ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮದ ಯುವಕ ರಾಕೇಶ್ ಎಂ. ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡೆ(National level athletic sports) ಯಲ್ಲಿ ಬೆಳ್ಳಿ ಪದಕ ಗೆದ್ದು ಕ್ಷೇತ್ರಕ್ಕೆ ಗೌರವ ತಂದಿದ್ದಾರೆ. ಪಂಜಾಬ್ ರಾಜ್ಯದ ತಲ್ವಾಂಡಿ ಸಾಬೊದಲ್ಲಿರುವ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ನಡೆದ 45ನೇ ರಾಷ್ಟ್ರೀಯ ಮಾಜಿ ಸೈನಿಕರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ರಾಕೇಶ್ ಎಂ ಭಾಗವಹಿಸಿ ಗುಂಡು ಎಸೆತ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Shidlaghatta News: ಮಳ್ಳೂರು ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮ
ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಕೇಶ್ ಎಂ ಯಾವುದೇ ವಿಶೇಷ ತರಬೇತಿ ಇಲ್ಲದೆ ರಾಷ್ಟ್ರಮಟ್ಟ ದಲ್ಲಿ ಉತ್ತಮ ಸಾಧನೆ ಮಾಡಿರುವುದು ವಿಶೇಷವಾಗಿದೆ. ಕೇವಲ ಆರು ಇಂಚಿನ ಅಂತರ ದಲ್ಲಿ ಪ್ರಥಮ ಸ್ಥಾನ ತಪ್ಪಿಸಿಕೊಂಡರೂ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದು ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.
ಈ ಸಾಧನೆ ಕುರಿತು ಮಾತನಾಡಿದ ರಾಕೇಶ್ ಎಂ, ನನ್ನ ಗೆಲುವಿಗೆ ತಂದೆ-ತಾಯಿ ಆಶೀರ್ವಾದವೇ ಮುಖ್ಯ ಕಾರಣ. ಜೊತೆಗೆ ಕ್ಷೇತ್ರದ ಶಾಸಕ ಬಿ ಎನ್ ರವಿಕುಮಾರ್ ಅವರ ಸಲಹೆ ಹಾಗೂ ಪ್ರೋತ್ಸಾಹವೂ ನನ್ನ ಸಾಧನೆಗೆ ಸಹಾಯವಾಗಿದೆ” ಎಂದು ತಿಳಿಸಿದ್ದಾರೆ.
ರಾಕೇಶ್ ಅವರ ಈ ಸಾಧನೆ ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಹಾಗೂ ಜಿಲ್ಲೆಗೆ ಗೌರವ ತಂದಿರುವ ಸಾಧನೆ ಎಂದು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.