ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜಕಾರಣಿಗಳಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರೇರಣೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

HD Kumaraswamy: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರವನ್ನೂ ಒದಗಿಸಬೇಕು ಎಂಬುದು ತಮ್ಮ ಕನಸಾಗಿತ್ತು. ಆದರೆ, ದೀರ್ಘಾವಧಿಯ ಅಧಿಕಾರಾವಕಾಶ ದೊರೆಯದ ಕಾರಣ ಆ ಕನಸನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಿಸ್ವಾರ್ಥ ಸೇವೆಯ ಮೂಲಕ ಆ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರೇರಣೆ: ಎಚ್‌ಡಿಕೆ

-

Profile
Siddalinga Swamy Oct 15, 2026 10:59 PM

ಚಿಕ್ಕಬಳ್ಳಾಪುರ, ಅ.15: ರಾಜಕಾರಣಿಗಳ ಭಾಷಣಗಳಿಗೆ ಸೀಮಿತವಾಗಿರುವ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲುʼ ಪರಿಕಲ್ಪನೆ ಮುದ್ದೇನಹಳ್ಳಿಯಂಥ ಪುಟ್ಟ ಗ್ರಾಮದಲ್ಲಿ ಸಾಕಾರಗೊಳ್ಳುತ್ತಿದೆ. ನಿಸ್ವಾರ್ಥ ಸೇವೆಯ ಮೂಲಕ ಶಿಕ್ಷಣ, ಪೌಷ್ಟಿಕತೆ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕ್ಕೆ ಶ್ರಮಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸರ್ಕಾರಗಳು ಮತ್ತು ರಾಜಕಾರಣಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರವನ್ನೂ ಒದಗಿಸಬೇಕು ಎಂಬುದು ತಮ್ಮ ಕನಸಾಗಿತ್ತು. ಆದರೆ, ದೀರ್ಘಾವಧಿಯ ಅಧಿಕಾರಾವಕಾಶ ದೊರೆಯದ ಕಾರಣ ಆ ಕನಸನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಿಸ್ವಾರ್ಥ ಸೇವೆಯ ಮೂಲಕ ಆ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

HD Kumaraswamy

ʼಒಂದು ಜಗತ್ತು, ಒಂದು ಕುಟುಂಬʼ ಎಂಬ ಧ್ಯೇಯದೊಂದಿಗೆ ಸದ್ಗುರು ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳನ್ನು ಪಸರಿಸುತ್ತಿದ್ದಾರೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಆಶಯ ಮತ್ತು ಅನುಗ್ರಹದೊಂದಿಗೆ ಮಾನವೀಯ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಲಕ್ಷಾಂತರ ಕುಟುಂಬಗಳ ಪೌಷ್ಟಿಕಾಂಶದ ಕೊರತೆ ನೀಗಿಸುವ ಕಾರ್ಯ ನಿಜಕ್ಕೂ ಪವಾಡದಂತಿದೆ ಎಂದು ಬಣ್ಣಿಸಿದರು.

ಸರ್ಕಾರಿ ಶಾಲೆಗಳ ಸ್ಥಿತಿ ಹಲವು ಕಡೆಗಳಲ್ಲಿ ಕಳವಳಕಾರಿಯಾಗಿರುವ ಸಂದರ್ಭದಲ್ಲಿ, ಎಲ್ಲರಿಗೂ ಸಮಾನ ಶಿಕ್ಷಣ ಒದಗಿಸುವ ಸದ್ಗುರುಗಳ ಪರಿಕಲ್ಪನೆ ಶ್ಲಾಘನೀಯ. ಜಗತ್ತಿನಲ್ಲಿ ಅಸೂಯೆ ಮತ್ತು ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಕಾಣುವ ವಿಶಾಲ ದೃಷ್ಟಿಕೋನ ಸಾಮಾನ್ಯವಾದುದಲ್ಲ ಎಂದರು.

ದೇಶಗಳ ನಡುವೆ ಅನಾರೋಗ್ಯಕರ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ, ನಿಸ್ವಾರ್ಥ ಸೇವೆಯ ಮೂಲಕ ಜನರನ್ನು ಒಗ್ಗೂಡಿಸುವ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಕಾರ್ಯ ಮಾದರಿಯಾಗಿದೆ. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತವೆ ಎಂದು ಹೇಳಿದರು.

ಸಮಾಜ, ಸರ್ಕಾರ, ಸಂಸ್ಥೆಗಳು ಒಗ್ಗೂಡಿದರೆ ಅದ್ಭುತ ಸಾಧನೆ ಸಾಧ್ಯ

‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, “ನಮ್ಮಿಂದ ಸಾಧ್ಯವಾಗದ ಕೆಲಸವನ್ನು ನಿಮ್ಮ ಸಂಸ್ಥೆ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಮಾತು ಅವರ ಔದಾರ್ಯವನ್ನು ತೋರಿಸುತ್ತದೆ. ಈ ಎಲ್ಲ ಸಾಧನೆಗಳ ಹಿಂದೆ ದೇವರ ಅನುಗ್ರಹವಿದೆ” ಎಂದರು.

ಸಮಾಜ, ಸರ್ಕಾರ ಮತ್ತು ಸೇವಾ ಸಂಸ್ಥೆಗಳು ಪರಸ್ಪರ ಕೈಜೋಡಿಸಿದಾಗ ದೇಶದಲ್ಲಿ ಅನೇಕ ಅದ್ಭುತಗಳನ್ನು ಸೃಷ್ಟಿಸಬಹುದು. ಈ ಮೂರೂ ಶಕ್ತಿಗಳು ಒಗ್ಗೂಡಿದಾಗ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯರು ಒಂದೆಡೆ ಸೇರಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯರ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಕೀಳರಿಮೆ ಮೂಡಿಸುವಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಯಶಸ್ವಿಯಾಯಿತು. ಆದರೆ, ಭಾರತೀಯತೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಶಿಕ್ಷಣ ನೀಡಲು ತಮ್ಮ ಸಂಸ್ಥೆ ಬದ್ಧವಾಗಿದೆ. ಆಧ್ಯಾತ್ಮಿಕ ಶಿಕ್ಷಣದ ಜತೆಗೆ ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಗೌರವ ಬೆಳೆಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಖ್ಯಾತ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಟೋಟಿ ಅವರಿಂದ ಅಮೃತಮಾಲಾ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಮಾತನಾಡಿದರು.