ಚಿಂತಾಮಣಿ: ಸಾಹಿತ್ಯ ಕೇವಲ ಮನರಂಜನೆಯ ಸಾಧನವಾಗಬಾರದು. ಅದು ಬದುಕಿನೊಳಗೆ ಇಳಿದು ಜನರ ನೋವನ್ನು ಅನುಭವಿಸಬೇಕು, ಅನ್ಯಾಯವನ್ನು ಪ್ರಶ್ನಿಸಬೇಕು ಹಾಗೂ ಬದುಕಿನ ಸೌಂದರ್ಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahally Shivaprasad) ಪ್ರತಿಪಾದಿಸಿದರು.
ತಮ್ಮನ್ನು ಗುರುತಿಸಿ ಜಿಲ್ಲಾ ಮಟ್ಟದ 11ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಈ ನೆಲದ ಕಥೆಗಳು, ಹಾಡುಪಾಡು, ಮಾತುಮಂಥನ, ಸಭೆ-ಸಮಾರಂಭ, ಚಳವಳಿ ಮತ್ತು ಹೋರಾಟಗಳೇ ತಮ್ಮ ವ್ಯಕ್ತಿತ್ವ ರೂಪಿಸಿವೆ ಎಂದರು.
ಸ್ವತಂತ್ರ ಭಾರತದಲ್ಲಿಯೂ ನವವಸಾಹತುಶಾಹಿ ಪ್ರಭಾವಗಳು ಬದುಕಿನ ಮೇಲೆ ಹಿಡಿತ ಸಾಧಿಸುತ್ತಿವೆ. ಅವುಗಳ ನೆರಳಿನಿಂದ ಹೊರಬಂದು ಕನ್ನಡ ಭಾಷೆ ಮತ್ತು ನೆಲದ ಅಸ್ಮಿತೆಯನ್ನು ಉಳಿಸಬೇಕಿದೆ. ಸಾಹಿತ್ಯ, ನೃತ್ಯ, ನಾಟಕ, ಕಥೆ, ಕಾವ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಅಕ್ಷರ ಜಾತ್ರೆಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜಮುಖಿ ಚಿಂತನೆಗೆ ವೇದಿಕೆಯಾಗ ಬೇಕು. ಹಾಡು, ಕುಣಿತ, ಕವಿಗೋಷ್ಠಿ, ಚರ್ಚೆ ಎಲ್ಲವೂ ಸಮಾಜದ ಹಿತದೃಷ್ಟಿಯಿಂದ ಸಾಗಬೇಕು. ಪ್ರಕೃತಿಯೇ ನಮ್ಮ ಧರ್ಮವಾಗಬೇಕು. ನಿಸರ್ಗದ ನಿಯಮಗಳಿಗೆ ಅನುಗುಣವಾಗಿ ಬದುಕಬೇಕು. ಆಹಾರ, ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣಗೊಳ್ಳಬಾರದು ಎಂದು ಆಶಿಸಿದರು.
ಸಾಹಿತ್ಯವೆಂದರೆ ಬದುಕಿನ ಹೊರಗೆ ನಿಂತು ಅದನ್ನು ವರ್ಣಿಸುವ ಕಲೆಯಲ್ಲ. ಬದುಕಿನೊಳಗೆ ಇಳಿದು ಅದರ ನೋವು, ಅನ್ಯಾಯವನ್ನು ಅನುಭವಿಸಿ ಪ್ರಶ್ನಿಸುವುದರ ಜತೆಗೆ ಸೌಂದರ್ಯವನ್ನು ಉಳಿಸುವ ಹೊಣೆಗಾರಿಕೆ. ಕವಿಯ ಕಣ್ಣಿಗೆ ಹೂವು ಕಾಣುವಂತೆ ಮಣ್ಣೂ ಕಾಣಬೇಕು; ಮಳೆಯ ಹನಿಯ ಜತೆಗೆ ಬಿರುಕುಬಿಟ್ಟ ರೈತನ ಹೊಲವೂ ಕಾಣಬೇಕು. ಆಗ ಮಾತ್ರ ಸಾಹಿತ್ಯ ಮತ್ತು ಸಾಹಿತಿಗೆ ನಿಜವಾದ ಬೆಲೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆರೆಗಳು ಕೇವಲ ನೀರು ಸಂಗ್ರಹಿಸುವ ಸ್ಥಳಗಳಲ್ಲ. ಅವು ರೈತರ ಬದುಕಿನ ಆಸರೆ, ದನಕರುಗಳ ದಾಹ ನೀಗಿಸುವ ತಾಣ, ಪಕ್ಷಿಗಳ ಆಶ್ರಯ, ಜಲಚರಗಳ ನೆಲೆ ಹಾಗೂ ಅಂತರ್ಜಲದ ಭಂಡಾರ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಒಪ್ಪಂದದ ಪ್ರತೀಕಗಳಾಗಿವೆ. ಹಿರಿಯರು ಕೆರೆಯನ್ನು ದೇವರೆಂದು ನಂಬಿದ್ದಕ್ಕೆ ಕಾರಣ, ಕೆರೆಯಲ್ಲಿಯೇ ಅವರ ಬದುಕು ಅಡಗಿತ್ತು. ಇಂದು ಚಂದ್ರನಲ್ಲಿಗೆ ಹೋಗುವ ತಂತ್ರಜ್ಞಾನ ಹೊಂದಿದ್ದರೂ ನಮ್ಮೂರ ಕೆರೆಗೆ ನೀರು ತರುವ ಮಾರ್ಗ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆರೆಗಳನ್ನು ಉಳಿಸುವುದೆಂದರೆ ಕೃಷಿಯನ್ನು ಉಳಿಸುವುದು; ಕೆರೆಗಳ ನಾಶದಿಂದ ನೀರಿನ ಜತೆಗೆ ಸಾಮಾಜಿಕ ಸಂಬಂಧಗಳನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾತಿ, ಧರ್ಮ, ಭಾಷೆ, ಪ್ರದೇಶ, ದೇಶ ಹಾಗೂ ರಾಜಕೀಯ ನಿಲುವುಗಳ ಆಧಾರದಲ್ಲಿ ಮನುಷ್ಯರನ್ನು ಗುರುತಿಸುವ ಬದಲು ನೆಲವೇ ನಮ್ಮ ಕುಲವಾಗಲಿ, ಪ್ರಕೃತಿಯೇ ನಮ್ಮ ಧರ್ಮವಾಗಲಿ, ಜೀವ ಪ್ರೀತಿಯೇ ನಮ್ಮ ಸಂಸ್ಕೃತಿಯಾಗಲಿ. ಪ್ರಕೃತಿಯಂತೆ ಸಹಬಾಳ್ವೆ ನಮ್ಮ ಉಸಿರಾಗಲಿ ಎಂದು ಕರೆ ನೀಡಿದರು.
ಮಕ್ಕಳಿಗೆ ಆಮಿಷಗಳಿಲ್ಲದ, ಮುಕ್ತ ಮತ್ತು ಸೃಜನಶೀಲ ಜಗತ್ತನ್ನು ನೀಡುವ ತುರ್ತು ಅಗತ್ಯವಿದೆ. ಅವರ ಮನಸ್ಸು ಹಸಿಯಾದ ಮಣ್ಣಿನಂತಿದ್ದು, ನಾವು ಬಿತ್ತುವ ಬೀಜವೇ ಮುಂದಿನ ಫಸಲಾಗುತ್ತದೆ. ಮಕ್ಕಳಲ್ಲಿ ಕುತೂಹಲ ಬೆಳೆಸುವ ಬದಲು ಸ್ಪರ್ಧೆಯ ಒತ್ತಡ, ಸೃಜನಶೀಲತೆಯ ಬದಲು ಅಂಕಗಳ ಭ್ರಮೆ, ಹಣ, ಹೆಸರು ಮತ್ತು ಅಧಿಕಾರದ ಆಕರ್ಷಣೆಯನ್ನು ತುಂಬುತ್ತಿದ್ದೇವೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಣ ತಜ್ಞರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಜನಪದ ಜ್ಞಾನವನ್ನು ವಿಶ್ವವಿದ್ಯಾಲಯಗಳ ಪದವಿ ಪ್ರಮಾಣಪತ್ರಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಜನಪದವನ್ನು ಉಳಿಸುವುದೆಂದರೆ ಜನರ ನೆನಪುಗಳನ್ನು ಉಳಿಸುವುದು. ತಮಟೆ, ನಗಾರಿ, ಡೊಳ್ಳು, ಕೊಳಲು, ಕಹಳೆ, ಅರೇವಾದ್ಯ, ಮುಖವೀಣೆ, ತೊಗಲುಗೊಂಬೆಯಾಟ, ಕೋಲಾಟ, ಭಜನೆ ಹಾಗೂ ತತ್ವಪದಗಳು ನಮ್ಮ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿವೆ. ಇವುಗಳನ್ನು ಪ್ರದರ್ಶನದ ವಸ್ತುಗಳಂತೆ ನೋಡದೆ ಬದುಕಿನ ಭಾಗವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ತಂತ್ರಜ್ಞಾನ ಬೆಳೆದಂತೆ ಮಾಹಿತಿ ಹೆಚ್ಚಾಗಿದೆ. ಆದರೆ ಅಷ್ಟೇ ವೇಗದಲ್ಲಿ ವಿವೇಕವೂ ಬೆಳೆದಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಪದಗಳನ್ನು ಬರೆಯುತ್ತಿದ್ದೇವೆ. ಆದರೆ ಸಹಜೀವಿಗಳ ನೋವನ್ನು ಆಲಿಸುವ ವ್ಯವಧಾನ ಕಡಿಮೆಯಾಗುತ್ತಿದೆ. ಈ ವ್ಯವಧಾನವನ್ನು ಬೆಳೆಸುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದರು.
ಗ್ರಾಮೀಣ ಬದುಕಿನ ಬಹುದೊಡ್ಡ ಶಕ್ತಿಯಾಗಿರುವ ಮಹಿಳೆಯರ ಶ್ರಮಕ್ಕೆ ತಕ್ಕ ಗೌರವ ಇನ್ನೂ ದೊರೆತಿಲ್ಲ. ಮನೆ ಜವಾಬ್ದಾರಿಯ ಜತೆಗೆ ಕೃಷಿ, ಪ್ರಾಣಿಗಳ ಆರೈಕೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುವ ಮಹಿಳೆಯರ ಬದುಕನ್ನು ಪ್ರೀತಿ, ತ್ಯಾಗ ಮತ್ತು ತಾಯ್ತನಕ್ಕೆ ಮಾತ್ರ ಸೀಮಿತ ಗೊಳಿಸಬಾರದು. ಎಲ್ಲ ಕಾಲಕ್ಕೂ ಅವರು ಗೌರವ ಮತ್ತು ಆದರಣೆಗೆ ಅರ್ಹರು ಎಂದು ಹೇಳಿದರು.
ಜಿಲ್ಲೆಯ ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜಿನಪ್ಪ, ತಾವರೆಕೆರೆ ರಾಮಾವಧೂತ, ವೀರದಾಸಮ್ಮ ಸೇರಿದಂತೆ ತತ್ವಪದಕಾರರ ಪ್ರಕಟಿತ ಸಾಹಿತ್ಯವನ್ನು ಜನರಿಗೆ ತಲುಪಿಸಬೇಕು. ಜನಪದ ಕಲಾವಿದರ ಮೌಖಿಕ ಜ್ಞಾನ, ಹಾಡು, ವಾದ್ಯ ಮತ್ತು ಕಲಾಪ್ರಕಾರಗಳನ್ನು ಧ್ವನಿ ಹಾಗೂ ದೃಶ್ಯ ರೂಪದಲ್ಲಿ ದಾಖಲಿಸಬೇಕು. ಸ್ಥಳೀಯ ಭಾಷೆ, ಗಾದೆ, ಒಗಟು, ಕಥೆ, ಕೃಷಿ ಜ್ಞಾನ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಸಂಗ್ರಹಿಸಲು ಜಿಲ್ಲಾ ಮಟ್ಟದ ದಾಖಲೀಕರಣ ಕೇಂದ್ರ ಸ್ಥಾಪಿಸಲು ಪ್ರಯತ್ನಿಸ ಬೇಕು. ಮಹಿಳೆಯರು ಮತ್ತು ಅಂಚಿನ ಸಮುದಾಯಗಳ ಸೃಜನಶೀಲ ಅಭಿವ್ಯಕ್ತಿಗೆ ಸಾಹಿತ್ಯ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
೧೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಶಾಸಕ ಡಾ. ಎಂ.ಸಿ. ಸುಧಾಕರ್, ಜಿಲ್ಲಾಧಿಕಾರಿ ಜಿ. ಪ್ರಭು, ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ, ಉಪವಿಭಾಗಾಧಿಕಾರಿ ಆರ್. ಶೋಭಿತ, ತಹಶೀಲ್ದಾರ್ ಸುದರ್ಶನ್ ಯಾದವ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಡಯಟ್ ಪ್ರಾಚಾರ್ಯ ವೆಂಕಟೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್, ನಗರಸಭೆ ಪೌರಾಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ, ಗ್ರೇಡ್-೨ ತಹಶೀಲ್ದಾರ್ ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಎನ್.ವಿ. ಶ್ರೀನಿವಾಸ್, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ಬಾಬು, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಪಿಡಿಒ ಸಂಘದ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್ ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.