ಉತ್ತಮರಿದ್ದರೆ ಅವರಿಗೆ ಮತಹಾಕಿ ಎಂದು ತಿಳಿಸಿದರು.
ತಮ್ಮ ಸಂಪಾದನೆಯ ಶೇ.10ರಷ್ಟನ್ನು ಸ್ವಂತಕ್ಕೆ ಬಳಸಿಕೊಂಡು ಶೇ.೯೦ರಷ್ಟನ್ನು ಸಮಾಜಕ್ಕೆ ಮೀಸಲಿಡುವ ಸಂಕಲ್ಪ ಹೊಂದಿದ್ದೇನೆ. ಜೇಬಿನಲ್ಲಿ ಒಂದು ಪೈಸೆ ಇರುವವರೆಗೂ ಸೇವಾ ಕಾರ್ಯ ನಿಲ್ಲುವುದಿಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಚಿಕ್ಕಬಳ್ಳಾಪುರವನ್ನು ಗೆಲ್ಲಿಸುವುದೇ ತಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ತಾಯಂದಿರಿಗೆ ಬಾಗಿನ ನೀಡಿ ಗೌರವಿಸಲಾಯಿತು. ಸುಮಾರು ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಎಸ್ಎಸ್ಡಿ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ದಿಬ್ಬೂರಿ ಜಯಣ್ಣ, ಸುಷ್ಮಾ ಶ್ರೀನಿವಾಸ್, ಬಾಲಕೃಷ್ಣ, ಸುಹಾಸ್, ಹರ್ಷ, ಶ್ರೀಕಾಂತ್, ತಾಳಹಳ್ಳಿ ಮಹೇಂದ್ರ, ನಿರೂಪಕ ಮಂಜುನಾಥ್, ಹರೀಶ್, ಮಧು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.