ಚಿಕ್ಕಬಳ್ಳಾಪುರ: ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವುದೇ ನನಗೆ ಆತ್ಮತೃಪ್ತಿ ನೀಡುವ ಕೆಲಸ. ಅಧಿಕಾರ ಶಾಶ್ವತವಲ್ಲ; ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಮನಸ್ಸಿನಲ್ಲಿ ಉಳಿಯುವುದೇ ಮುಖ್ಯ ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಹೇಳಿದರು.
ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಸುಮಾರು 150 ಮನೆಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ ಅವರು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕುಡಿಯುವ ನೀರು, ಮನೆಗಳ ಮೇಲಿನ ವಿದ್ಯುತ್ ತಂತಿಗಳ ಸಮಸ್ಯೆ ಹಾಗೂ ವೃದ್ಧಾಪ್ಯ ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಪರಿಹಾರ ಕಲ್ಪಿಸಲು ಮುಂದಾದರು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದ ಉದ್ಘಾಟನೆಗೆ ಸಿದ್ಧತೆ ನಡೆದಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕ್ಷೇತ್ರದ 400 ಹಳ್ಳಿಗಳಿಗೆ ಭೇಟಿ ನೀಡುವ ಸಂಕಲ್ಪ ಮಾಡಿದ್ದು, ಈಗಾಗಲೇ 300ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಬೆಳಗಿನ ಜಾವವೇ ಗ್ರಾಮಗಳಿಗೆ ತೆರಳಿ ಜನರು ಎಚ್ಚರಗೊಳ್ಳುವ ಮೊದಲೇ ಅವರ ಊರಿನಲ್ಲಿರಲು ಪ್ರಯತ್ನಿಸುತ್ತೇನೆ. ಮನೆಮನೆಗೆ ಭೇಟಿ ನೀಡಿದಾಗ ಮಾತ್ರ ಜನರ ನೈಜ ಸಮಸ್ಯೆಗಳು ತಿಳಿಯುತ್ತವೆ. ಸಭೆಗಳಿಗೆ ಹಾಜರಾಗುವುದಕ್ಕಿಂತ ಜನರನ್ನು ನೇರವಾಗಿ ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸುವುದರಲ್ಲಿ ನನಗೆ ಹೆಚ್ಚು ನಂಬಿಕೆ ಇದೆ ಎಂದರು.
ಇದನ್ನೂ ಓದಿ: MLA Pradeep Eshwar: ಒಕ್ಕಲಿಗರ ಬೆಂಬಲ ಮರೆತು ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ: ರಘುನಾಥ ರೆಡ್ಡಿ ಆಕ್ರೋಶ
ಹಳ್ಳಿಗಳಿಗೆ ಭೇಟಿ ನೀಡಿದಾಗ ರಸ್ತೆ ನಿರ್ಮಾಣ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳು ಕೇಳಿ ಬರುತ್ತವೆ. ಮುಂದಿನ ಆರು ತಿಂಗಳೊಳಗೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಯೋಜನೆ ರೂಪಿಸುತ್ತೇನೆ. ಅನುದಾನವನ್ನು ಹೇಗೆ ಪಡೆಯಬೇಕು, ಸಚಿವರ ಮನವೊಲಿಸಿ ಕ್ಷೇತ್ರಕ್ಕೆ ಅಗತ್ಯ ನೆರವು ತರುವುದು ಹೇಗೆ ಎಂಬುದರ ಬಗ್ಗೆಯೇ ಸದಾ ಚಿಂತಿಸುತ್ತೇನೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸುವುದೇ ನನ್ನ ಉದ್ದೇಶ ಎಂದು ಹೇಳಿದರು.
ಗ್ರಾಮೀಣ ಜನರು, ವಿಶೇಷವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರು ಹಾಗೂ ಅನಾಥ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನರೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ಅವರ ಸಂಕಷ್ಟಗಳ ಅರಿವಾಗುತ್ತಿದೆ. ಅಧಿಕಾರ ತಾತ್ಕಾಲಿಕ ವಾಗಿದ್ದು, ಜನರ ಸೇವೆಯಿಂದ ದೊರೆಯುವ ಆತ್ಮತೃಪ್ತಿಯೇ ಮುಖ್ಯ ಎಂದರು.
ಖಾತರಿ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ರಾಜ್ಯ ಸರ್ಕಾರದ ಖಾತರಿ ಯೋಜನೆಗಳಿಗೆ ಬಜೆಟ್ನಲ್ಲೇ ಅನುದಾನ ಮೀಸಲಿಡಲಾಗಿದೆ. ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ನೇರವಾಗಿ ಹಣ ನೀಡಲಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸ್ಮಶಾನ, ನಿವೇಶನ, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಗಳು ಮುಂದುವರಿದಿವೆ. ಮನೆಮನೆಗೆ ಭೇಟಿ ನೀಡಿದಾಗ ಇಂತಹ ಸಮಸ್ಯೆಗಳು ತಿಳಿಯುತ್ತವೆ. ಅವುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರಿಗೆ ಮತ ನೀಡಿದ ಎಲ್ಲ ಮತದಾರರಿಗೂ ಧನ್ಯವಾದ ಸಲ್ಲಿಸಿದ ಅವರು, ಹಣದ ಆಮಿಷವೊಡ್ಡಿ ಚುನಾವಣೆ ಗೆಲ್ಲುವ ಪ್ರಯತ್ನವನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ನಾವು ಪಾರದರ್ಶಕ ವಾಗಿ, ಯಾವುದೇ ಹಣದ ಆಮಿಷವೊಡ್ಡದೆ ಚುನಾವಣೆ ಎದುರಿಸಿದ್ದೇವೆ ಎಂದು ಹೇಳಿದರು.