ಚಿಕ್ಕಬಳ್ಳಾಪುರ, ಅ. 17: ವಿಶ್ವಶಾಂತಿ ಮತ್ತು ಸಮೃದ್ಧಿಯನ್ನು ಸಂಕಲ್ಪವಾಗಿಸಿಕೊಂಡು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Satya Sai Village) ಅಕ್ಟೋಬರ್ 18ರಿಂದ 21ರವರೆಗೆ ನಾಲ್ಕು ದಿನಗಳ ಮಹಾರುದ್ರ ಯಾಗ ನಡೆಯಲಿದೆ. ಸತ್ಯ ಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ನಡೆಯಲಿರುವ ಯಾಗವು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ (Sadguru Sri Madhusudan Sai) ಸಾನ್ನಿಧ್ಯದಲ್ಲಿ ಜರುಗಲಿದೆ. ಅಕ್ಟೋಬರ್ 18ರಿಂದ 21ರವರೆಗೆ ನಡೆಯುತ್ತಿರುವ ನವರಾತ್ರಿ ಹೋಮ, ದುರ್ಗಾ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಭಾಗವಾಗಿ ಮಹಾರುದ್ರ ಯಾಗವನ್ನು ಆಯೋಜಿಸಲಾಗಿದೆ.
ಶಿವನ ಆರಾಧನೆಗೆ ವಿಶೇಷ ಮಹತ್ವ ಹೊಂದಿರುವ ಈ ಯಾಗದಲ್ಲಿ ರುದ್ರ ಪಾರಾಯಣ, ರುದ್ರಾಭಿಷೇಕ, ರುದ್ರ ಹೋಮ, ಮೃತ್ಯುಂಜಯ ಹೋಮ ಹಾಗೂ ಸಾಯಿ ಗಾಯತ್ರಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಪ್ರತಿದಿನ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳು
ಅಕ್ಟೋಬರ್ 18ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 6.30ಕ್ಕೆ ಅರುಣ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ 7.15ಕ್ಕೆ ಮಹಾನ್ಯಾಸ ಪಾರಾಯಣ, 7.45ಕ್ಕೆ ಪಂಚಾಮೃತ ಅಭಿಷೇಕ ಹಾಗೂ 8 ಗಂಟೆಗೆ ರುದ್ರ ಪಾರಾಯಣ ಮತ್ತು ರುದ್ರಾಭಿಷೇಕ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ರುದ್ರ ಹೋಮ, ಮೃತ್ಯುಂಜಯ ಹೋಮ ಮತ್ತು ಸಾಯಿ ಗಾಯತ್ರಿ ಹೋಮ ನೆರವೇರಲಿದ್ದು, 11.30ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಸಂಜೆ 4 ಗಂಟೆಗೆ ಕ್ರಮಾರ್ಚನೆ ಮತ್ತು ಘನಪಾಠ ನಡೆಯಲಿದ್ದು, ಸಂಜೆ 5 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.
ರಾಜಕಾರಣಿಗಳಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರೇರಣೆ: ಎಚ್.ಡಿ. ಕುಮಾರಸ್ವಾಮಿ
ಅ. 21ರಂದು ಮಹಾಪೂರ್ಣಾಹುತಿ
ವಿಜಯದಶಮಿಯ ದಿನವಾದ ಅಕ್ಟೋಬರ್ 21ರಂದು ಬೆಳಗ್ಗೆ 5.30ಕ್ಕೆ ಮಂಗಳವಾದ್ಯಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ 6.30ಕ್ಕೆ ಅರುಣ ಪಾರಾಯಣ, ಮಹಾನ್ಯಾಸ ಪಾರಾಯಣ, ರುದ್ರ ಪಾರಾಯಣ ಮತ್ತು ರುದ್ರಾಭಿಷೇಕ ನಡೆಯಲಿವೆ. 10 ಗಂಟೆಗೆ ರುದ್ರ ಹೋಮ, ಸಾಯಿ ಗಾಯತ್ರಿ ಹೋಮ ಹಾಗೂ ಮಹಾಪೂರ್ಣಾಹುತಿ ನೆರವೇರಲಿವೆ. 11.15ಕ್ಕೆ ಅಗ್ನಿ ಸಂಯೋಜನೆ, ಕುಂಭಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಯಾಗದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ. ಯಾಗದ ಮೂಲಕ ಲೋಕಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವುದು ಕಾರ್ಯಕ್ರಮದ ಪ್ರಮುಖ ಆಶಯ.