ಚಿಕ್ಕಬಳ್ಳಾಪುರ: ತಂತ್ರಜ್ಞಾನದ ಭರಾಟೆಯಲ್ಲಿ ಯುವಜನತೆ ನೈತಿಕ ಮೌಲ್ಯಗಳನ್ನು ಕಳೆದು ಕೊಳ್ಳದೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ ಸದ್ಬಳಕೆ ಮಾಡಿಕೊಳ್ಳಬೇಕು. ಮಾದಕ ವ್ಯಸನದಿಂದ ದೂರವಿದ್ದು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ(Bengaluru North University)ದ ಉಪಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯ ಪಟ್ಟರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ವತಿಯಿಂದ ಬಾಗೇಪಲ್ಲಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ 13ನೇ ರಾಷ್ಟ್ರೀಯ ಯುವ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿದ್ದ ‘ಮಾದಕ ವಸ್ತುಗಳ ವ್ಯಸನ, ನಿರುದ್ಯೋಗ–ಯುವಜನರ ಮುಂದಿರುವ ಸವಾಲುಗಳು’ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತ ಯುವ ರಾಷ್ಟ್ರವಾಗಿದ್ದು, ಯುವಜನತೆಯೇ ದೇಶದ ಬಹುದೊಡ್ಡ ಸಂಪತ್ತಾಗಿದೆ. ಯುವಕ ರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದರೆ ದೇಶದ ಭವಿಷ್ಯದ ಬೆಳಕು ನಂದುವ ಅಪಾಯವಿದೆ. ಬಡವರ ಕಣ್ಣೀರು ಒರೆಸುವ ಮಾನವೀಯ ಮನೋಭಾವವನ್ನು ಬೆಳೆಸಿಕೊಂಡು, ಜವಾಬ್ದಾರಿ ಯುತ ನಾಗರಿಕರಾಗಿ ರೂಪುಗೊಳ್ಳಬೇಕು.ಕಾನೂನು ಪಾಲನೆಯ ಜತೆಗೆ ಮಾದಕ ವಸ್ತುಗಳಿಂದ ದೂರವಿದ್ದು, ಶಿಕ್ಷಣ, ಕೌಶಲ್ಯ ಹಾಗೂ ಸಮಾಜಸೇವೆಯತ್ತ ಯುವಜನತೆ ಗಮನ ಹರಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರೈ ಮಾತನಾಡಿ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಜತೆಗೆ ಪೋಷಕರು, ಶಿಕ್ಷಕರು ಹಾಗೂ ಇಡೀ ಸಮಾಜ ಕೈ ಜೋಡಿಸಬೇಕು. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ವ್ಯಸನಕ್ಕೆ ಒಳಗಾದವರನ್ನು ದೂರ ಮಾಡುವ ಬದಲು ಅವರಿಗೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಮಹಾಮಾರಿ ತೊಲಗಿಸಬಹುದು ಎಂದರು.
ಶಿಕ್ಷಣ ತಜ್ಞ ಶ್ರೀಪಾದ ಭಟ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಅಂಕಗಳ ಹಿಂದೆ ಓಡುವುದಕ್ಕಿಂತ ಬದುಕನ್ನು ಅರ್ಥಮಾಡಿಕೊಳ್ಳುವ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ಅಗತ್ಯ. ಯುವಜನತೆ ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿ, ಉದ್ಯೋಗದ ಜತೆಗೆ ಸ್ವಾವಲಂಬನೆ ಹಾಗೂ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರೂ ಸಮಾಜದಲ್ಲಿ ಮೌಢ್ಯತೆ, ನಿರುದ್ಯೋಗ ಹಾಗೂ ಮಾದಕ ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ. ಯುವಜನರ ಬೌದ್ಧಿಕ ಶಕ್ತಿಯನ್ನು ಸಮರ್ಪಕವಾಗಿ ಬಳಸಿ ಕೊಳ್ಳಲು ಉದ್ಯೋಗಾಧಾರಿತ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಉದ್ಯೋಗ ಮತ್ತು ವ್ಯಾಪಾರವೇ ಜೀವನದ ಅಂತಿಮ ಗುರಿಯಲ್ಲ; ಬದುಕನ್ನು ರೂಪಿಸುವ ಶಿಕ್ಷಣದ ಜತೆಗೆ ಪರಿಸರ, ನೀರು, ಕೃಷಿ ಹಾಗೂ ಸಮಾಜದ ಸಮಸ್ಯೆಗಳ ಕುರಿತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ವ್ಯಸನಮುಕ್ತ ಸಮಾಜವನ್ನಾಗಿ ನಿರ್ಮಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ವೈದ್ಯ ಡಾ.ಅನಿಲ್ ಆವುಲಪ್ಪ ಮಾತನಾಡಿ, ವ್ಯಕ್ತಿವಾದದ ಚಿಂತನೆ ಗಿಂತ ಸಂಘಜೀವನದ ಮಹತ್ವವನ್ನು ಯುವಜನತೆ ಅರಿತುಕೊಳ್ಳಬೇಕು. ಶಿಕ್ಷಣಕ್ಕೂ ಮನುಷ್ಯರ ಬದುಕಿಗೂ ನೇರ ಸಂಬAಧವಿರಬೇಕು. ಮಾದಕ ವ್ಯಸನದಂತಹ ಸಮಸ್ಯೆಗಳನ್ನು ಕೇವಲ ಕಾನೂ ನಿನ ಮೂಲಕ ಮಾತ್ರ ಪರಿಹರಿಸಲು ಸಾಧ್ಯವಿಲ್ಲ; ಅದರ ಸಾಮಾಜಿಕ ಕಾರಣಗಳನ್ನು ಅರ್ಥ ಮಾಡಿಕೊಂಡು ವೈಜ್ಞಾನಿಕ ಹಾಗೂ ಸಾಮಾಜಿಕ ಚಿಂತನೆ ಬೆಳೆಸಬೇಕಿದೆ. ವಿದ್ಯಾರ್ಥಿ ಯುವ ಜನತೆ ತಪ್ಪದೆ ಆಲ್ಬರ್ಟ್ ಐನ್ʼಸ್ಟೈನ್ ಬರೆದ ವೈ ಸೋಸಿಯಸಂ ಲೇಖನ ಓದಲೇಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಡ್ರಗ್ಸ್ ಸೇವನೆಯ ಅಪಾಯದ ಬಗ್ಗೆ ಕಿರು ಚಿತ್ರದ ಮೂಲಕ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ರೈತರ ಸಂಘದ ಭಕ್ತರಹಳ್ಳಿ ಬೈರೇಗೌಡ,ಸುಧಾ ವೆಂಕಟೇಶ್, ವಕೀಲ ಕೆ.ಎಂ.ಮುನೇಗೌಡ, ಹಿತ್ತಲಹಳ್ಳಿ ರಮೇಶ್, ನಗರಸಭಾ ಮಾಜಿ ಸದಸ್ಯೆ ಅಣ್ಣೆಮ್ಮ, ಕೆಪಿಆರ್‌ಎಸ್ ಮಾಜಿ ಅಧ್ಯಕ್ಷ ಎನ್.ಎನ್.ಶ್ರೀರಾಮ್,ವಕೀಲ ಆರ್.ಮಟಮಪ್ಪ,ರಾಜಾಕಾಂತ್,ಎA.ಪಿ ಮುನಿವೆಂಕಟಪ್ಪ ಡಿವೈಎಫ್‌ಐ ಜಿಲ್ಲಾದ್ಯಕ್ಷ ರಾಜಶೇಖರ್ ಕಾರ್ಯದರ್ಶಿ ಹರೀಶ್, ಹಳ್ಳಿಮಕ್ಕಳ ಸಂಘದ ಉಪಾದ್ಯಕ್ಷ ವಂಕಟರವಣಪ್ಪ ಕಲಾವಿದ ಜನಗಾನ ವೆಂಕಟರಾಮ್, ಮುನಿಕೃಷ್ಣಪ್ಪ,ಸೋಮಶೇಖರ್, ಬಸವರಾಜ್ ಪೂಜಾರ್, ಚೆನ್ನರಾಯಪ್ಪ, ಕೆ.ಎಸ್.ನಾರಾಯಣಸ್ವಾಮಿ, ಸಿದ್ದಗಂಗಪ್ಪ, ಲಕ್ಷ್ಮೀ ನಾರಾಯಣರಡ್ಡಿ,ಸುರೇಶ್, ಮುನಿರಾಜು ಎಂ ಅರಿಕೆರೆ ಇತರರು ಹಾಜರಿದ್ದರು.